ಟಾಕ್ಸಿಕ್ ಚಿತ್ರದ ಹೊಸ ಟೀಸರ್​ಗೆ ನೆಟ್ಟಿಗರ ಆಕ್ರೋಶ: ಈ ದಶಕದಲ್ಲೇ ಅತ್ಯಂತ ಅಶ್ಲೀಲ ಟೀಸರ್ ಎಂದು ಟೀಕೆ! Toxic Teaser  
ಸಿನಿವಾಣಿ

ಟಾಕ್ಸಿಕ್ ಚಿತ್ರದ ಹೊಸ ಟೀಸರ್​ಗೆ ನೆಟ್ಟಿಗರ ಆಕ್ರೋಶ: ಈ ದಶಕದಲ್ಲೇ ಅತ್ಯಂತ ಅಶ್ಲೀಲ ಟೀಸರ್ ಎಂದು ಟೀಕೆ! Toxic Teaser

ಪ್ರಮುಖ ಮುಖ್ಯಾಂಶಗಳು

  • ಟಾಕ್ಸಿಕ್ ಟೀಸರ್​ ಝಲಕ್ ನೋಡಿ ಗರಂ ಆದ ನೆಟ್ಟಿಗರಿಂದ ಸೆನ್ಸಾರ್ ಮಂಡಳಿಗೆ ಕ್ಲಾಸ್
  • ಮಹಿಳಾ ನಿರ್ದೇಶಕಿ ಗೀತು ಮೋಹನ್‌ದಾಸ್ ವಿರುದ್ಧವೇ ನೆಟ್ಟಿಗರ ಆಟ್ಯಾಕ್
  • ಟೀಸರ್‌ನಲ್ಲಿ ಮಹಿಳಾ ಪಾತ್ರಗಳ ಬಿಂಬನೆಗೆ ಆನ್‌ಲೈನ್‌ನಲ್ಲಿ ತೀವ್ರ ವಿರೋಧ
  • ರಾಕಿಂಗ್ ಸ್ಟಾರ್ ಯಶ್ ಚಿತ್ರದ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ
Toxic Teaser : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೂ ಮುನ್ನವೇ ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಚಿತ್ರತಂಡ ಇಂದು (ಜುಲೈ 01) ಬಿಡುಗಡೆ ಮಾಡಿರುವ 'ಲೇಡೀಸ್ ಆಂಡ್ ಲೇಡೀಸ್' ಎಂಬ ಹೊಚ್ಚಹೊಸ ಟೀಸರ್ ಡಿಜಿಟಲ್ ಲೋಕದಲ್ಲಿ ಧೂಳೆಬ್ಬಿಸುತ್ತಿದ್ದು, ಆನ್‌ಲೈನ್‌ನಲ್ಲಿ ದೊಡ್ಡ ಮಟ್ಟದ ಪರ-ವಿರೋಧದ ಚರ್ಚೆ ಹಾಗೂ ವಿಶ್ಲೇಷಣೆಗಳಿಗೆ ಎಡೆಮಾಡಿಕೊಟ್ಟಿದೆ. ಯಶ್ ಅವರ ವಿಶಿಷ್ಟ ಶೈಲಿ ಮತ್ತು ವಿಭಿನ್ನ ಮೇಕಿಂಗ್‌ನಿಂದ ಗಮನ ಸೆಳೆದಿರುವ ಈ ಟೀಸರ್, ಸದ್ಯ ಸಿನಿಪ್ರಿಯರ ವಲಯದಲ್ಲಿ ತೀವ್ರ ಕುತೂಹಲ ಮೂಡಿಸುವುದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡಿಂಗ್ ಆಗಿದೆ.
ಬಿಡುಗಡೆಯಾಗಿರುವ ಟೀಸರ್​ ಪ್ರಮುಖವಾಗಿ ಚಿತ್ರದಲ್ಲಿನ ಮಹಿಳಾ ಪಾತ್ರಗಳಿಗೆ ಹೆಚ್ಚಿನ ಆದ್ಯತೆ ಹಾಗೂ ಪ್ರಾಮುಖ್ಯತೆ ನೀಡುವ ಉದ್ದೇಶ ಹೊಂದಿದ್ದರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಗುಂಪು ಟೀಸರ್​ನಲ್ಲಿರುವ ಅಂಶಗಳನ್ನು ತೀವ್ರವಾಗಿ ಟೀಕಿಸುತ್ತಿದೆ. ಟೀಸರ್‌ನಲ್ಲಿ ಸ್ತ್ರೀ ಪಾತ್ರಗಳನ್ನು ಬಿಂಬಿಸಿರುವ ಧಾಟಿ ಮತ್ತು ವಿಧಾನದ ಕುರಿತು ನೆಟ್ಟಿಗರು ಹಾಗೂ ಸಿನಿಪ್ರೇಕ್ಷಕರು ಗಂಭೀರವಾಗಿ ಪ್ರಶ್ನೆ ಮಾಡುತ್ತಿದ್ದಾರೆ.
