Sandeep Reddy Vanga : ಅನಿಮಲ್ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರಿಗೆ ಬಾಲಿವುಡ್ನಲ್ಲಿ ಒಳ್ಳೆಯ ಸ್ಥಾನಮಾನ ಸಿಕ್ಕಿದೆ. ಅಲ್ಲದೆ, ಎಲ್ಲೆಡೆ ಖ್ಯಾತಿಯೂ ದೊರಕಿದೆ. ಶೀಘ್ರದಲ್ಲೇ 'ಸ್ಪಿರಿಟ್' ಚಿತ್ರದ ಮೂಲಕ ಮತ್ತೆ ತಮ್ಮ ನಿರ್ದೇಶನದ ಜಾದೂ ತೋರಿಸಲು ಬರಲಿದ್ದಾರೆ. ಈ ಚಿತ್ರದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಎದುರು ನಾಯಕಿಯಾಗಿ ನಟಿಸುವ ಅವಕಾಶವನ್ನು ಅನಿಮಲ್ ಬ್ಯೂಟಿ ತೃಪ್ತಿ ದಿಮ್ರಿ ಗಿಟ್ಟಿಸಿಕೊಂಡಿದ್ದಾರೆ.
ತಾಜಾ ಸಂಗತಿ ಏನೆಂದರೆ, ಸಂದೀಪ್ ರೆಡ್ಡಿ ವಂಗಾ ಅವರು ಇತ್ತೀಚೆಗೆ ಬಾಲಿವುಡ್ ಪಿಆರ್ ತಂಡವನ್ನು ಉದ್ದೇಶಿಸಿ ಒಂದು ಸಂಚಲನಾತ್ಮಕ ಟ್ವೀಟ್ ಮಾಡಿದ್ದಾರೆ. ಸ್ಟಾರ್ ನಟಿಯ ಹೆಸರನ್ನು ಉಲ್ಲೇಖಿಸಿದೇ ಖಾರವಾಗಿ ಕೌಂಟರ್ ಕೊಟ್ಟಿದ್ದಾರೆ. ಪ್ರತಿಭೆ ಇದ್ದರೆ ಯಾರಿಗೂ ತಲೆಬಾಗುವ ಅಗತ್ಯವಿಲ್ಲ ಎಂಬುದನ್ನು ಸಂದೀಪ್ ವಂಗಾ ಬಾಲಿವುಡ್‌ಗೆ ತೋರಿಸಿದ್ದಾರೆ. ಅವರ ನಿರ್ದೇಶನದ ಕಬೀರ್ ಸಿಂಗ್ ಮತ್ತು ಅನಿಮಲ್ ಸಿನಿಮಾಗಳ ಮೇಲೆ ಎಷ್ಟೇ ಟೀಕೆ ಬಂದರೂ, ಬಾಲಿವುಡ್‌ಗೆ ತಾವು ಏನೆಂಬುದನ್ನು ತೋರಿಸಿದ್ದಾರೆ. ಈಗ, ಮತ್ತೊಮ್ಮೆ ತಮ್ಮದೇ ಆದ ಶೈಲಿಯಲ್ಲಿ ಪಂಚ್ ನೀಡಿದ್ದಾರೆ.
ಸಂದೀಪ್ ರೆಡ್ಡಿ ಅವರ ಹೊಸ ಚಿತ್ರ 'ಸ್ಪಿರಿಟ್' ಶೂಟಿಂಗ್ ಪ್ರಾರಂಭವಾಗುವ ಮುನ್ನವೇ ಬಾಲಿವುಡ್ ಪಿಆರ್ ತಂಡಗಳು ಅವರನ್ನು ಗುರಿಯಾಗಿಸಿಕೊಂಡಿವೆ. ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ ಎಂಬ ಸಾಕಷ್ಟು ವರದಿಗಳು ಬಂದವು. ಆದರೆ, ಈ ಚಿತ್ರದಿಂದ ದೀಪಿಕಾ ಹೊರಗುಳಿದಿದ್ದಾರೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಬಾಲಿವುಡ್ ಮಾಧ್ಯಮಗಳು ಸಂದೀಪ್ ಅವರನ್ನು ಗುರಿಯಾಗಿಸಿಕೊಂಡು ಸಾಕಷ್ಟು ಊಹಾಪೋಹಗಳನ್ನು ಎಬ್ಬಿಸಿವೆ.
