ಕಾವಾಲಯ್ಯಾ ಹಾಡಿಗೆ ನಾನು... ಇಷ್ಟು ದಿನ ಮಿಲ್ಕಿ ಬ್ಯೂಟಿ ತಮನ್ನಾ ಮುಚ್ಚಿಟ್ಟಿದ್ದ ರಹಸ್ಯ ಕೊನೆಗೂ ಬಯಲು! Tamannaah Bhatia
- ಫರಾ ಖಾನ್ ಯೂಟ್ಯೂಬ್ ಚಾನೆಲ್‌ನಲ್ಲಿ ಶಾಕಿಂಗ್ ಸತ್ಯ ಬಿಚ್ಚಿಟ್ಟ ನಟಿ ತಮನ್ನಾ ಭಾಟಿಯಾ
- 650 ಕೋಟಿ ಗಳಿಸಿದ 'ಜೈಲರ್' ಚಿತ್ರದ ಬ್ಲಾಕ್‌ಬಸ್ಟರ್ ಸಾಂಗ್ ಬಗ್ಗೆ ತಮನ್ನಾಗೆ ಇತ್ತಾ ಅಸಮಾಧಾನ?
- ಕಾವಾಲಯ್ಯಾ ಸಾಂಗ್ ಶೂಟಿಂಗ್ ಮುಗಿದಾಗ ಬೇಸರವಾಗಿತ್ತು ಎಂದ ನಟಿ ತಮನ್ನಾ
- 'ಕಾವಾಲಯ್ಯಾ' ಹಾಡಿಗೆ ಸರಿಯಾಗಿ ನ್ಯಾಯ ಒದಗಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಗ್ಲಾಮರ್ ಕ್ವೀನ್
Tamannaah Bhatia : ಮಲಯಾಳಂ ಸೇರಿದಂತೆ ದೇಶಾದ್ಯಂತ ಕೋಟ್ಯಂತರ ಅಭಿಮಾನಿ ಬಳಗವನ್ನು ಹೊಂದಿರುವ ಸೌತ್ ಸಿನಿರಂಗದ ಗ್ಲಾಮರ್ ಕ್ವೀನ್ ತಮನ್ನಾ ಭಾಟಿಯಾ ಅವರ 'ಜೈಲರ್' ಸಿನಿಮಾದ ಆ ಸೂಪರ್ ಹಿಟ್ ಸಾಂಗ್ ನಿಮಗೆ ನೆನಪಿರಬೇಕಲ್ವಾ? ಹೌದು, 2023 ರಲ್ಲಿ ತೆರೆಕಂಡ ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಈ ಚಿತ್ರದಲ್ಲಿ ತಮನ್ನಾ ಬೌನ್ಸಿ ಸ್ಟೆಪ್ಸ್ ಹಾಕಿದ್ದ ಆ ಹಾಡು ಅಷ್ಟರಮಟ್ಟಿಗೆ ಧೂಳೆಬ್ಬಿಸಿತ್ತು. ಇಂದಿಗೂ ಪ್ರೇಕ್ಷಕರ ಫೇವರಿಟ್ ಆಗಿರುವ ಈ ಹಾಡಿನಲ್ಲಿ ತಮನ್ನಾ ಅವರ ಮಾದಕ ನೃತ್ಯ ಹಾಗೂ ರಜನಿಕಾಂತ್-ತಮನ್ನಾ ಅವರ ಜಬರ್ದಸ್ತ್ ಕಾಂಬಿನೇಷನ್ ಸಿನಿಪ್ರೇಮಿಗಳ ಮನಗೆದ್ದಿತ್ತು. ರಾಕ್‌ಸ್ಟಾರ್ ಅನಿರುದ್ಧ್ ಕಂಪೋಸ್ ಮಾಡಿದ್ದ ಈ ಅದ್ಭುತ ಹಾಡಿನಲ್ಲಿ ತಮನ್ನಾ ಪರ್ಫಾರ್ಮೆನ್ಸ್ ನೋಡಿ ಇಡೀ ಸೌತ್ ಇಂಡಿಯಾ ಫಿದಾ ಆಗಿದ್ದಂತೂ ಸುಳ್ಳಲ್ಲ!
