ಬೆಂಗಳೂರು: ಹಲವು ಚಿತ್ರಗಳಲ್ಲಿ ನಟಿಸಿದ ನಂತರ ಕೃತಿ ಸನೋನ್, ಇದೀಗ ಒಂದಿಷ್ಟು ಜನಪ್ರಿಯತೆ ಗಳಿಸಿದ್ದಾರೆ. ಅಷ್ಟೇ ಅಲ್ಲ, ಬಾಲಿವುಡ್ನ ಬೇಡಿಕೆಯ ನಟಿಯಾಗಿದ್ದಾರೆ. ಅದೇ ತಾವೊಬ್ಬ ದೊಡ್ಡ ಸ್ಟಾರ್ನ ಮಗಳಾಗಿದ್ದರೆ, ತನಗೆ ಇನ್ನಷ್ಟು ಸುಲಭವಾಗಿ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಗುತಿತ್ತು ಎಂದು ಕೃತಿ ಹೇಳಿಕೊಂಡಿದ್ದಾರೆ.
ಹೌದು, ಚಿತ್ರರಂಗದಲ್ಲಿ ನಡೆದು ಬಂದ ಹಾದಿಯನ್ನು ನೆನಪಿಸಿಕೊಂಡಿರುವ ಕೃತಿ, ತಾನೊಬ್ಬ ಸ್ಟಾರ್ ಪುತ್ರಿಯಾಗಿದ್ದರೆ, ತನ್ನ ವೃತ್ತಿಜೀವನ ಇನ್ನೂ ಚೆನ್ನಾಗಿರುತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ‘ನೀವು ಸ್ಟಾರ್ ಫ್ಯಾಮಿಲಿಯಿಂದ ಬಂದಿರದಿದ್ದರೆ, ಮೊದಲನೇ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಇನ್ನೊಂದು ಸಿನಿಮಾದಲ್ಲಿ ನಟಿಸುವುದಕ್ಕೆ ಅವಕಾಶ ಸಿಗುವುದಿಲ್ಲ. ಅಷ್ಟೇ ಅಲ್ಲ, ನೀವು ಸ್ಟಾರ್ ಫ್ಯಾಮಿಲಿಯಿಂದ ಬಂದಿರದಿದ್ದರೆ, ಸಿನಿಮಾ ಮ್ಯಾಗಜೀನ್ನ ಮುಖಪುಟಗಳಲ್ಲಿ ಕಾಣಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ನಾನು ಚಿತ್ರರಂಗಕ್ಕೆ ಬಂದು, ಮೂರು ವರ್ಷಗಳ ನಂತರ ಮುಖಪುಟವೊಂದರಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿತು’ ಎಂದು ನೆನಪಿಸಿಕೊಂಡಿದ್ದಾರೆ ಕೃತಿ ಸನೋನ್.
ಹಾಗಂತ ಕೃತಿಗೆ ಬೇಸರವೇನಿಲ್ಲವಂತೆ. ‘ಬಹುಶಃ ಸ್ಟಾರ್ ಕುಟುಂಬದಿಂದ ನಾನು ಬಂದಿದ್ದರೆ, ಎಲ್ಲವೂ ಸುಲಭವಾಗಿ ಸಿಕ್ಕಿದ್ದರೆ, ಇಂಥದ್ದೊಂದು ಅನುಭವ ಸಿಗುತ್ತಲೇ ಇರಲಿಲ್ಲ. ಜೀವನದಲ್ಲಿ ಖುಷಿ ಕೊಡುವುದು ಹೋರಾಟ ಮತ್ತು ಅನುಭವಗಳು ಮಾತ್ರ. ಕಷ್ಟಕರ ಸಂದರ್ಭದಲ್ಲಿ ನಾವು ಪ್ರತಿ ವಿಷಯದಲ್ಲೂ ಒಳ್ಳೆಯದನ್ನೇ ಹುಡುಕುವ ಪ್ರಯತ್ನ ಮಾಡುತ್ತೇವೆ ಮತ್ತು ಇದರಿಂದ ನಮಗೆ ಒಳ್ಳೆಯದೇ ಆಗುತ್ತಾ ಹೋಗುತ್ತದೆ’ ಎನ್ನುತ್ತಾರೆ ಕೃತಿ. ಕಳೆದ ವರ್ಷ ಆರು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಕೃತಿ, ಸದ್ಯ ‘ಮಿಮಿ’ ಎಂಬ ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.