ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಒಂದೇ ವರ್ಷ ಯಾವ ನಿರ್ವಪಕರೂ ಆರು ಚಿತ್ರಗಳನ್ನು ಘೊಷಿಸಿರಲಿಲ್ಲ. ಇದು ಹೇಗೆ ಸಾಧ್ಯವಾಯಿತು?
-ಕನ್ನಡ ಚಿತ್ರರಂಗಕ್ಕೆ ವಿಶ್ವಮಟ್ಟದಲ್ಲಿ ವೇದಿಕೆ ಕಲ್ಪಿಸಿ, ಉತ್ತಮ ಗುಣಮಟ್ಟದ ಚಿತ್ರಗಳನ್ನು ನೀಡುವುದು ನಮ್ಮ ಆಸೆ. ಕಳೆದ ಎರಡು ವರ್ಷಗಳಲ್ಲಿ ಚಿತ್ರರಂಗಕ್ಕೆ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಬಹಳಷ್ಟು ತೊಂದರೆಗಳಾಗಿವೆ. ಚಿತ್ರರಂಗ ಎಂದರೆ ಬರೀ ಮನರಂಜನೆಯಷ್ಟೇ ಅಲ್ಲ, ಅದು ಹಲವರಿಗೆ ಹೊಟ್ಟೆಪಾಡು. ಚಿತ್ರರಂಗ ಒಂದಾಗಿ ಮುಂದೆ ಬಂದು ದುಪ್ಪಟ್ಟು ಪ್ರಯತ್ನದಿಂದ ಈ ಸವಾಲುಗಳನ್ನು ಎದುರಿಸಬೇಕಿದೆ. ಇದಕ್ಕೆ ನಾವು ಕೂಡಾ ಉತ್ತಮ ಕಥೆಗಳನ್ನು ಆರಿಸಿ, ಅನೇಕ ಚಿತ್ರಗಳನ್ನು ಮಾಡಲು ಹೊರಟಿದ್ದೇವೆ.
ಕರೊನಾ, ಒಟಿಟಿ ಹಾವಳಿ, ಚಿತ್ರಗಳನ್ನು ನೋಡುವುದಕ್ಕೆ ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ, ಪೈರಸಿ ಎಂಬ ಹಲವು ಸಮಸ್ಯೆಗಳ ನಡುವೆಯೂ, ಇಷ್ಟು ಸಂಖ್ಯೆಯ ಚಿತ್ರಗಳನ್ನು ಘೊಷಣೆ ಮಾಡುವ ನಿರ್ಧಾರದ ಬಗ್ಗೆ ಹೇಳಿ?
-ಯಾವುದೇ ಕ್ಷೇತ್ರಗಳಲ್ಲೂ ಸವಾಲುಗಳು ಸಾಮಾನ್ಯ. ಇಂತಹ ಸವಾಲುಗಳನ್ನು ಎದುರಿಸಿ ಉತ್ತಮ ಗುಣಮಟ್ಟದ ಮನರಂಜನೆಯನ್ನು ನೀಡುವುದು ನಮ್ಮ ಹೊಂಬಾಳೆ ಫಿಲಂಸ್ ತಂಡದ ದೃಢ ನಿಲುವು. ಇದಕ್ಕೆ ಸೂಕ್ತವಾಗಿ ಚಿತ್ರರಂಗದ ಕಲಾವಿದರು, ನಿರ್ದೇಶಕರು, ತಂತ್ರಜ್ಞರು ಹಾಗೂ ಎಲ್ಲ ಪಾಲುದಾರರು ಸಹಕರಿಸುತ್ತಿದ್ದಾರೆ. ಹೀಗೆ ಇಡೀ ಚಿತ್ರರಂಗ ಜತೆಯಾಗಿ, ಒಂದು ಸಂಘಟಿತ ತಂಡವಾಗಿ ಹೆಜ್ಜೆ ಹಾಕಬೇಕಿದೆ.
ಏಳು ಚಿತ್ರಗಳು, ಸುಮಾರು 400 ಕೋಟಿ ರೂ. ವ್ಯವಹಾರ ... ಇದು ರಿಸ್ಕಿ ಎನಿಸುವುದಿಲ್ಲವೇ?
