ಬೆಂಗಳೂರು: ಲಾಕ್ಡೌನ್ ಚಾಲ್ತಿಯಲ್ಲಿದೆ. ಸಿನಿಮಾರಂಗ ಸ್ಥಗಿತಗೊಂಡಿದೆ. ಈ ನಡುವೆ "ಫ್ಯಾಮಿಲಿ' ಹೆಸರಿನ ಕಿರು ಸಿನಿಮಾ ಶೂಟಿಂಗ್ ಮಾಡಲಾಗಿದೆ. ಅದೂ ಭಾರತೀಯ ಸಿನಿಮಾರಂಗ ಕಂಡ ಘಟಾನುಘಟಿ ಕಲಾವಿದರೇ ಆ ಚಿತ್ರದಲ್ಲಿ ನಟಿಸಿದ್ದಾರೆ ಎಂಬುದಿಲ್ಲಿ ವಿಶೇಷ! ಅರೇ.. ಚಿತ್ರೀಕರಣಕ್ಕೆ ತಡೆಯಾಜ್ಞೆ ಇರುವುದರಿಂದ ಅದ್ಹೇಗೆ ಶೂಟಿಂಗ್ ಮಾಡಿದರು ಎಂಬ ಪ್ರಶ್ನೆ ಮೂಡುವುದು ಸಹಜ. ಹಾಗಾದರೆ, ಇನ್ನೇಕೆ ತಡ ಆ ಕಿರುಚಿತ್ರ ನೋಡಿ. ಅದನ್ನು ಹೇಗೆ ಶೂಟ್ ಮಾಡಿದ್ದಾರೆ ಎಂಬ ಅಚ್ಚರಿ ಮತ್ತು ಕುತೂಹಲ ಎರಡೂ ತಣಿಯಲಿದೆ.
ಅಂದಹಾಗೆ, ಬಾಲಿವುಡ್ನಿಂದ ಅಮಿತಾಬ್ ಬಚ್ಚನ್, ಆಲಿಯಾ ಭಟ್, ದಿಲ್ಜೀತ್ ದೋಸಾಂಜೆ, ರಣಬೀರ್ ಕಪೂರ್, ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡರೆ, ಕಾಲಿವುಡ್ನಿಂದ ಸೂಪರ್ಸ್ಟಾರ್ ರಜನಿಕಾಂತ್, ಸ್ಯಾಂಡಲ್ವುಡ್ನಿಂದ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್, ಟಾಲಿವುಡ್ನಿಂದ ಚಿರಂಜೀವಿ, ಮಾಲಿವುಡ್ ಮೋಹನ್ ಲಾಲ್, ಮೊಮ್ಮುಟ್ಟಿ "ಫ್ಯಾಮಿಲಿ' ಕಿರುಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಅವರವರ ಮನೆಯಲ್ಲಿದ್ದುಕೊಂಡೇ ಎಲ್ಲ ದಿಗ್ಗಜ ನಟರು "ಫ್ಯಾಮಿಲಿ' ಕಿರುಚಿತ್ರಕ್ಕೆ ದೃಶ್ಯಗಳನ್ನು ಕಳುಹಿಸಿದ್ದಾರೆ. ಅದೆಲ್ಲವನ್ನು ಒಟ್ಟುಗೂಡಿಸಿ ನಿರ್ದೇಶಕ ಪ್ರಸೂನ್ ಪಾಂಡೆ ಕಿರುಚಿತ್ರ ಮಾಡಿದ್ದಾರೆ. ಇಡೀ ಕಿರುಚಿತ್ರವನ್ನು ಬ್ಲಾಕ್ ಆ್ಯಂಡ್ ವೈಟ್ ಬ್ಯಾಕ್ಗ್ರೌಂಡ್ನಲ್ಲಿ ಚಿತ್ರಿಸಲಾಗಿದ್ದು, ಅಷ್ಟೇ ಗುಣಮಟ್ಟದ ಕಂಟೆಂಟ್ ನೀಡಿದ್ದಾರೆ ನಿರ್ದೇಶಕರು.
ವಿಶೇಷ ಏನೆಂದರೆ, ಈ ಕಿರುಚಿತ್ರದಲ್ಲಿ ಎಲ್ಲ ದಿಗ್ಗಜ ನಟರು ಒಂದೇ ಕುಟುಂಬದವರಾಗಿರುತ್ತಾರೆ. ಮನೆಯ ಹಿರಿಯ ಅಮಿತಾಬ್ ಬಚ್ಚನ್ ಕನ್ನಡಕ ಕಾಣೆಯಾಗುತ್ತದೆ. ಅದನ್ನು ಹುಡುಕುವುದೇ ಕಥೆ. ಕೊನೆಗೆ ಇಡೀ ಭಾರತೀಯ ಚಿತ್ರರಂಗವೇ ಒಂದು ಕುಟುಂಬ ಎಂಬಂತೆ ತೋರಿಸಲಾಗಿದೆ. ಆಯಾ ಇಂಡಸ್ಟ್ರಿಗೆ ಸಂಬಂಧಿಸಿದ ಕಲಾವಿದರೆಲ್ಲ ತಂತಮ್ಮ ಭಾಷೆಯಲ್ಲಿಯೇ ಡೈಲಾಗ್ ಒಪ್ಪಿಸಿದ್ದು ನೋಡುಗರಿಗೆ ಮತ್ತಷ್ಟು ಹತ್ತಿರವೆನಿಸುತ್ತದೆ. ನಿನ್ನೆ ಬಿಡುಗಡೆ ಆಗಿರುವ ಈ ಕಿರುಚಿತ್ರ ಯೂಟ್ಯೂಬ್ನಲ್ಲಿದ್ದು, ಎಲ್ಲ ತಾರೆಗಳು ತಮ್ಮ ಜಾಲತಾಣದಲ್ಲಿ ಅದರ ಕೊಂಡಿಯನ್ನು ಹಂಚಿಕೊಂಡಿದ್ದಾರೆ.