ಸಿನಿವಾಣಿ

ಸಗಣಿ ಮೆತ್ತಿದ ಕೈಗಳಿಂದಲೇ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದೆ: ನಿತ್ಯಾ ಮೆನನ್​ ಅಚ್ಚರಿ ಹೇಳಿಕೆ! Nithya Menen

Nithya Menen : ನಟಿ ನಿತ್ಯಾ ಮೆನನ್​ ಹೆಸರು ಕೇಳಿದ ಮೇಲೆ ಅವರ ಬಗ್ಗೆ ಹೆಚ್ಚು ಪರಿಚಯ ಮಾಡುವ ಅವಶ್ಯಕತೆ ಇಲ್ಲ. ಏಕೆಂದರೆ, ನಿತ್ಯಾ ಕೇವಲ ಒಂದು ಸಿನಿಮಾ ರಂಗಕ್ಕೆ ಸೀಮಿತವಾಗಿಲ್ಲ. ಟಾಲಿವುಡ್​, ಕಾಲಿವುಡ್​, ಸ್ಯಾಂಡಲ್​ವುಡ್​ ಹಾಗೂ ಮಾಲಿವುಡ್​ನಲ್ಲಿ ನಿತ್ಯಾ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಕನ್ನಡದಲ್ಲಿ ಜೋಶ್​, ಮೈನಾ ಹಾಗೂ ಕೋಟಿಗೊಬ್ಬ 2 ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನದಲ್ಲಿ ಮನೆ ಮಾಡಿದ್ದಾರೆ. ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವ ನಿತ್ಯಾ, ಕನ್ನಡಿಗರಿಗೂ ಅಚ್ಚುಮೆಚ್ಚು.

ನಿತ್ಯಾ ಮೆನನ್ ಅವರು ತಮ್ಮ ವಿಭಿನ್ನ ಪಾತ್ರಗಳ ಮೂಲಕವೇ ಚಿತ್ರರಂಗದಲ್ಲಿ ವಿಶಿಷ್ಟವಾದ ಗುರುತನ್ನು ಮೂಡಿಸಿದ್ದಾರೆ. ಹೀರೋ ಯಾರೇ ಆಗಿರಲಿ, ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ನಿತ್ಯಾ ಮೆನನ್ ಪ್ರಾಮುಖ್ಯತೆ ನೀಡುತ್ತಾರೆ. ಅಲ್ಲದೆ, ನಿತ್ಯಾ ನಟಿಸಿದ ಅನೇಕ ಸಿನಿಮಾಗಳಲ್ಲಿ ಅವರ ಪಾತ್ರವೇ ಪ್ರೇಕ್ಷಕರನ್ನು ಹೆಚ್ಚು ಗಮನ ಸೆಳೆದಿದೆ. ಇನ್ನು ಸಿನಿಮಾ ದೊಡ್ಡದಾದಷ್ಟೂ ಸಂಭಾವನೆ ಕೂಡ ಹೆಚ್ಚುತ್ತದೆ ಎಂಬ ಕಾರಣಕ್ಕೆ ದೊಡ್ಡ ಚಿತ್ರಗಳನ್ನು ನಿತ್ಯಾ ಒಪ್ಪುವುದಿಲ್ಲ. ತಮ್ಮ ಪಾತ್ರಕ್ಕೆ ಆದ್ಯತೆ ನೀಡಿದರೆ ಮಾತ್ರ ಅದರಲ್ಲಿ ನಟಿಸುತ್ತಾರೆ. ಹೀಗಾಗಿ ತಾನು ನಿರ್ವಹಿಸಿದ ಪಾತ್ರಗಳಿಗೆ ಸಾಕಷ್ಟು ಚಪ್ಪಾಳೆ ಗಿಟ್ಟಿಸಿದ್ದಾರೆ.

ಇತ್ತೀಚೆಗೆ ಸಿನಿಮಾ ವಿಕಟನ್‌ ಹೆಸರಿನ ಯೂಟ್ಯೂಬ್​ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ನಿತ್ಯಾ ಅವರು ಆಸಕ್ತಿಕರ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ, ಧನುಷ್​ ನಟನೆಯ 'ತಿರುಚಿತ್ರಂಬಲಂ' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿಗಾಗಿ ನಿತ್ಯಾ ರಾಷ್ಟ್ರಪ್ರಶಸ್ತಿ ಪಡೆದರು. ಈ ಪ್ರಶಸ್ತಿಯನ್ನು ಸ್ವೀಕರಿಸಲು ಹೋಗುವ ಹಿಂದಿನ ದಿನ, ಮತ್ತೊಂದು ಸಿನಿಮಾಕ್ಕಾಗಿ ಸಗಣಿ ಬಳಿಯುವ ದೃಶ್ಯವನ್ನು ಅಭ್ಯಾಸ ಮಾಡುತ್ತಿದ್ದರು.

ನಾನು 'ಇಡ್ಲಿ ಕಡೈ' ಚಿತ್ರದಲ್ಲಿ ಸಗಣಿ ಕೇಕ್ (ಬೆರಣಿ) ಮಾಡುವುದನ್ನು ಕಲಿತಿದ್ದೇನೆ. ಬೆರಣಿ ಮಾಡಲು ಸಿದ್ಧರಿದ್ದೀರಾ ಎಂದು ಕೇಳಿದರು. ನಾನು 'ಖಂಡಿತ' ಎಂದು ಹೇಳಿದೆ. ಹಾಗಾಗಿ ನನ್ನ ಜೀವನದಲ್ಲಿ ಮೊದಲ ಬಾರಿಗೆ ಬೆರಣಿ ತಯಾರಿಸಿದ್ದೇನೆ. ಅದು ಕೂಡ ನನ್ನ ಬರಿ ಕೈಗಳಿಂದ ಬೆರಣಿ ಉರುಳಿಸಲು ಕಲಿತಿದ್ದೇನೆ. ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಲು ಹೋದಾಗ, ತನ್ನ ಉಗುರುಗಳ ಕೆಳಗೆ ಸಗಣಿ ಇತ್ತು ಎಂದು ನಟಿ ತಮಾಷೆಯಾಗಿ ನೆನಪಿಸಿಕೊಂಡರು.

ಅಂದಹಾಗೆ, 'ಇಡ್ಲಿ ಕಡೈ' ಧನುಷ್ ನಿರ್ದೇಶನ ಮತ್ತು ನಿರ್ಮಾಣದ ಫ್ಯಾಮಿಲಿ ಡ್ರಾಮಾ ಚಿತ್ರ. ನಿತ್ಯ ಮೆನನ್ ಮತ್ತು ಧನುಷ್ ಅವರಲ್ಲದೆ, ಇಡಲಿ ಕಡೈ ಚಿತ್ರದಲ್ಲಿ ಅರುಣ್ ವಿಜಯ್, ಶಾಲಿನಿ ಪಾಂಡೆ, ಸತ್ಯರಾಜ್, ಪಾರ್ತಿಪನ್ ಮತ್ತು ಸಮುದ್ರಕನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ. 2022 ರ 'ತಿರುಚಿತ್ರಾಂಬಲಂ' ಚಿತ್ರದ ನಂತರ ಧನುಷ್ ಮತ್ತು ನಿತ್ಯಾ ಮೆನನ್ ಒಂದಾಗುತ್ತಿರುವ ಎರಡನೇ ಚಿತ್ರ ಇದಾಗಿದೆ. (ಏಜೆನ್ಸೀಸ್​)