'ಜೈಲರ್' ಸಿನಿಮಾ ಬಿಡುಗಡೆಯಾಗಿ ವರ್ಷಗಳೇ ಕಳೆದರೂ, ಇಂದಿಗೂ ಆ ಸೂಪರ್ ಹಿಟ್ ಹಾಡಿನ ಸಾಹಿತ್ಯ ಮತ್ತು ಸಿಗ್ನೇಚರ್ ಸ್ಟೆಪ್ಸ್‌ಗಳನ್ನು ಫಾಲೋ ಮಾಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವವರ ಸಂಖ್ಯೆಗೇನೂ ಕೊರತೆಯಿಲ್ಲ. ಹೀಗಿರುವಾಗ, ಇದೀಗ ಇದೇ ಹಾಡಿನ ಕುರಿತು ನಟಿ ತಮನ್ನಾ ಭಾಟಿಯಾ ಮಾಡಿರುವ ಹೊಸದೊಂದು ಶಾಕಿಂಗ ವಿಚಾರ ಇಂಟರ್ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದ್ದು, ನೆಟ್ಟಿಗರ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ಬಾಲಿವುಡ್‌ನ ಖ್ಯಾತ ನಿರ್ದೇಶಕಿ ಹಾಗೂ ನೃತ್ಯ ಸಂಯೋಜಕಿ ಫರಾ ಖಾನ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಫರಾ ಖಾನ್ ಅವರು ತಮನ್ನಾ ಭಾಟಿಯಾ ಅವರ ಮನೆಗೆ ಭೇಟಿ ನೀಡಿದ್ದ ಸಂದರ್ಭದ ವಿಡಿಯೋ ಇದಾಗಿದ್ದು, ಇದರಲ್ಲಿ ಇಬ್ಬರೂ ಒಟ್ಟಾಗಿ ಕುಳಿತು ಸಿನಿಮಾ ಹಾಗೂ ಕೆಲವು ಹಿಟ್ ಗೀತೆಗಳ ಬಗ್ಗೆ ಹರಟೆ ಹೊಡೆದಿದ್ದಾರೆ. ಈ ಮಾತುಕತೆಯ ಮಧ್ಯೆ, ನಟಿ ತಮನ್ನಾ ಅವರು ತಮ್ಮದೇ ಕೆರಿಯರ್‌ನ ಅತಿ ದೊಡ್ಡ ಚಾರ್ಟ್‌ಬಸ್ಟರ್ ಹಾಡಾದ 'ಕಾವಾಲಯ್ಯಾ' ಕುರಿತು ಒಂದು ಆಸಕ್ತಿದಾಯಕ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ಕಾವಾಲಯ್ಯಾ ಹಾಡಿನ ಶೂಟಿಂಗ್ ಮುಗಿದ ನಂತರ ನನಗೆ ತೃಪ್ತಿಯೇ ಇರಲಿಲ್ಲ ಮತ್ತು ಅದರಲ್ಲಿ ನಾನು ಸರಿಯಾಗಿ ಪರ್ಫಾರ್ಮ್ ಮಾಡಲು ಸಾಧ್ಯವಾಗಲಿಲ್ಲ ಎಂದೇ ಭಾವಿಸಿದ್ದೆ, ಏಕೆಂದರೆ ಆ ಹಾಡಿನಲ್ಲಿ ಅತ್ಯುತ್ತಮವಾಗಿ ನೃತ್ಯ ಮಾಡಬಲ್ಲೆ ಎಂಬ ನಂಬಿಕೆ ನನಗಿತ್ತು. ಆದರೆ, 'ಸ್ತ್ರೀ 2' ಸಿನಿಮಾದ 'ಆಜ್ ಕೀ ರಾತ್' ಹಾಡಿಗಾಗಿ ನಾನು ಸುಮಾರು 15 ದಿನಗಳ ಕಾಲ ಸತತವಾಗಿ ನೃತ್ಯ ತಾಲೀಮು ನಡೆಸಿದ್ದೆ ಎಂದು ತಮನ್ನಾ ಭಾಟಿಯಾ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಕಾವಾಲಯ್ಯ ಹಾಡಿಗೆ ಸರಿಯಾಗಿ ನ್ಯಾಯ ಒದಗಿಸಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಅಂದಹಾಗೆ, ಸೂಪರ್‌ಸ್ಟಾರ್ ರಜನಿಕಾಂತ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ಜೈಲರ್' ಸಿನಿಮಾವು ಆಗಸ್ಟ್ 10, 2023 ರಂದು ವಿಶ್ವಾದ್ಯಂತ ಅತ್ಯಂತ ಅದ್ಧೂರಿಯಾಗಿ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಮಾಲಿವುಡ್ ಸೂಪರ್‌ಸ್ಟಾರ್ ಮೋಹನ್‌ಲಾಲ್, ಬಾಲಿವುಡ್ ನಟ ಜಾಕಿ ಶ್ರಾಫ್, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್, ವಿನಾಯಕನ್ ಮತ್ತು ಯೋಗಿ ಬಾಬು ಸೇರಿದಂತೆ ಭಾರತೀಯ ಚಿತ್ರರಂಗದ ದೈತ್ಯ ತಾರಾಗಣವೇ ಒಂದೆಡೆ ಸೇರಿತ್ತು. ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ್ದ ಈ ಸಿನಿಮಾ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಪಡೆದು, ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 650 ಕೋಟಿ ರೂಪಾಯಿಗೂ ಅಧಿಕ ಭರ್ಜರಿ ಗಳಿಕೆ ಮಾಡುವ ಮೂಲಕ ಕಾಲಿವುಡ್ ಇತಿಹಾಸದಲ್ಲೇ ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ಹಿಟ್ ಚಿತ್ರಗಳ ಸಾಲಿಗೆ ಸೇರಿತು, (ಏಜೆನ್ಸೀಸ್).