ಬೆಂಗಳೂರು: ‘ನನ್ನ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ನಡೆದ ಘಟನೆಯೇ ಈ ಸಿನಿಮಾಕ್ಕೆ ಸ್ಪೂರ್ತಿ ...’ ಹೀಗೆ ಹೇಳಿಕೊಳ್ಳುತ್ತಾರೆ ‘ಇನ್ಸ್ಟಂಟ್ ಕರ್ಮ’ ಸಿನಿಮಾ ನಿರ್ದೇಶಿಸಿದ ಸಂದೀಪ್ ಮಹಾಂತೇಶ್. ಈ ಚಿತ್ರದ ಕೆಲಸಗಳೆಲ್ಲ ಮುಗಿದಿದ್ದು, ಏಪ್ರಿಲ್ ಒಂದಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇತ್ತೀಚೆಗಷ್ಟೇ ಈ ಸಿನಿಮಾ ಬಗ್ಗೆ ಮಾಹಿತಿ ನೀಡಲೆಂದೇ ಇಡೀ ತಂಡ ಒಂದೆಡೆ ಸೇರಿತ್ತು.
ಈ ಸಂದರ್ಭದಲ್ಲಿ ‘ಇನ್ಸ್ಟಂಟ್ ಕರ್ಮ’ ಬಗ್ಗೆ ಮಾತನಾಡಿದ ಸಂದೀಪ್, ‘ನಾವು ಮಾಡಿದ ಕರ್ಮಕ್ಕೆ ಪ್ರತಿಫಲ ಇದ್ದೇ ಇರುತ್ತದೆ. ‘ಇನ್ಸ್ಟಂಟ್ ಕರ್ಮ’ದಲ್ಲಿಯೂ ಅದನ್ನೇ ಹೇಳಿದ್ದೇವೆ. ಈಗ ಮಾಡಿದ್ದನ್ನು ಈಗಲೇ ಅನುಭವಿಸಬೇಕು. ಅದು ಹೇಗೆ ಸಾಧ್ಯ? ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು’ ಎನ್ನುತ್ತಾರೆ. ನಾಲ್ವರು ಯುವಕರ ನಡುವೆ ಸಾಗುವ ಈ ಕಥೆಯಲ್ಲಿ ಯಶ್ ಶೆಟ್ಟಿ, ಅಂಜನ್ ದೇವ್, ಹರಿ, ಪ್ರಜ್ವಲ್ ಶೆಟ್ಟಿ ಪ್ರಧಾನ ಪಾತ್ರದಲ್ಲಿದ್ದಾರೆ. ಸೆನ್ಸಾರ್ ಅಂಗಳದಿಂದಲೂ ಚಿತ್ರಕ್ಕೆ ‘ಯು/ಎ’ ಪ್ರಮಾಣ ಪತ್ರ ಸಿಕ್ಕಿದೆ. ಸಂತೋಷ್ ಮಹಾಂತೇಶ್ ಚಿತ್ರ ನಿರ್ವಿುಸಿದ್ದಾರೆ.