2026 ರ IIFA ಪ್ರಶಸ್ತಿ ಪ್ರಕಟ 
ಸಿನಿವಾಣಿ

IIFA Awards 2026: ಪ್ರಶಸ್ತಿಗಳ ಬೇಟೆಯಾಡಿದ ‘ಧುರಂಧರ್’; ರಣವೀರ್ ಸಿಂಗ್ ಅತ್ಯುತ್ತಮ ನಟ, ಅನೀತ್ ಪಡ್ಡಾ ಅತ್ಯುತ್ತಮ ನಟಿ!

ಯುಎಇ: ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಮತ್ತು ಅದ್ಧೂರಿ ಪ್ರಶಸ್ತಿ ಸಮಾರಂಭವಾದ ‘ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ’ (IIFA) 26ನೇ ಆವೃತ್ತಿಯ ವಿಜೇತರ ಪಟ್ಟಿ ಕೊನೆಗೂ ಹೊರಬಿದ್ದಿದೆ.

ಈ ಬಾರಿ ಪ್ರಶಸ್ತಿ ಅಖಾಡದಲ್ಲಿ ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ ಸಿನಿಮಾ ನಿಜವಾದ ಧುರಂಧರನಂತೆ ಮೆರೆದಿದ್ದು, ಪ್ರಮುಖ ಹಾಗೂ ತಾಂತ್ರಿಕ ವಿಭಾಗಗಳೆರಡರಲ್ಲೂ ಪ್ರಶಸ್ತಿಗಳ ಸುರಿಮಳೆಯನ್ನೇ ಕಂಡಿದೆ. ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ ಅತ್ಯುತ್ತಮ ನಟ ಪ್ರಶಸ್ತಿಗೆ ಮುತ್ತಿಕ್ಕಿದರೆ, ಅನೀತ್ ಪಡ್ಡಾ ಅತ್ಯುತ್ತಮ ನಟಿಯಾಗಿ ಹೊರಹೊಮ್ಮಿದ್ದಾರೆ.

‘ಧುರಂಧರ್’ ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆ!

2026 ರ IIFA ಪ್ರಶಸ್ತಿ ಪಟ್ಟಿಯಲ್ಲಿ ಮೊದಲಿನಿಂದ ಕೊನೆಯವರೆಗೂ ಸದ್ದು ಮಾಡಿದ್ದು ಸಿನಿಮಾ ‘ಧುರಂಧರ್’. ಈ ಚಿತ್ರದಲ್ಲಿನ ನೈಜ ಅಭಿನಯಕ್ಕಾಗಿ ರಣವೀರ್ ಸಿಂಗ್ ಅತ್ಯುತ್ತಮ ನಟ ಪ್ರಶಸ್ತಿ ಬಾಚಿಕೊಂಡರೆ, ವಿಲನ್ ಪಾತ್ರದಲ್ಲಿ ಬೆಚ್ಚಿಬೀಳಿಸಿದ್ದ ಅಕ್ಷಯ್ ಖನ್ನಾ ಅತ್ಯುತ್ತಮ ನಕಾರಾತ್ಮಕ ಪಾತ್ರದ ಅವಾರ್ಡ್ ಪಡೆದರು. ಬಾಲಿವುಡ್​ನ ಸಂಜು ಬಾಬಾ ಖ್ಯಾತಿಯ ಸಂಜಯ್ ದತ್ ಅತ್ಯುತ್ತಮ ಪೋಷಕ ನಟನಾಗಿ ಮಿಂಚಿದರು.

ಚಿತ್ರದ ಬೆನ್ನೆಲುಬಾಗಿದ್ದ ನಿರ್ದೇಶಕ ಆದಿತ್ಯ ಧರ್ ಅವರಿಗೆ ಅತ್ಯುತ್ತಮ ನಿರ್ದೇಶನ, ಮೂಲ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಸೇರಿದಂತೆ ಬರೊಬ್ಬರಿ ನಾಲ್ಕು ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇನ್ನು ತಾಂತ್ರಿಕ ವಿಭಾಗದಲ್ಲೂ ಧ್ವನಿ ವಿನ್ಯಾಸ, ಛಾಯಾಗ್ರಹಣ, ಸಂಕಲನ ಮತ್ತು ಸಂಗೀತ ನಿರ್ದೇಶನದಲ್ಲೂ ಇದೇ ಸಿನಿಮಾ ಪಾರಮ್ಯ ಮೆರೆದಿದೆ.

