ಚೆನ್ನೈ: ಸಾಮಾನ್ಯವಾಗಿ ನಾವೆಲ್ಲರೂ ಚಪ್ಪಲಿ ಹಾಕಿಕೊಂಡು ಓಡಾಡುತ್ತೇವೆ. ಚಪ್ಪಲಿ ಇಲ್ಲದೆ ಮನೆಯಿಂದ ಆಚೆ ಸಹ ಬರುವುದಿಲ್ಲ. ಕೆಲವರು ಮನೆಯ ಒಳಗೂ ಚಪ್ಪಲಿ ಧರಿಸುತ್ತಾರೆ. ಇನ್ನು ದೇವಸ್ಥಾನಕ್ಕೆ ಹೋಗುವಾಗ ಅಥವಾ ಕೆಲವು ವಿಶೇಷ ಸಂದರ್ಭಗಳಲ್ಲಿ ಚಪ್ಪಲಿಯನ್ನು ಧರಿಸುವುದಿಲ್ಲ. ಆದರೆ ಜೀವನಪೂರ್ತಿ ಬರಿಗಾಲಿನಲ್ಲಿ ಓಡಾಡುವವರು ಬಹಳ ಕಡಿಮೆ. ಸಾಧು ಮತ್ತು ಸಂತರನ್ನು ಹೊರತುಪಡಿಸಿ, ಎಲ್ಲ ಸಾಮಾನ್ಯ ಜನರು ಚಪ್ಪಲಿಯನ್ನು ಧರಿಸುತ್ತಾರೆ. ಆದರೆ, ಕಾಲಿವುಡ್ನ ಖ್ಯಾತ ನಟ ವಿಜಯ್ ಆಂಟೋನಿ ಜೀವನ ಪರ್ಯಂತ ಚಪ್ಪಲಿ ಧರಿಸದೇ ಇರಲು ನಿರ್ಧರಿಸಿದ್ದಾರೆ.
ಅಂದಹಾಗೆ ವಿಜಯ್ ಆಂಟೋನಿ ಓರ್ವ ಬಹುಮುಖ ಪ್ರತಿಭೆ. ಮ್ಯೂಸಿಕ್ ಡೈರೆಕ್ಟರ್, ಗಾಯಕ, ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ವಲಂಡಿಲ್ ಪಲ್ತೆನೆ, ಡಿಸುಮೆ, ವೆಡೆತ್ತಕಾರನ್ ಮತ್ತು ಅಂಗಡಿತ್ ಸ್ಟ್ರೀಟ್ ಸೇರಿದಂತೆ ಅನೇಕ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾನ್, ಕಲಿ, ಪಿಚೈಕಾರನ್, ಸೈತಾನ್, ಕೊಲೈಗಾರ, ವಿಜಯ್ ರಾಘವನ್, ಪಿಚೈಕಾರನ್ 2 ಮತ್ತು ತಿಮಿರು ಪುಡಿಚವನ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪಿಚೈಕಾರನ್ 1 ಮತ್ತು ಭಾಗ 2ನ್ನು ವಿಜಯ್ ಅವರೇ ನಿರ್ದೇಶನ ಮಾಡಿದ್ದು, ಈ ಎರಡು ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು.
ಇದೀಗ ವಿಜಯ್ ಆಂಟೋನಿ ತುಫಾನ್ ಎಂಬ ಸಿನಿಮಾದೊಂದಿಗೆ ಶೀಘ್ರದಲ್ಲೇ ತೆರೆಯ ಬರಲಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಟೀಸರ್ ಲಾಂಚ್ ಕಾರ್ಯಕ್ರಮ ನಡೆದಿದ್ದು, ವಿಜಯ್ ಆಂಟೋನಿ ಈ ಸಮಾರಂಭದಲ್ಲಿ ಬರಿಗಾಲಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು.
ಈ ಬಗ್ಗೆ ಪ್ರಶ್ನಿಸಿದಾಗ ವಿಜಯ್ ಆಂಟೋನಿ ನೀಡಿದ ಉತ್ತರವೇನೆಂದರೆ, ಬರಿಗಾಲಿನಲ್ಲಿರುವುದು ತುಂಬಾ ಚೆನ್ನಾಗಿದೆ. ಮೊದಲಿಗೆ ಸ್ವಲ್ಪ ನೋವು ಇರುತ್ತದೆ ಮತ್ತು ವಿಚಿತ್ರವೆನಿಸುತ್ತದೆ. ಆದರೆ, ನಂತರ ಅದು ಕೂಲ್ ಎನಿಸುತ್ತದೆ. ಇದು ಆರೋಗ್ಯಕ್ಕೂ ಒಳ್ಳೆಯದು. ನಾನು ಜೀವನ ಪರ್ಯಂತ ಹೀಗೆ ಬರಿಗಾಲಿನಲ್ಲಿ ಇರಲು ಸಂಕಲ್ಪ ಮಾಡಿದ್ದೇನೆ, ಬೇಕಾದರೆ ನೀವೂ ಟ್ರೈ ಮಾಡಿ ನೋಡಿ ಎಂದರು.
ಅಂದಹಾಗೆ ಕಳೆದ ವರ್ಷ ವಿಜಯ್ ಆಂಟೋನಿ ಪುತ್ರಿ ಮೀರಾ ಆತ್ಮಹತ್ಯೆ ಮಾಡಿಕೊಂಡ ವಿಚಾರ ನಿಮಗೆಲ್ಲ ಗೊತ್ತೇ ಇದೆ. ಅಂದಿನಿಂದ ಅವರು ಸ್ವಲ್ಪ ವೇದಾಂತಿಕವಾಗಿ ಮಾತನಾಡುತ್ತಿದ್ದಾರೆ ಮತ್ತು ಜೀವನದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ನಂಬಲಾಗಿದೆ. (ಏಜೆನ್ಸೀಸ್)