ಇಂದು (ಅ.11) ಅಂತಾರಾಷ್ಟ್ರೀಯ ಹೆಣ್ಣು ಮಗು ದಿನ. ಹೆಣ್ಣು ಮಕ್ಕಳ ಹಕ್ಕು ಬಾಧ್ಯತೆಗಳ ಬಗ್ಗೆ ಈ ದಿನ ಚರ್ಚಿಸಲಾಗುತ್ತದೆ. ಶಿಕ್ಷಣ, ಜೀವನ ಭದ್ರತೆ ಸೇರಿ ಹಲವು ಅಂಶಗಳ ಮೇಲೆ ಬೆಳಕು ಚೆಲ್ಲಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್ ನಟಿಯರಾದ ಅನಿತಾ ಭಟ್, ಸಿಂಧೂ ಲೋಕನಾಥ್ ಹೆಣ್ಣು ಮಕ್ಕಳ ವಿಚಾರವಾಗಿ ಒಂದಷ್ಟು ಸಲಹೆ, ಮಾರ್ಗದರ್ಶನಗಳನ್ನು ನೀಡಿದ್ದಾರೆ.
ಹೆಣ್ಣು ಮಕ್ಕಳು ಆರ್ಥಿಕವಾಗಿ ಸ್ವತಂತ್ರರಾಗುವುದು ಈಗಿನ ಅಗತ್ಯ. ಬೇರೆಯವರನ್ನು ಅವಲಂಬಿಸುವುದು ತಾತ್ಕಾಲಿಕ. ಹೀಗಾಗಿ ಪ್ರತಿ ಹೆಣ್ಣು ಮಕ್ಕಳು ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು. ಇದು ಸಾಧ್ಯವಾಗಬೇಕೆಂದರೆ, ಒಳ್ಳೆಯ ಶಿಕ್ಷಣ ಪಡೆಯಬೇಕು. ಕೇವಲ ಔಪಚಾರಿಕ ಶಿಕ್ಷಣಕ್ಕೆ ಸೀಮಿತವಾಗದೆ ಕೌಶಲ್ಯಯುತ ಶಿಕ್ಷಣ ಪಡೆಯಬೇಕು. ಇದರಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯ. ಇನ್ನು ಸಮಾಜದಲ್ಲಿ ಗಂಡು-ಹೆಣ್ಣು ಎಂಬ ಭೇದ-ಭಾವ ನೋಡುವುದು ಕಡಿಮೆಯಾಗಬೇಕು. ಹೆಣ್ಣಾಗಲಿ-ಗಂಡಾಗಲಿ ಮೊದಲು ಮಗು ಎಂದು ನೋಡುವ ದೃಷ್ಟಿಕೋನ ಬೆಳೆಸಿಕೊಳ್ಳಬೇಕು. ನಾವು ಈಗಿನ ಆಧುನಿಕ ಕಾಲದಲ್ಲೂ ಲಿಂಗ ಸಮಾನತೆಯ ಬಗ್ಗೆ ಮಾತನಾಡುತ್ತಿದ್ದೇವೆ ಎಂದರೆ ದುರಂತ ಅನಿಸುತ್ತದೆ. ಈ ವೇಳೆಗಾಗಲೇ ಎಲ್ಲ ಬದಲಾವಣೆಯಾಗಬೇಕಿತ್ತು. ಆದರೆ, ಮುಂದೊಂದು ದಿನ ಖಂಡಿತ ಎಲ್ಲ ಕ್ಷೇತ್ರಗಳಲ್ಲಿ ಅಸಮಾನತೆ ಹೋಗಿ, ಸಮಾನತೆ ಬರುತ್ತದೆ ಎಂಬ ಭರವಸೆಯಿದೆ. ಹೆಣ್ಣು ಮಗುವಿಗೆ ನಾವು ಬದುಕುವ ದಾರಿ ತೋರಿಸಿದರೆ, ಆಕೆ ರಾಷ್ಟ್ರದ ನಿರ್ಮಾಣದಲ್ಲಿ ಕೈಜೋಡಿಸುತ್ತಾಳೆ.
ಅನಿತಾ ಭಟ್, ನಟಿ
ಪ್ರತಿ ದಿನವು ‘ಹೆಣ್ಣು ಮಗುವಿನ’ ದಿನಾಚರಣೆ ಆಗಬೇಕು. ತಾಯಿಯಾಗಿ, ಸಹೋದರಿ, ಮಡದಿ, ಗೆಳತಿ ಹೀಗೆ ನಾನಾ ಸಂಬಂಧಗಳ ಮೂಲಕ ಪ್ರತಿಯೊಬ್ಬ ವ್ಯಕ್ತಿಗೆ ಆಕೆ ಹತ್ತಿರವಾಗಿರುತ್ತಾಳೆ. ಹೀಗಾಗಿ ಈ ಆಚರಣೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸುವುದು ಬೇಡ. ಪ್ರಸ್ತುತ ದಿನಮಾನಗಳಲ್ಲಿ ಹೆಣ್ಣು ಮಕ್ಕಳ ಬಗೆಗಿನ ಪೂರ್ವಾಗ್ರಹ ಮನಸ್ಥಿತಿ ಬದಲಾಗಿದೆ. ಹೆಣ್ಣು ಮಗು ಜನಿಸಿದರೆ ಅದ್ದೂರಿಯಾಗಿ ಸಂಭ್ರಮಿಸುತ್ತಿದ್ದಾರೆ. ಆದರೆ, ಆ ಮಗು ಮುಂದೆ ಹೋದಂತೆ ಎದುರಿಸುವ ಸವಾಲುಗಳು ಮಾತ್ರ ಕಡಿಮೆಯಾಗಿಲ್ಲ. ಹೆಣ್ಣುಮಕ್ಕಳಿಗೆ ಪ್ರತಿ ದಿನ ಹೋರಾಟವೇ. ಈಗ ಚಿತ್ರರಂಗವನ್ನೇ ತೆಗೆದುಕೊಳ್ಳಿ. ಸಂಭಾವನೆ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಮೊದಲಿನಿಂದಲೂ ಧ್ವನಿ ಎತ್ತುತ್ತಿದ್ದಾರೆ. ಆದರೆ, ಇವತ್ತಿಗೂ ಅದು ಬಗೆಹರಿದಿಲ್ಲ. ಹಾಗಂತ ಈ ಧ್ವನಿ ನಿಲ್ಲಬಾರದು. ಮುಂದುವರಿಯಬೇಕು. ಒಂದು ದಿನ ನ್ಯಾಯ ದೊರೆಯುತ್ತದೆ. ಹೆಣ್ಣು ಮಕ್ಕಳು ಬೇರೆಯವರಿಗೆ ಹೋಲಿಕೆ ಮಾಡಿಕೊಂಡು ಬದುಕುವುದು ತರವಲ್ಲ. ಸ್ವಂತ ನಿರ್ಧಾರದಿಂದ ಬದುಕಬೇಕು. ಜೀವನದಲ್ಲಿ ಸ್ವಲ್ಪ ಸೆಟಲ್ ಆದೆ ಎಂಬ ಧೈರ್ಯ ಬಂದಾಗಲೇ ಹುಡುಗಿಯರು ಮದುವೆಯಾಗುವುದು ಒಳ್ಳೆಯದು. ಇದರಿಂದ ಮುಂದಿನ ಭವಿಷ್ಯಕ್ಕೆ ಒಳ್ಳೆಯದಾಗುತ್ತದೆ ಎಂಬುದು ನನ್ನ ಅನಿಸಿಕೆ.
ಸಿಂಧು ಲೋಕನಾಥ್, ನಟಿ