ಪ್ಲೀಸ್ ವಾಪಸ್ ತಗೊಳ್ಳಿ... ಕೊನೆಗೂ ನಟಿ ಹನಿ ರೋಸ್ ಮುಂದೆ ಮಂಡಿಯೂರಿದ ಉದ್ಯಮಿ ಬಾಬಿ ಚೆಮ್ಮಣ್ಣೂರ್! Honey Rose
- ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ ಉದ್ಯಮಿ ಬಾಬಿ
- ಕಳೆದ ವರ್ಷ ಜೈಲು ಪಾಲಾಗಿದ್ದ ಉದ್ಯಮಿ ಬಾಬಿ ಚೆಮ್ಮಣ್ಣೂರ್ ಕೊನೆಗೂ ನಟಿ ಹನಿ ರೋಸ್ ಬಳಿ ಕ್ಷಮೆ ಕೇಳಿದ್ದೇಕೆ?
- ಕೇಸ್ ವಾಪಸ್ ಪಡೆಯುವಂತೆ ನಟಿ ಹನಿ ರೋಸ್ ಕಾಲು ಹಿಡಿದ ಉದ್ಯಮಿ ಬಾಬಿ
- ತಪ್ಪು ಒಪ್ಪಿಕೊಂಡು ಪ್ರಕರಣ ಇತ್ಯರ್ಥಕ್ಕೆ ಮುಂದಾದ ಬಾಬಿ ಚೆಮ್ಮಣ್ಣೂರ್
Honey Rose : ಖ್ಯಾತ ಮಲಯಾಳಂ ನಟಿ ಹನಿ ರೋಸ್ ವಿರುದ್ಧ ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ್ದ ಉದ್ಯಮಿ ಬಾಬಿ ಚೆಮ್ಮಣ್ಣೂರ್ ಕೊನೆಗೂ ತಮ್ಮ ವರ್ತನೆಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
ಹನಿ ರೋಸ್ ನೀಡಿದ್ದ ಲೈಂಗಿಕ ಕಿರುಕುಳ ದೂರಿನ ಆಧಾರದ ಮೇಲೆ ಕಳೆದ ವರ್ಷ ಬಾಬಿ ಚೆಮ್ಮಣ್ಣೂರ್ ಅವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು, ತದನಂತರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಸದ್ಯ ತಮ್ಮ ಹಳೆಯ ವಿವಾದಾತ್ಮಕ ಹೇಳಿಕೆಗಳ ಕುರಿತು ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಬಹಿರಂಗವಾಗಿ ವಿಷಾದ ವ್ಯಕ್ತಪಡಿಸಿರುವ ಬಾಬಿ, ನಟಿಯ ಮನಸ್ಸಿಗೆ ನೋವುಂಟು ಮಾಡಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ.
ವಾಸ್ತವವಾಗಿ, ನಾನು ಪ್ರತಿಯೊಬ್ಬರನ್ನೂ ಗೌರವ, ಪ್ರೀತಿ, ಕಾಳಜಿ ಮತ್ತು ಸಹಾನುಭೂತಿಯಿಂದ ಕಾಣುವ ವ್ಯಕ್ತಿಯಾಗಿದ್ದೇನೆ. ನಾನು ಎಂದಿಗೂ ಯಾರಿಗೂ ಉದ್ದೇಶಪೂರ್ವಕವಾಗಿ ನೋವುಂಟು ಮಾಡಿಲ್ಲ ಅಥವಾ ದುರ್ವರ್ತನೆ ತೋರಿಲ್ಲ. ನನ್ನಿಂದ ಸಾಧ್ಯವಾದಾಗಲೆಲ್ಲಾ ಇತರರಿಗೆ ಸಹಾಯ ಮಾಡಲು ನಾನು ಪ್ರಯತ್ನಿಸುತ್ತೇನೆ. ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ತಮಾಷೆಯ ಹಾಗೂ ಹಗುರವಾದ ವಿಷಯಗಳನ್ನು ಹಂಚಿಕೊಳ್ಳುತ್ತೇನೆಯೇ ವಿನಃ, ಅದು ಯಾರನ್ನಾದರೂ ಅವಮಾನಿಸುವ, ಅವರ ಮನಸ್ಸಿಗೆ ನೋವುಂಟು ಮಾಡುವ ಅಥವಾ ಬೇಸರಗೊಳಿಸುವ ಉದ್ದೇಶವನ್ನು ಖಂಡಿತಾ ಹೊಂದಿರುವುದಿಲ್ಲ ಎಂದು ಬಾಬಿ ಚೆಮ್ಮಣ್ಣೂರ್ ತಮ್ಮ ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.