-ನಾವು ನಂಬರ್ ಗೇಮ್ ಹಿಂದೆ ಬಿದ್ದಿಲ್ಲ. ಕೋಟಿಗಳಿಗಿಂತ ಹೆಚ್ಚಾಗಿ ನಮ್ಮ ಕಥೆ, ಚಿತ್ರಕಥೆ ಹಾಗೂ ಪ್ರತಿಭಾವಂತ ತಂಡಗಳ ಮೇಲೆ ವಿಶ್ವಾಸವಿಟ್ಟು ಈ ಏಳು ಚಿತ್ರಗಳನ್ನು ನಿರ್ವಿುಸುತ್ತಿದ್ದೇವೆ. ಗುಣಮಟ್ಟಕ್ಕೆ ಯಾವುದೇ ರಾಜಿಯಿಲ್ಲದೆ, ಚಿತ್ರರಂಗವನ್ನು ನಂಬಿ ಬದುಕುತ್ತಿರುವವರಿಗೆ ಆಸರೆಯಾಗಿ ಈ ಚಿತ್ರಗಳು ಕನ್ನಡ ಚಿತ್ರರಂಗಕ್ಕೆ ಹೊಸದೊಂದು ಆಯಾಮ ಕೊಡಲಿದೆ ಎಂಬ ನಂಬಿಕೆ ಇದೆ.
‘ಕೆಜಿಎಫ್’ ಮತ್ತು ‘ಸಲಾರ್’ ಚಿತ್ರಗಳ ನಂತರ ಹೊಂಬಾಳೆ ಫಿಲಂಸ್ನಿಂದ ಪ್ಯಾನ್ ಇಂಡಿಯಾ ಚಿತ್ರಗಳ ನಿರೀಕ್ಷೆ ಇತ್ತು. ಆದರೆ, ಆ ನಂತರ ಆ ರೇಂಜ್ನ ಸಿನಿಮಾಗಳು ಘೊಷಣೆಯಾಗಲಿಲ್ಲ?
-ಚಿತ್ರಗಳು ಪ್ಯಾನ್ ಇಂಡಿಯಾ ಆಗಬೇಕಾದರೆ, ದೊಡ್ಡ ತಾರಾಗಣ, ದೊಡ್ಡ ರೇಂಜ್ ಇರಬೇಕು ಎಂದೇನಿಲ್ಲ. ಹೆಚ್ಚಾಗಿ ಗುಣಮಟ್ಟಕ್ಕೆ ಆದ್ಯತೆ ಕೊಡುತ್ತಿದ್ದೇವೆ. ನಮ್ಮ ಎಲ್ಲ ಚಿತ್ರಗಳನ್ನೂ ನಾವು ಸಮಾನವಾಗಿ ಸ್ವೀಕರಿಸುತ್ತೇವೆ. ಕನ್ನಡ ಚಿತ್ರಗಳೂ ಕೂಡ ಇಡೀ ಭಾರತದಲ್ಲಿ, ವಿಶ್ವ ಮಟ್ಟದಲ್ಲಿ ಜನಮನ್ನಣೆ ಗಳಿಸಬೇಕು. ಇದಕ್ಕೆ ಏನೆಲ್ಲ ಉತ್ತಮ ಪ್ರಯೋಗಗಳನ್ನು ಮಾಡಬೇಕೋ, ಮಾಡುತ್ತಿದ್ದೇವೆ. ಒಂದು ಫಾಮುಲಾ ಯಶಸ್ಸು ಗಿಟ್ಟಿಸಿದ ಮೇಲೆ ಅದೇ ಪುನಃ ಮಾಡುತ್ತ ಇರುವುದಕ್ಕಿಂತ ಬೇರೆಬೇರೆ ರೀತಿಯ ಚಿತ್ರಗಳನ್ನು ಮಾಡುವುದು ನಮ್ಮ ಉದ್ದೇಶ.
ನೀವು ಒಂದು ಚಿತ್ರವನ್ನು ಆಯ್ಕೆ ಮಾಡುವ ರೀತಿ ಹೇಗೆ?
-ಹೊಂಬಾಳೆಯಲ್ಲಿ ಗುಣಮಟ್ಟ, ಪಾರದರ್ಶ ಕತೆ, ಕಾರ್ಯದಕ್ಷತೆಗೆ ಮೊದಲ ಆದ್ಯತೆ. ಯಾವುದೇ ಉತ್ತಮ ಕಥೆಗಳನ್ನು, ಪ್ರತಿಭಾವಂತರ ಜತೆ ಸಿನಿಮಾ ನಿರ್ವಿುಸಲು ನಮ್ಮ ತಂಡ ಸಿದ್ಧವಿದೆ. ಚಿತ್ರದಲ್ಲಿ ಹೊಸತನ, ಪ್ಯಾಷನ್, ಮನರಂಜನೆಯ ಅಂಶಗಳು ಇದೆ ಎಂದರೆ ನಾವು ನಿರ್ವಿುಸಲು ಸಹಕಾರ ನೀಡುತ್ತೇವೆ.
