ಬ್ರೆಜಿಲ್: ಪ್ರಸ್ತುತ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮತ್ತು ಬಾಲಿವುಡ್ನ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಅಭಿನಯಿಸುತ್ತಿರುವ 'ವಾರಣಾಸಿ' ಚಿತ್ರದ ನಿರ್ದೇಶನದಲ್ಲಿ ಸಖತ್ ಬಿಜಿಯಾಗಿರುವ ಪ್ಯಾನ್ ಇಂಡಿಯಾ ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರ ಇತ್ತೀಚಿನ ಹೇಳಿಕೆಯೊಂದು ಇಡೀ ಭಾರತೀಯ ಚಿತ್ರೋದ್ಯಮದ ಗಮನವನ್ನು ಸೆಳೆದಿದೆ.
ಬ್ಲಾಕ್ಬಸ್ಟರ್ ಆರ್ಆರ್ಆರ್ ಚಿತ್ರಕ್ಕೆ ಹಲವು ಪ್ರಶಸ್ತಿಗಳ ಜತೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನೂ ಗೆದ್ದು ವಿಶ್ವದಾದ್ಯಂತ ಖ್ಯಾತಿಯನ್ನು ಗಳಿಸಿದ ರಾಜಮೌಳಿ, 'ವಾರಣಾಸಿ' ಚಿತ್ರವನ್ನು ಪ್ಯಾನ್ ವರ್ಲ್ಡ್ ರಿಲೀಸ್ ಮಾಡಲು ಎದುರುನೋಡುತ್ತಿದ್ದಾರೆ. ಹಾಲಿವುಡ್ ಬಿಡುಗಡೆಗೆಂದೇ ಪ್ಲ್ಯಾನ್ ಹಾಕಿಕೊಂಡಿರುವ ನಿರ್ದೇಶಕರು, ಅಂದಾಜು 1000 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾಗೆ ಜೀವ ತುಂಬುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಚಿತ್ರದ ಚಿತ್ರೀಕರಣ ಅಂತಿಮ ಹಂತದಲ್ಲಿದ್ದು, ಮುಂದಿನ ವರ್ಷ ಏಪ್ರಿಲ್ 7ರಂದು ಸಿನಿಮಾ ತೆರೆಗೆ ಬರಲಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.
ಬ್ರೆಜಿಲ್ನಲ್ಲಿ ನಡೆದ 50ನೇ ಸಾವೊ ಪಾಲೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾತನಾಡಿದ ರಾಜಮೌಳಿ, 'ಆರ್ಆರ್ಆರ್ ಸಿನಿಮಾದ ಬಳಿಕ ನನಗೆ ಹಾಲಿವುಡ್ನಿಂದ ಸಾಕಷ್ಟು ಆಫರ್ಗಳು ಬಂದಿವೆ. ಈ ಚಿತ್ರೋದ್ಯಮದಲ್ಲಿ ಅಭಿನಯ ಮತ್ತು ನಿರ್ಮಾಣ ಶೈಲಿ ಅದ್ಭುತವಾಗಿದೆ. ಇಲ್ಲಿಂದ ಕಲಿಯುವುದು ಬಹಳಷ್ಟಿದೆ. ಹಾಗಾಗಿ, ಹಾಲಿವುಡ್ನಲ್ಲಿ ಕನಿಷ್ಠ ಒಂದು ಚಿತ್ರವನ್ನಾದರೂ ಮಾಡಬೇಕೆಂದು ಆಸೆ. ನನ್ನ ಮುಂದಿನ ಚಿತ್ರ ವಾರಣಾಸಿಯ ಬಿಡುಗಡೆ ನಂತರ ಹಾಲಿವುಡ್ನಿಂದ ಸಿಕ್ಕಿರುವ ಆಫರ್ಗಳ ಬಗ್ಗೆ ಖಂಡಿತಾ ಯೋಚಿಸುತ್ತೇನೆ ಎಂದರು.
ಭಾರತೀಯ ಚಿತ್ರೋದ್ಯಮಕ್ಕೆ 'ಮಗಧೀರ', 'ಈಗ', 'ಬಾಹುಬಲಿ', 'ಆರ್ಆರ್ಆರ್' ನಂತಹ ಹಲವಾರು ಸೂಪರ್ಹಿಟ್ ಸಿನಿಮಾಗಳನ್ನು ಕೊಟ್ಟಿರುವ ರಾಜಮೌಳಿ, ವಾರಣಾಸಿ ಬಳಿಕ ಖಂಡಿತವಾಗಿ ಹಾಲಿವುಡ್ನಲ್ಲಿಯೂ ಒಂದು ಸಿನಿಮಾ ಮಾಡಬಹುದು ಎಂದು ಸಿನಿಪ್ರಿಯರು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).