ಹೊಸ ಟೀಸರ್​ನಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಸೇರಿದಂತೆ ಪ್ರಮುಖ ನಟಿಯರ ಝಲಕ್ ಕಾಣಿಸಿಕೊಂಡಿದೆ. ಆದರೆ, ಈ ಟೀಸರ್ ಪಾತ್ರಗಳ ಹಿನ್ನೆಲೆ ಹಾಗೂ ಮಹತ್ವವನ್ನು ಪರಿಚಯಿಸುವ ಬದಲು, ಕೇವಲ ಗ್ಲಾಮರ್ ಮತ್ತು ಇಂಟಿಮೇಟ್​ ದೃಶ್ಯಗಳಿಗಷ್ಟೇ ಹೆಚ್ಚು ಒತ್ತು ನೀಡಿದೆ ಎಂದು ಹಲವು ವೀಕ್ಷಕರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
'ಎಕ್ಸ್' (ಟ್ವಿಟರ್) ಸಾಮಾಜಿಕ ಜಾಲತಾಣದಲ್ಲಿ ಈ ಟೀಸರ್ ಕುರಿತು ಪ್ರತಿಕ್ರಿಯಿಸಿರುವ ಬಳಕೆದಾರರೊಬ್ಬರು, ಟಾಕ್ಸಿಕ್​ ಚಿತ್ರದ ಹೊಸ ಟೀಸರ್ ಅನ್ನು ಮಹಿಳೆಯರಿಗಾಗಿಯೇ ಸಮರ್ಪಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಇದರಲ್ಲಿ ಬಹುತೇಕ ಮಹಿಳಾ ಪಾತ್ರಗಳನ್ನು ಅವರ ವ್ಯಕ್ತಿತ್ವ ಅಥವಾ ಪಾತ್ರದ ಮೂಲಕ ಪರಿಚಯಿಸುವ ಬದಲು, ಕೇವಲ ವಸ್ತುವಿನಂತೆ ಬಿಂಬಿಸಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಮತ್ತೊಬ್ಬ ಬಳಕೆದಾರರು ಚಿತ್ರದ ನಿರ್ದೇಶಕಿ ಗೀತು ಮೋಹನ್ ದಾಸ್ ಅವರನ್ನು ನೇರವಾಗಿ ಟೀಕಿಸಿದ್ದು, ನನಗೆ ನಿಜಕ್ಕೂ ಅಸಹ್ಯವೆನಿಸುತ್ತಿದೆ. ಗೀತು ಮೋಹನ್ ದಾಸ್ ಅವರಂತಹ ಒಬ್ಬ ಪ್ರಬುದ್ಧ ಮಹಿಳಾ ನಿರ್ದೇಶಕಿ ಇಂತಹ ಕಳಪೆ ದೃಶ್ಯಗಳನ್ನು ಹೇಗೆ ತಾನೇ ರೂಪಿಸಲು ಸಾಧ್ಯ? ಎಂದು ಬರೆದುಕೊಂಡಿದ್ದಾರೆ. ಇನ್ನು ಕೆಲವರಂತೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಈ ದಶಕದಲ್ಲೇ ಬಂದ ಅತ್ಯಂತ ಅಶ್ಲೀಲ ಟೀಸರ್ ಎಂದು ಕರೆದಿದ್ದಾರೆ.
ಚಿತ್ರದ ವಿರುದ್ಧದ ಈ ಟೀಕೆಗಳ ಅಬ್ಬರ ಎಷ್ಟು ಜೋರಾಗಿದೆಯೆಂದರೆ, ನೆಟ್ಟಿಗರೊಬ್ಬರು ಭಾರತೀಯ ಸೆನ್ಸಾರ್ ಮಂಡಳಿಯು ಇಷ್ಟು ಅಸಹ್ಯಕರವಾಗಿರುವ ಟಾಕ್ಸಿಕ್​ ಚಿತ್ರಕ್ಕೆ ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡಬಾರದು ಎಂದು ನಾನು ಆಶಿಸುತ್ತೇನೆ ಎಂದು ಬರೆದಿದ್ದಾರೆ. ಮತ್ತೊಬ್ಬ ವೀಕ್ಷಕರು ಚಿತ್ರದ ವಯಸ್ಕರ ಕಂಟೆಂಟ್​ಗಿಂತ ಅದನ್ನು ಪ್ರಸ್ತುತಪಡಿಸಿದ ರೀತಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಇದರಲ್ಲಿರುವ ನಗ್ನತೆ ಅಥವಾ ಲೈಂಗಿಕ ಸಂಭಾಷಣೆಗಳು ನನಗೆ ಬೇಸರ ತರಿಸಿಲ್ಲ. ಆದರೆ ಅದನ್ನು ತೋರಿಸಿರುವ ವಿಧಾನ ತಪ್ಪು. ಶೃಂಗಾರಕ್ಕೂ ಹಾಗೂ ವಿಕೃತಕ್ಕೂ ಒಂದು ಸೂಕ್ಷ್ಮ ಗೆರೆಯಿರುತ್ತದೆ. ಆದರೆ 'ಟಾಕ್ಸಿಕ್' ಚಿತ್ರತಂಡಕ್ಕೆ ಆ ವ್ಯತ್ಯಾಸ ಗೊತ್ತಿಲ್ಲದಂತೆ ಕಾಣುತ್ತಿದೆ ಎಂದಿದ್ದಾರೆ.
