ರಶ್ಮಿಕಾ ಅಭಿನಯದ ‘ಆಡವಾಳ್ಳು ಮೀಕು ಜೋಹಾರ್ಲು’ ಚಿತ್ರವು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕಳೆದೊಂದು ವಾರದಿಂದ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ರಶ್ಮಿಕಾ, ಮುಂದಿನ ಜನ್ಮದಲ್ಲಿ ತನಗೆ ಗಂಡಾಗಿ ಹುಟ್ಟುವಾಸೆ ಎಂದು ಹೇಳಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ಚಿತ್ರದಲ್ಲಿ ಒಬ್ಬ ಮದುಮಗಳು ಎದುರಿಸುವ ಹಲವು ಸವಾಲುಗಳನ್ನು ತೋರಿಸಲಾಗಿದೆ. ಹುಡುಗಿಯರಿಗೆ ಇಷ್ಟವೋ, ಇಲ್ಲವೋ ಗೊತ್ತಿಲ್ಲ. ಹುಡುಗರಿಗೆ ಇಷ್ಟವಾಗುವ ರೀತಿಯಲ್ಲಿ ಬಟ್ಟೆ ಧರಿಸಬೇಕು. ಅವರ ಸಂಬಂಧಿಕರ ಮುಂದೆ ತಲೆ ಬಾಗಿಸಬೇಕು. ಇದನ್ನೆಲ್ಲ ನೋಡಿ ಮುಂದಿನ ಜನ್ಮದಲ್ಲಾದರೂ ನಾನು ಗಂಡಾಗಿ ಹುಟ್ಟುವಾಸೆಯಿದೆ. ಗಂಡು ಮಕ್ಕಳು ಕಾಲ ಮೇಲೆ ಕಾಲು ಹಾಕಿಕೊಂಡು ಬೇಕಾದ ಪ್ರಶ್ನೆಗಳನ್ನು ಕೇಳುತ್ತಾರೆ. ಎಲ್ಲವೂ ಅವರ ಇಷ್ಟದಂತೆ ನಡೆಯುತ್ತದೆ’ ಎಂದು ಹೇಳಿದ್ದಾರೆ.
ಟೈಂಪಾಸ್ ಸುದ್ದಿಯಷ್ಟೇ: ಇನ್ನು, ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಮದುವೆಯಾಗುತ್ತಾರೆ ಎಂಬ ಸುದ್ದಿ ಇತ್ತೀಚೆಗೆ ಬಹಳ ಕೇಳಿ ಬರುತ್ತಿದೆ. ಈ ಕುರಿತು ಮಾತನಾಡಿರುವ ಅವರು, ಅದೊಂದು ಟೈಂಪಾಸ್ ಸುದ್ದಿಯಷ್ಟೇ. ಮದುವೆಗೆ ಸಾಕಷ್ಟು ಸಮಯವಿದೆ. ಸೂಕ್ತ ಸಮಯ ಬಂದಾಗ ಮದುವೆಯಾಗುತ್ತೇನೆ. ಈ ಗಾಳಿಸುದ್ದಿಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಕ್ಕೆ ನನಗೆ ಇಷ್ಟವಿಲ್ಲ’ ಎಂದು ಹೇಳಿಕೊಂಡಿದ್ದಾರೆ.