ಸದ್ದು ಮಾಡಿದ ‘ಛಾವಾ’ ಮತ್ತು ‘ಸಯ್ಯಾರಾ’

ತಾಂತ್ರಿಕ ವಿಭಾಗದಲ್ಲಿ ‘ಛಾವಾ’ ಸಿನಿಮಾ ತನ್ನ ಕಮಾಲ್ ತೋರಿಸಿದೆ. ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಅವರಿಗೆ ಅತ್ಯುತ್ತಮ ಹಿನ್ನೆಲೆ ಸಂಗೀತ ಅವಾರ್ಡ್ ಸಿಕ್ಕರೆ, ಧ್ವನಿ ಮಿಶ್ರಣ ಮತ್ತು ಅದ್ಭುತ ವಿಶುವಲ್ ಎಫೆಕ್ಟ್ಸ್‌ಗೆ (VFX) ‘ಛಾವಾ’ ಪ್ರಶಸ್ತಿ ಪಡೆದುಕೊಂಡಿದೆ.

ಇನ್ನೊಂದೆಡೆ ಯುವ ಪ್ರತಿಭೆಗಳ ‘ಸಯ್ಯಾರಾ’ ಚಿತ್ರವು ಸಂಗೀತ ಮತ್ತು ನಟನೆಯಲ್ಲಿ ಭರ್ಜರಿ ಮಿಂಚಿದೆ. ಈ ಚಿತ್ರದ ನಟನೆಗಾಗಿ ಅನೀತ್ ಪಡ್ಡಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರೆ, ಚೊಚ್ಚಲ ಪ್ರವೇಶ ವಿಭಾಗದಲ್ಲಿ ಅಹಾನ್ ಪಾಂಡೆ ಅತ್ಯುತ್ತಮ ಡೆಬ್ಯೂ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇರ್ಷಾದ್ ಕಾಮಿಲ್ (ಸಾಹಿತ್ಯ), ಫಹೀಮ್ ಅಬ್ದುಲ್ಲಾ ಮತ್ತು ಶ್ರೇಯಾ ಘೋಷಾಲ್ (ಹಿನ್ನೆಲೆ ಗಾಯನ) ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಆರ್ಯನ್ ಖಾನ್ ನಿರ್ದೇಶನಕ್ಕೆ ಅವಾರ್ಡ್!

ತಮ್ಮ ಚೊಚ್ಚಲ ‘ದಿ ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸರಣಿಗಾಗಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದು ಅಚ್ಚರಿ ಮೂಡಿಸಿದ್ದಾರೆ. ಇದೇ ಸರಣಿಯು ಅತ್ಯುತ್ತಮ ವೆಬ್ ಸೀರೀಸ್ ಪ್ರಶಸ್ತಿಯನ್ನೂ ಗೆದ್ದುಕೊಂಡಿದ್ದು, ರಾಘವ್ ಜುಯಲ್ ಮತ್ತು ಅನ್ಯಾ ಸಿಂಗ್ ಪೋಷಕ ನಟ-ನಟಿ ಪ್ರಶಸ್ತಿ ಪಡೆದಿದ್ದಾರೆ. ‘ಪಾತಾಳ್ ಲೋಕ್ 2’ ಸರಣಿಗಾಗಿ ಜೈದೀಪ್ ಅಹ್ಲಾವತ್ ಮತ್ತು ತಿಲೋತ್ತಮಾ ಶೋಮ್ ಅತ್ಯುತ್ತಮ ನಟ-ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಡಿಜಿಟಲ್ ಫಿಲ್ಮ್ ವಿಭಾಗದಲ್ಲಿ ‘ಬಾರಾಮುಲ್ಲಾ’ ಅತ್ಯುತ್ತಮ ಚಿತ್ರವಾಗಿ, ‘ಸ್ಟೋಲನ್’ ನಟನೆಗಾಗಿ ಅಭಿಷೇಕ್ ಬ್ಯಾನರ್ಜಿ ಪ್ರಶಸ್ತಿ ಪಡೆದಿದ್ದಾರೆ.