ವಿಶೇಷವಾಗಿ ಟೀಸರ್‌ನ ಕೊನೆಯ ದೃಶ್ಯದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಮಹಿಳೆಯರನ್ನು ಕೇವಲ ಪುರುಷರ ದೃಷ್ಟಿಕೋನದಲ್ಲೇ ಬಿಂಬಿಸಲಾಗಿದೆ. ಆ ಕೊನೆಯ ದೃಶ್ಯವಂತೂ ತೀವ್ರ ಮುಜುಗರ ತರುವಂತಿದೆ. ಇಂತಹ ದೃಶ್ಯವನ್ನು ಯಾರೋ ಬರೆದಿದ್ದಾರೆ, ಅದನ್ನು ತಂಡ ಒಪ್ಪಿಕೊಂಡಿದೆ ಮತ್ತು ಚಿತ್ರೀಕರಣವೂ ಮಾಡಿದೆ ಎನ್ನುವುದೇ ಆಘಾತಕಾರಿ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಈ ಚರ್ಚೆಯು ರೆಡ್ಡಿಟ್ ವೇದಿಕೆಗೂ ವಿಸ್ತರಿಸಿದ್ದು, ಅಲ್ಲಿಯೂ ಸಹ ಬಳಕೆದಾರರು ಟೀಸರ್ ಕುರಿತು ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ. ರೆಡ್ಡಿಟ್‌ನ ಕಾಮೆಂಟ್ ಒಂದರಲ್ಲಿ ನನ್ನ ಅಜ್ಜ-ಅಜ್ಜಿ ಮತ್ತು ಮುತ್ತಜ್ಜ-ಮುತ್ತಜ್ಜಿಯರು ಇಂತಹ ದಿನವನ್ನು ನೋಡುವ ಮುನ್ನವೇ ಸ್ವರ್ಗಸ್ಥರಾಗಿದ್ದಕ್ಕೆ ದೇವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿರಬಹುದು ಎಂದು ವ್ಯಂಗ್ಯವಾಗಿ ಬರೆಯಲಾಗಿದೆ. ಮತ್ತೊಬ್ಬ ಬಳಕೆದಾರರು ಮಹಿಳಾ ಪಾತ್ರಗಳಿಗೆ ಟೀಸರ್‌ನಲ್ಲಿ ಯಾವುದೇ ಗಂಭೀರ ಪ್ರಾಮುಖ್ಯತೆ ನೀಡದಿರುವುದನ್ನು ಎತ್ತಿ ತೋರಿಸುತ್ತಾ, ಇಡೀ ಟೀಸರ್‌ನಲ್ಲಿ ಒಬ್ಬೇ ಒಬ್ಬ ಮಹಿಳಾ ಪಾತ್ರವೂ ಮಾತನಾಡಿಲ್ಲ, ಅಷ್ಟೇ ಅಲ್ಲದೆ ಯಾವುದೇ ನಟಿಯನ್ನೂ ಕನಿಷ್ಠ 5 ರಿಂದ 10 ಸೆಕೆಂಡ್‌ಗಳಿಗಿಂತ ಹೆಚ್ಚು ಸಮಯ ಪರದೆಯ ಮೇಲೆ ತೋರಿಸಿಲ್ಲ ಎಂದು ಬೆರಳು ಮಾಡಿದ್ದಾರಲ್ಲದೆ, ಪಾತ್ರಗಳ ಗಾಂಭೀರ್ಯತೆಯ ಕೊರತೆಯನ್ನು ಪ್ರಶ್ನಿಸಿದ್ದಾರೆ.
ಇನ್ನೂ ಸಿನಿಮಾ ವಿಚಾರಕ್ಕೆ ಬರುವುದಾದರೆ, ಬಿಡುಗಡೆಯ ದಿನಾಂಕದಲ್ಲಿ ಹಲವು ಬಾರಿ ಬದಲಾವಣೆ ಕಂಡಿದ್ದ 'ಟಾಕ್ಸಿಕ್' ಸಿನಿಮಾ ಕೊನೆಗೂ ಆಗಸ್ಟ್ 26 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅಬ್ಬರಿಸಲು ಸಜ್ಜಾಗಿದೆ. ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ್ ಹಾಗೂ ಸ್ವತಃ ಯಶ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಮೂಲತಃ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಕಥೆ ಸಿದ್ಧಪಡಿಸಿ ಚಿತ್ರೀಕರಣ ನಡೆಸಲಾಗುತ್ತಿರುವ ಈ ಬಿಗ್ ಬಜೆಟ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ತೆರೆಕಾಣಲಿದೆ, (ಏಜೆನ್ಸೀಸ್​).