ಸಂದೀಪ್ ವಿಧಿಸಿದ ಷರತ್ತುಗಳಿಗೆ ದೀಪಿಕಾ ಒಪ್ಪಲಿಲ್ಲ ಮತ್ತು ಗ್ಲಾಮರ್ ದೃಶ್ಯಗಳಿಂದಾಗಿ ದೀಪಿಕಾ ಅವರು ಹೊರಗುಳಿದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕಥೆಯಲ್ಲಿ ಹೆಚ್ಚಾಗಿ 'ಎ' ರೇಟಿಂಗ್ ದೃಶ್ಯಗಳಿವೆ. ಇದು ದೀಪಿಕಾಗೆ ಇಷ್ಟವಾಗಿಲ್ಲ. ಉತ್ತಮ ಸಿನಿಮಾಗಳನ್ನು ಮಾಡಲು ಸಂದೀಪ್ ಅವರು ಸಮರ್ಥರಲ್ಲ ಮತ್ತು ಅವರು ವೃತ್ತಿಪರವಲ್ಲದ ನಿರ್ದೇಶಕ ಎಂದೆಲ್ಲ ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿವೆ. ಆದರೆ, ಸಂದೀಪ್ ವಂಗಾ ಮಾತ್ರ ನಿಮ್ಮ ಪಿಆರ್ ಸ್ಟಂಟ್‌ಗಳಿಗೆ ಬೆದರುವ ವ್ಯಕ್ತಿ ನಾನಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಪರೋಕ್ಷವಾಗಿ ದೀಪಿಕಾ ಪಡುಕೋಣೆಗೆ ಖಡಕ್ ಕೌಂಟರ್ ಕೊಟ್ಟಿದ್ದಾರೆ.
ಒಬ್ಬ ನಿರ್ದೇಶಕನಾಗಿ, ನಾನು ಕೆಲವು ದಿನಗಳ ಹಿಂದೆ ಓರ್ವ ಖ್ಯಾತ ನಾಯಕಿಗೆ ಕಥೆಯನ್ನು ಹೇಳಿದ್ದೆ. ನಾನು ಸಂಪೂರ್ಣ ನಂಬಿಕೆಯಿಂದ ಕಥೆಯನ್ನು ಹೇಳಿದೆ ಎಂಬುದನ್ನು ಗಮನಿಸಬೇಕು. ಆದರೆ, ಅವರು ನನ್ನ ನಂಬಿಕೆಯನ್ನು ಉಳಿಸಿಕೊಳ್ಳಲಿಲ್ಲ. ಕಥೆಯನ್ನು ಸೋರಿಕೆ ಮಾಡಿದ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಕಳೆದುಕೊಂಡರು. ನಾವು ನಟರಿಗೆ ಕಥೆಯನ್ನು ಹೇಳಿದಾಗ, ಅವರು ಯಾರಿಗೂ ಹೇಳಬಾರದು ಎಂಬ ಅನೌಪಚಾರಿಕ ಒಪ್ಪಂದವಿರುತ್ತದೆ. ಆದರೆ, ನಟಿ ಅದನ್ನೂ ಉಲ್ಲಂಘಿಸಿದ್ದಾರೆ. ನಿಮ್ಮ ಸ್ತ್ರೀವಾದವು ಇದನ್ನೇ ಉಲ್ಲೇಖಿಸುತ್ತದೆಯೇ? ನಿಮ್ಮ ಪಿಆರ್ ತಂಡವು ಯುವ ನಟನನ್ನು ಕೀಳಾಗಿ ನೋಡುತ್ತದೆ. ಸ್ತ್ರೀವಾದ ಎಂದರೆ ಇದೇನಾ? ನಾನು ಸಿನಿಮಾ ನಿರ್ದೇಶಕನಾಗಿ ಕಥೆ ಬರೆಯಲು ಹಲವು ವರ್ಷಗಳಿಂದ ಶ್ರಮಿಸಿದ್ದೇನೆ. ನನಗೆ ಸಿನಿಮಾವೇ ಎಲ್ಲವೂ. ನನ್ನ ಚಿತ್ರದ ಸಂಪೂರ್ಣ ಕಥೆಯನ್ನು ನೀವು ಸೋರಿಕೆ ಮಾಡಿದರೂ, ನಾನು ಕಳೆದುಕೊಳ್ಳಲು ಏನೂ ಇಲ್ಲ ಎಂದು ಸಂದೀಪ್ #dirtyPRgames ಎಂಬ ಹ್ಯಾಶ್‌ಟ್ಯಾಗ್ ಮೂಲಕ ಕಿಡಿಕಾರಿದ್ದಾರೆ.
ಪರೋಕ್ಷವಾಗಿ ದೀಪಿಕಾ ಪಡುಕೋಣೆ ಬಗ್ಗೆ ಸಂದೀಪ್ ಟ್ವೀಟ್ ಮಾಡಿದ್ದಾರೆ. ಹೀಗಾಗಿ ನೆಟ್ಟಿಗರು ಕಾಮೆಂಟ್ ಬಾಕ್ಸ್ನಲ್ಲಿ ದೀಪಿಕಾ ಪಡುಕೋಣೆ ಅವರ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ ದೀಪಿಕಾ ಅವರು ಏನು ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್)