ಸಿನಿವಾಣಿ

ಡ್ರಗ್ಸ್​ ಜಾಲದ ಜೊತೆಗೆ ಯಾವುದೇ ನಂಟಿಲ್ಲ ಅರ್ಜುನ್​ ರಾಮ್​ಪಾಲ್​

ಮುಂಬೈ: ಬಾಲಿವುಡ್​ ಮತ್ತು ಡ್ರಗ್ಸ್​ ನಂಟಿನ ಕುರಿತಾಗಿ ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ (ಎನ್​ಸಿಬಿ)ದವರು ಕಳೆದ ಕೆಲವು ತಿಂಗಳುಗಳಿಂದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್​, ರಾಕುಲ್​ ಪ್ರೀತ್​ ಸಿಂಗ್​ ಸೇರಿದಂತೆ ಸಾಕಷ್ಟು ನಟ-ನಟಿಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಇದೀಗ ಅರ್ಜುನ್​ ರಾಮ್​ಪಾಲ್​ ಅವರನ್ನು ಶುಕ್ರವಾರ, ಸುಮಾರು ಏಳು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಅರ್ಜುನ್​ ಅಷ್ಟೇ ಅಲ್ಲ, ಅವರ ಗೆಳತಿ ಗೇಬ್ರಿಯಲ್ಲಾ ಡಿಮೆಟ್ರಿಯಾಡ್ಸ್​ ಅವರನ್ನು ಸಹ ಬುಧವಾರ ಮತ್ತು ಗುರುವಾರ ತೀವ್ರ ವಿಚಾರಣೆ ಮಾಡಿ ಹಲವು ವಿಷಯಗಳನ್ನು ಸಂಗ್ರಹಿಸಿದ್ದಾರೆ.

ಶುಕ್ರವಾರ ವಿಚಾರಣೆಗೆ ಹಾಜರಾಗಿ ಮಾಹಿತಿ ಕೊಟ್ಟು ಹೊರಬಂದ ಅರ್ಜುನ್​ ರಾಮ್​​ಪಾಲ್​, ಡ್ರಗ್ಸ್​ ವಿಷಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, 'ನನಗೂ ಈ ಡ್ರಗ್ಸ್​ ಜಾಲಕ್ಕೂ ಯಾವುದೇ ಸಂಬಂಧವಿಲ್ಲ. ಎನ್​ಸಿಬಿ ಅಧಿಕಾರಿಗಳು ನಮ್ಮ ಮನೆಯಲ್ಲಿ ರೇಡ್​ ಮಾಡಿದಾಗ ಕೆಲವು ಪ್ರಿಸ್ಕ್ರಿಪ್ಶನ್​ಗಳು ಸಿಕ್ಕಿವೆ. ಅದರ ಕುರಿತು ನನ್ನ ಹೇಳಿಕೆ ಪಡೆಯುವುದಕ್ಕೆ ಕರೆಸಿಕೊಂಡಿದ್ದರು. ಈ ಪ್ರಿಸ್ಕ್ರಿಪ್ಶನ್​ಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದೇನೆ ಮತ್ತು ಅವರ ವಿಚಾರನೆಯಲ್ಲಿ ಪೂರ್ಣವಾಗಿ ಸಹಕರಿಸಿದ್ದೇನೆ' ಎಂದು ಹೇಳಿದ್ದಾರೆ.

ಇತ್ತೀಚೆಗೆ ಅರ್ಜುನ್​ ರಾಮ್​ಪಾಲ್​ ಅವರ ಮನೆಗೆ ದಾಳಿ ಮಾಡಿದ ಸಂದರ್ಭದಲ್ಲಿ ಎನ್​ಸಿಬಿ ಅಧಿಕಾರಿಗಳು ಲ್ಯಾಪ್​ಟಾಪ್​, ಮೊಬೈಲ್​ ಫೋನ್​ ಮತ್ತು ಕೆಲವು ಮಾತ್ರೆಗಳನ್ನು ವಶಕ್ಕೆ ಪಡೆದಿದ್ದಾರೆ. ಜತೆಗೆ ಅರ್ಜುನ್​ ಅವರ ಡ್ರೈವರ್​ನನ್ನು ವಿಚಾರಣೆ ಮಾಡಿದ್ದು, ಅವನಿಂದ ಹಲವು ಮಾಹಿತಿಗಳನ್ನು ಕಲೆಹಾಕಿದ್ದಾರೆ ಎಂದು ಹೇಳಲಾಗಿದೆ.