ನಟಿ ಹನಿ ರೋಸ್ ಕುರಿತು ನಾನು ನೀಡಿದ ಹೇಳಿಕೆಗಳು ಅವರಿಗೂ ಹಾಗೂ ಅವರ ಕುಟುಂಬದವರಿಗೂ ತೀವ್ರ ಮಾನಸಿಕ ನೆಮ್ಮದಿ ಕೆಡಿಸಿವೆ ಮತ್ತು ನೋವುಂಟು ಮಾಡಿವೆ ಎಂಬುದನ್ನು ನಾನು ಈಗ ಅರಿತುಕೊಂಡಿದ್ದೇನೆ. ನನ್ನ ಮಾತುಗಳು ಉಂಟುಮಾಡಿದ ಈ ನೋವಿಗೆ ನಾನು ಸಂಪೂರ್ಣ ಜವಾಬ್ದಾರಿ ಹೊತ್ತು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಯಾರಿಗೂ ಬೇಸರ ತರುವ ಉದ್ದೇಶ ನನಗಿರಲಿಲ್ಲ. ನನ್ನ ಈ ಹೃತೂರ್ವಕ ಕ್ಷಮಾಪಣೆಯನ್ನು ಸ್ವೀಕರಿಸಿ, ಅವರು ಈ ಪ್ರಕರಣವನ್ನು ಹಿಂಪಡೆಯುತ್ತಾರೆ ಮತ್ತು ವಿಷಯವನ್ನು ಇಲ್ಲಿಗೇ ಮುಕ್ತಾಯಗೊಳಿಸುತ್ತಾರೆ ಎಂದು ಭಾವಿಸುತ್ತೇನೆ. ಇನ್ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸಕಾರಾತ್ಮಕವಾಗಿ ಮುನ್ನಡೆಯಲು ನಾನು ಬದ್ಧನಾಗಿದ್ದೇನೆ ಎಂದು ಬಾಬಿ ಚೆಮ್ಮಣ್ಣೂರ್ ವಿನಂತಿಸಿದ್ದಾರೆ.
ವಿವಾದದ ಹಿನ್ನೆಲೆ ಏನು?
ಉದ್ಯಮಿ ಬಾಬಿ ಚೆಮ್ಮಣ್ಣೂರ್ ಅವರು ನಟಿ ಹನಿ ರೋಸ್ ಅವರ ಕುರಿತಾಗಿ ಸಾಮಾಜಿಕ ಜಾಲತಾಣ ಹಾಗೂ ಸಂದರ್ಶನಗಳಲ್ಲಿ ಆಕ್ಷೇಪಾರ್ಹ ಮತ್ತು ನಿಂದನಾತ್ಮಕ ಕಾಮೆಂಟ್‌ಗಳನ್ನು ಮಾಡುವ ಮೂಲಕ ಸಾರ್ವಜನಿಕವಾಗಿ ಅವರ ತೇಜೋವಧೆಗೆ ಯತ್ನಿಸಿದ್ದರು ಎಂಬ ಆರೋಪ ಇದೆ. ಕೇವಲ ತಮಾಷೆಯ ನೆಪದಲ್ಲಿ ಬಾಬಿ ಅವರು ಮಾಡಿದ್ದ ಈ ಅವಹೇಳನಕಾರಿ ಮಾತುಗಳು ಮತ್ತು ನಡವಳಿಕೆ ಮಿತಿಮೀರಿದಾಗ, ನಟಿ ಹನಿ ರೋಸ್ ಇದನ್ನು ಗಂಭೀರವಾಗಿ ಪರಿಗಣಿಸಿ ಅವರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಮಾನಹಾನಿ ದೂರನ್ನು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆಯೇ ಕಳೆದ ವರ್ಷ ಬಾಬಿ ಚೆಮ್ಮಣ್ಣೂರ್ ಅವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಸದ್ಯ ಜಾಮೀನಿನ ಮೇಲೆ ಹೊರಬಂದಿರುವ ಬಾಬಿ, ಕಾನೂನು ಸಂಕಷ್ಟದಿಂದ ಪಾರಾಗಲು ಮತ್ತು ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ಈಗ ಸೋಷಿಯಲ್ ಮೀಡಿಯಾ ಮೂಲಕ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
ಯಾರು ಈ ಹನಿ ರೋಸ್?
ಸಾಮಾಜಿಕ ಜಾಲತಾಣದಲ್ಲಿ ಸದಾ ಬಿಜಿಯಾಗಿರುವವರಿಗೆ ಮಲಯಾಳಂ ಬ್ಯೂಟಿ ಹನಿ ರೋಸ್ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ಹನಿ ರೋಸ್ ಅವರು ಸಿನಿಮಾಗಳಿಗಿಂತ ಜಾಲತಾಣದಲ್ಲೇ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಅವರ ಮೈಮಾಟಕ್ಕೆ ಅನೇಕ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಅವರ ಸೌಂದರ್ಯಕ್ಕೆ ಮಾರು ಹೋಗಿ ಹೆಚ್ಚಿನ ಸಂಖ್ಯೆಯಲ್ಲಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಸದ್ಯಕ್ಕೆ ಕೆಲ ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಹನಿ ರೋಸ್ ಬಿಜಿಯಾಗಿದ್ದಾರೆ. ವಿನಯನ್ ನಿರ್ದೇಶನದ ‘ಬಾಯ್ ಫ್ರೆಂಡ್’ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ನಟಿ ಹನಿ ರೋಸ್, ಚಿತ್ರರಂಗದಲ್ಲಿ 20 ಪೂರೈಸಿದ್ದಾರೆ. ಪ್ರಸ್ತುತ ಹನಿ ರೋಸ್ ರಾಚೆಲ್ ಸಿನಿಮಾದಲ್ಲಿ ನಟಿಸಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಸಿನಿಮಾ ಹೊರತಾಗಿ ಉದ್ಘಾಟನಾ ಸಮಾರಂಭಗಳಿಗೆ ಹನಿ ರೋಸ್ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಹನಿ ಭಾಗವಹಿಸಿದ ಎಲ್ಲ ಉದ್ಘಾಟನಾ ಸಮಾರಂಭಗಳಿಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ, (ಏಜೆನ್ಸೀಸ್).