ಚಿತ್ರ ನಿರ್ವಣ, ವಿತರಣೆಯಲ್ಲಿ ಸಂಸ್ಥೆ ಈಗಾಗಲೇ ಗುರುತಿಸಿಕೊಂಡಿದೆ. ಸಿನಿಮಾದಲ್ಲೇ ಬೇರೆ ವಲಯಗಳತ್ತ ಕಾಲಿಡುವ ಏನಾದರೂ ಯೋಚನೆ ?
-ಖಂಡಿತಾ.. ಸಿನಿಮಾ ರಂಗ ನಿಂತ ನೀರಾಗಬಾರದು. ಬೆಳವಣಿಗೆ, ಬದಲಾವಣೆ ಹಾಗೂ ನಿರಂತರ ಪ್ರಗತಿ ಹೊಂಬಾಳೆ ಮುಂದಿದೆ. ಸಿನಿಮಾಗೆ ಸಂಬಂಧಪಟ್ಟ ಅಗತ್ಯವಿರುವ ಕ್ಷೇತ್ರಗಳಲ್ಲಿ ನಾವು ಮುಂದಿನ ವರ್ಷಗಳಲ್ಲಿ ಖಂಡಿತ ತೊಡಗಿಸಿಕೊಳ್ಳುತ್ತೇವೆ.
ಹೊಂಬಾಳೆ ಫಿಲಂಸ್ನ ಯಾವ್ಯಾವ ಸಿನಿಮಾಗಳು ಯಾವ ಹಂತದಲ್ಲಿದೆ?
-‘ಕೆಜಿಎಫ್ 2’ ಏಪ್ರಿಲ್ನಲ್ಲಿ ಬಿಡುಗಡೆಯಾಗಲಿದೆ. ‘ಸಲಾರ್’ ಶೇ. 40% ಚಿತ್ರೀಕರಣ ಮುಗಿದಿದೆ. ‘ಕಾಂತಾರಾ’ ಚಿತ್ರೀಕರಣ ಆರಂಭವಾಗಿದೆ. ‘ರಾಘವೇಂದ್ರ ಸ್ಟೋರ್ಸ್’ ಮತ್ತು ‘ದ್ವಿತ್ವ’ ಚಿತ್ರೀಕರಣ ಮುಂದಿನ ತಿಂಗಳು ಆರಂಭವಾಗಲಿದೆ. ‘ಭಗೀರ’ ಮತ್ತು ‘ರಿಚರ್ಡ್ ಆಂಟನಿ’ ಮುಂದಿನ ವರ್ಷ ಪ್ರಾರಂಭವಾಗಲಿವೆ. ಇನ್ನೂ ಕೆಲವು ಚಲನಚಿತ್ರಗಳು ಸ್ಕ್ರಿಪ್ಟಿಂಗ್ ಹಂತದಲ್ಲಿದ್ದರೆ, ಕೆಲವು ಯೋಜನಾ ಹಂತಗಳಲ್ಲಿವೆ.
ಹೊಂಬಾಳೆ ಫಿಲಂಸ್ ಸಂಸ್ಥೆಯ ನಿರ್ವಣದ ಚಿತ್ರಗಳಲ್ಲಿ ದೊಡ್ಡದೊಡ್ಡ ಹೀರೋಗಳು ಮತ್ತು ನಿರ್ದೇಶಕರು ಕೆಲಸ ಮಾಡುತ್ತಿದ್ದಾರೆ. ಹೊಸಬರಿಗೆ ಇಲ್ಲಿ ಅವಕಾಶ ಕಡಿಮೆ ಎಂದು ಹೇಳಲಾಗುತ್ತಿದೆ?
-ಈಗಾಗಲೇ ಘೋಷಣೆಯಾಗಿರುವ ಚಿತ್ರಗಳು ಹಲವು ದಿನಗಳ ಹಿಂದೆಯೇ ಪ್ಲಾನ್ ಆಗಿದ್ದು. ಅವುಗಳಲ್ಲಿ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟರು, ನಿರ್ದೇಶಕರು, ಬರಹಗಾರರು, ಕಲಾವಿದರೇ ಇರುವುದು ಕಾಕತಾಳೀಯ. ನಾವು ಹಲವು ಹೊಸ ಕಲಾವಿದರು, ಬರಹಗಾರರು, ತಂತ್ರಜ್ಞರು ಹಾಗೂ ಸಿನಿಮಾ ಆಸಕ್ತರಿಗೆ ಅವಕಾಶ ಕೊಟ್ಟಿದ್ದೇವೆ. ಮುಂದೆ ಸಹ ಅದು ಮುಂದುವರೆಯುತ್ತದೆ. ಚಿತ್ರರಂಗ ಬೆಳೆಸುವುದು, ಅದಕ್ಕೆ ಸೂಕ್ತ ವಾತಾವರಣ ಕಲ್ಪಿಸುವುದಕ್ಕೆ ನಾವು ಸದಾ ಬದ್ಧ.