ಸಿನಿವಾಣಿ

ಹೊಸ ವಿಕ್ರಂಗೆ ಹಳೇ ವಿಕ್ರಂ ಸಾಥ್

lakshmihegde

ಬೆಂಗಳೂರು: ಪ್ರಜ್ವಲ್ ದೇವರಾಜ್ ನಟನೆಯ ‘ಇನ್​ಸ್ಪೆಕ್ಟರ್ ವಿಕ್ರಂ’ ಚಿತ್ರಕ್ಕೆ ನಟ ಶಿವರಾಜಕುಮಾರ್ ಸಾಥ್ ನೀಡಿದ್ದು, ಇದೇ 8ರಂದು ಆ ಚಿತ್ರದ ವಿಡಿಯೋ ಹಾಡನ್ನು ರಿಲೀಸ್ ಮಾಡಲಿದ್ದಾರೆ. ಆನಂದ್ ಆಡಿಯೋದ ಯೂಟ್ಯೂಬ್ ಚಾನಲ್​ನಲ್ಲಿ ಈ ಹಾಡು ಬಿಡುಗಡೆಯಾಗಲಿದೆ.

‘ಇನ್​ಸ್ಪೆಕ್ಟರ್ ವಿಕ್ರಂ’ ಎಂಬ ಟೈಟಲ್​ನಲ್ಲಿ ಈ ಮೊದಲು ಶಿವರಾಜಕುಮಾರ್ ನಟಿಸಿದ್ದರು. ಈಗ ಅದೇ ಹೆಸರಿನ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ನಟಿಸಿದ್ದಾರೆ. ಈಗಾಗಲೇ ರಿಲೀಸ್​ಗೆ ರೆಡಿ ಇರುವ ಈ ಚಿತ್ರದ ಟೀಸರ್ ಮತ್ತು ಒಂದು ಹಾಡು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈಗ ಅದೇ ಚಿತ್ರದ ‘ಹೇ ಗೈಸ್ ...’ ಎಂಬ ವಿಡಿಯೋ ಹಾಡನ್ನು ಚಿತ್ರತಂಡ ಶಿವರಾಜಕುಮಾರ್ ಅವರ ಕೈಯಿಂದ ರಿಲೀಸ್ ಮಾಡಿಸುತ್ತಿದೆ. ‘ಶಿವರಾಜಕುಮಾರ್ ಅವರ ‘ಇನ್​ಸ್ಪೆಕ್ಟರ್ ವಿಕ್ರಂ’ ನಮ್ಮ ಫೇವರೆಟ್ ಚಿತ್ರ. ಹಾಗಾಗಿ ನಮ್ಮ ಸಿನಿಮಾಗೂ ಅದೇ ಟೈಟಲ್ ಇಟ್ಟಿದ್ದೇವೆ.

ಈಗ ಅವರ ಕೈಯಿಂದಲೇ ಸಿನಿಮಾದ ಹಾಡೊಂದನ್ನು ರಿಲೀಸ್ ಮಾಡಿಸುತ್ತಿರುವುದು ನನಗೆ ವೈಯಕ್ತಿಕವಾಗಿ ಖುಷಿ ಇದೆ’ಎನ್ನುತ್ತಾರೆ ನಿರ್ವಪಕ ವಿಖ್ಯಾತ್. ‘ಇನ್​ಸ್ಪೆಕ್ಟರ್ ವಿಕ್ರಂ’ ಎಂದು ಹೆಸರೇ ಹೇಳುವಂತೆ, ಈ ಚಿತ್ರದಲ್ಲಿ ಪ್ರಜ್ವಲ್ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದಾರೆ. ಅವರಿಗೆ ಜೋಡಿಯಾಗಿ ಭಾವನಾ ಮೆನನ್ ಇದ್ದು, ರಘು ಮುಖರ್ಜಿ, ಧರ್ಮಣ್ಣ ಕಡೂರು ಮುಖ್ಯ ಪಾತ್ರದಲ್ಲಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ.