ಸಿನಿವಾಣಿ

ಸಪ್ತ ಸಾಗರದಾಚೆಯ ಹುಡುಕಾಟದಲ್ಲಿ...: ‘ಗೋಧಿ ಬಣ್ಣ’ ನಂತರ ಮತ್ತೆ ಒಂದಾದ ರಕ್ಷಿತ್, ಹೇಮಂತ್

ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದಲ್ಲಿ ‘ತೆನಾಲಿ’ ಎಂಬ ಚಿತ್ರವನ್ನು ಹೇಮಂತ್ ರಾವ್ ನಿರ್ದೇಶಿಸುತ್ತಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಕೇಳಿ ಬಂದಿತ್ತು. ರಕ್ಷಿತ್ ಶೆಟ್ಟಿ ಜತೆ ಹೇಮಂತ್ ಚಿತ್ರ ಮಾಡುತ್ತಿರುವುದೇನೋ ಹೌದು.

ಆದರೆ, ಅದರಲ್ಲೊಂದು ಬದಲಾವಣೆ ಆಗಿದೆ. ‘ತೆನಾಲಿ’ ಬದಲು ಅವರು ‘ಸಪ್ತ ಸಾಗರದಾಚೆ ಎಲ್ಲೋ’ ಎಂಬ ಹೊಸ ಚಿತ್ರವನ್ನು ಶುರು ಮಾಡಲಿದ್ದಾರೆ. ಈ ಚಿತ್ರ ಜೂನ್​ನಲ್ಲಿ ಪ್ರಾರಂಭವಾಗಲಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರವನ್ನು ಹೇಮಂತ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದರೆ, ಪುಷ್ಕರ್ ಮಲ್ಲಿಕಾರ್ಜುನಯ್ಯ ತಮ್ಮ ಪುಷ್ಕರ್ ಫಿಲಂಸ್​ನಡಿ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯಕ್ಕೆ ರಕ್ಷಿತ್ ಆಯ್ಕೆಯಾಗಿದ್ದು, ನಾಯಕಿಯ ಹುಡುಕಾಟ ನಡೆದಿದೆ. ಇನ್ನು ‘ಕವಲು ದಾರಿ’ಯಲ್ಲಿ ಹೇಮಂತ್ ತಂಡದಲ್ಲಿದ್ದ ಛಾಯಾಗ್ರಾಹಕ ಅದ್ವೈತ ಗುರುಮೂರ್ತಿ ಮತ್ತು ಸಂಗೀತ ನಿರ್ದೇಶಕ ಚರಣ್ ರಾಜ್ ಈ ಚಿತ್ರದಲ್ಲೂ ಮುಂದುವರಿಯಲಿದ್ದಾರೆ.

ಜೂನ್​ನಲ್ಲಿ ಚಿತ್ರೀಕರಣ ಶುರುವಾಗಲಿದ್ದು, ಬೆಂಗಳೂರಿನ ಸುತ್ತಮುತ್ತ ನಡೆಯಲಿದೆ. ಎಲ್ಲ ಅಂದುಕೊಂಡಂತೆ ಆದರೆ, ಈ ವರ್ಷದ ಕೊನೆಯಲ್ಲೇ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ‘ಸಪ್ತ ಸಾಗರದಾಚೆ ಎಲ್ಲೋ’ ಎಂಬ ಹೆಸರು ಕೇಳುತ್ತಿದ್ದಂತೆಯೇ ಗೋಪಾಲಕೃಷ್ಣ ಅಡಿಗರು ಮತ್ತು ಅವರ ‘ಯಾವ ಮೋಹನ ಮುರಳಿ ಕರೆಯಿತೋ..’ ಪದ್ಯ ನೆನಪಾಗುತ್ತದೆ. ‘ನನ್ನ ಹಿಂದಿನ ಎರಡೂ ಚಿತ್ರಗಳಿಗೂ ಪೂರಕವಾದ ಶೀರ್ಷಿಕೆ ಇತ್ತು. ಈ ಚಿತ್ರಕ್ಕೂ ‘ಸಪ್ತ ಸಾಗರದಾಚೆ ಎಲ್ಲೋ’ ಎಂಬ ಶೀರ್ಷಿಕೆ ಸೂಕ್ತವಾಗಿದೆ. ಅದಕ್ಕೆ ಕಾರಣ ಚಿತ್ರದಲ್ಲಿ ಸಾಕಷ್ಟು ಕಾವ್ಯಾತ್ಮಕ ಅಂಶಗಳಿವೆ. ಇದೊಂದು ಲವ್​ಸ್ಟೋರಿ. ಆಕ್ಷನ್ ಸಹ ಇರುತ್ತದೆ’ ಎನ್ನುತ್ತಾರೆ ಹೇಮಂತ್.

ಇನ್ನು ಚಿತ್ರದ ಬಗ್ಗೆ ಮಾತನಾಡುವ ಅವರು, ‘ಹಲವು ಲವ್​ಸ್ಟೋರಿಗಳನ್ನು ನೋಡಿ ಬೆಳೆದವನು. ‘ಬಂಧನ’, ‘ಮೌನರಾಗಂ’, ‘ಕೋಕಿಲ’ ಮುಂತಾದ ಚಿತ್ರಗಳು ನನ್ನಲ್ಲಿ ಸಾಕಷ್ಟು ಪ್ರಭಾವ ಬೀರಿವೆ. ಮೊದಲೇ ಹೇಳಿದಂತೆ ಇದೊಂದು ಲವ್​ಸ್ಟೋರಿ. ಇಲ್ಲಿ ರಕ್ಷಿತ್​ಗೆ ಎರಡು ವೇರಿಯೇಷನ್ ಇರುವ ಪಾತ್ರ ಇದೆ. ಆಗಷ್ಟೇ ಕಾಲೇಜಿ ನಿಂದ ಪಾಸ್ ಆದ ಯುವಕ, ಏಳೆಂಟು ವರ್ಷಗಳ ನಂತರ ಏನೆಲ್ಲ ಬದಲಾವಣೆಗಳನ್ನು ನೋಡುತ್ತಾನೆ ಎನ್ನುವುದು ಚಿತ್ರದ ಕಥೆ. ಕಾಲೇಜಿಂದ ಹೊರ ಬಂದ ಪ್ರತಿಯೊಬ್ಬರಿಗೂ ಸಾಕಷ್ಟು ಕನಸು, ಎನರ್ಜಿ ಇರುತ್ತದೆ. ಕಾಲಕ್ರಮೇಣ ಅವನು ಹೇಗೆಲ್ಲ ಬದಲಾಗುತ್ತಾನೆ ಎಂದು ಹೇಳುವ ಪ್ರಯತ್ನ ಮಾಡುತ್ತಿದ್ದೇನೆ’ ಎನ್ನುತ್ತಾರೆ ಹೇಮಂತ್.

ತೆನಾಲಿ ನಿಂತಿಲ್ಲ

ಇನ್ನು ‘ತೆನಾಲಿ’ ಚಿತ್ರದ ಬಗ್ಗೆ ಮಾತನಾಡುವ ಹೇಮಂತ್, ‘ಅದೊಂದು ದೊಡ್ಡ ಸಿನಿಮಾ. ಸ್ವಾತಂತ್ರ್ಯಪೂರ್ವ ಭಾರತದ ಕಥೆ. ಅದಕ್ಕೆ ಸಾಕಷ್ಟು ತಯಾರಿಗಳು ಬೇಕು. ಸದ್ಯಕ್ಕೆ ಆ ಚಿತ್ರ ಕೈಗೆತ್ತಿಕೊಳ್ಳುವುದು ಕಷ್ಟ. ಏಕೆಂದರೆ, ರಕ್ಷಿತ್ ಬಿಜಿ ಇದ್ದಾರೆ. ನಾನು ಮುಂದಿನ ವರ್ಷ ಹಿಂದಿ ಚಿತ್ರವೊಂದನ್ನು ನಿರ್ದೇಶಿಸುವ ಯೋಚನೆ ಇದೆ. ಮೊದಲಿನಿಂದಲೂ ಒಂದು ಚಿತ್ರಕ್ಕೆ ಕೈಹಾಕಿದರೆ, ಅದನ್ನು ಅಚ್ಚುಕಟ್ಟಾಗಿ ಮಾಡಬೇಕೆನ್ನುವುದು ನನ್ನ ಪಾಲಿಸಿ. ಆ ಚಿತ್ರದ ಕಥೆ ಸಹ ಅಂತಿಮವಾಗಿದೆ. ಆದರೆ, ಕಾಲದ ಇತಿಮಿತಿಯಿಂದ ಮುಂದೊಂದು ದಿನ ಆ ಚಿತ್ರ ಕೈಗೆತ್ತಿಕೊಳ್ಳುತ್ತೇವೆ’ ಎನ್ನುತ್ತಾರೆ ಹೇಮಂತ್.