ವೇದಿಕೆಯಲ್ಲಿ ತಾರಾ ಮೆರುಗು

ಮುಖ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕರಣ್ ಜೋಹರ್, ವರುಣ್ ಧವನ್, ಮನೀಶ್ ಪಾಲ್ ಮತ್ತು ಅನನ್ಯಾ ಪಾಂಡೆ ತಮ್ಮ ಕಾಮಿಡಿ ಹಾಗೂ ಪಂಚಿಂಗ್ ಮಾತುಗಳಿಂದ ರಂಗೇರಿಸಲಿದ್ದಾರೆ. ಡಿಜಿಟಲ್ ಪ್ರಶಸ್ತಿ ಸಮಾರಂಭವನ್ನು ಪ್ರತಿಭಾನ್ವಿತ ನಟರಾದ ಪಂಕಜ್ ತ್ರಿಪಾಠಿ ಮತ್ತು ಅಲಿ ಫಜಲ್ ನಡೆಸಿಕೊಡಲಿದ್ದಾರೆ.

IIFA 2026 ಪ್ರಮುಖ ವಿಜೇತರ ಪಟ್ಟಿ:

ಅತ್ಯುತ್ತಮ ಚಿತ್ರ (ಮುಖ್ಯ): ಧುರಂಧರ್

ಅತ್ಯುತ್ತಮ ನಟ: ರಣವೀರ್ ಸಿಂಗ್ (ಧುರಂಧರ್)

ಅತ್ಯುತ್ತಮ ನಟಿ: ಅನೀತ್ ಪಡ್ಡಾ (ಸಯ್ಯಾರಾ)

ಅತ್ಯುತ್ತಮ ನಿರ್ದೇಶನ: ಆದಿತ್ಯ ಧರ್ (ಧುರಂಧರ್)

ಅತ್ಯುತ್ತಮ ಪೋಷಕ ನಟ: ಸಂಜಯ್ ದತ್ (ಧುರಂಧರ್)

ಅತ್ಯುತ್ತಮ ಪೋಷಕ ನಟಿ: ಹುಮಾ ಖುರೇಷಿ (ಜಾಲಿ LLB 3)

ಅತ್ಯುತ್ತಮ ಖಳನಟ: ಅಕ್ಷಯ್ ಖನ್ನಾ (ಧುರಂಧರ್)

ಅತ್ಯುತ್ತಮ ಚೊಚ್ಚಲ ನಟ: ಅಹಾನ್ ಪಾಂಡೆ (ಸಯ್ಯಾರಾ)

ಅತ್ಯುತ್ತಮ ಚೊಚ್ಚಲ ನಟಿ: ರಾಶಾ ಥಡಾನಿ (ಆಜಾದ್)

ಅತ್ಯುತ್ತಮ ಅಂತರರಾಷ್ಟ್ರೀಯ ಚಿತ್ರ: ಅವತಾರ್: ಫೈರ್ ಅಂಡ್ ಆಶ್

ಅತ್ಯುತ್ತಮ ಡಿಜಿಟಲ್ ಸರಣಿ: ದಿ ಬ್ಯಾಡ್ಸ್ ಆಫ್ ಬಾಲಿವುಡ್ (ನಿರ್ದೇಶನ: ಆರ್ಯನ್ ಖಾನ್)

ಅತ್ಯುತ್ತಮ ಡಿಜಿಟಲ್ ಚಿತ್ರ: ಬಾರಾಮುಲ್ಲಾ

(ಏಜೆನ್ಸೀಸ್​)