ನಟ ರವಿ ಮೋಹನ್, ಗಾಯಕಿ ಕೆನಿಶಾ ಫ್ರಾನ್ಸಿಸ್
- ಕೌಟುಂಬಿಕ ಭಿನ್ನಾಭಿಪ್ರಾಯಗಳಿಂದ ರವಿ ಮೋಹನ್ ಪತ್ನಿಯಿಂದ ದೂರ
- ಗಾಯಕಿ ಕೆನಿಶಾ ಫ್ರಾನ್ಸಿಸ್ ಜತೆಗಿನ ಸಂಬಂಧವೇ ವಿವಾದ
- ಸಾಲು ಸಾಲು ಟೀಕೆ, ಆರೋಪಕ್ಕೆ ಕಡೆಗೂ ಕೆನಿಶಾ ಉತ್ತರ
Ravi Mohan: ತಮಿಳು ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರಾದ ರವಿ ಮೋಹನ್ ಅಲಿಯಾಸ್ ಜಯಂ ರವಿ ಸದ್ಯ ತಮ್ಮ ಪತ್ನಿ ಆರತಿಯಿಂದ ಬೇರೆಯಾಗಿರುವ ಸುದ್ದಿ ಬಹುತೇಕರಿಗೆ ಗೊತ್ತೇ ಇದೆ. ಕೌಟುಂಬಿಕ ಭಿನ್ನಾಭಿಪ್ರಾಯಗಳಿಂದ ಇಬ್ಬರು ಬೇರೆಯಾಗಿದ್ದು, ಪ್ರತ್ಯೇಕ ನಿವಾಸಗಳಲ್ಲಿ ವಾಸಿಸುತ್ತಿದ್ದಾರೆ. ಇದರ ನಡುವೆ ರವಿ ಮೋಹನ್, ಗಾಯಕಿ ಕೆನಿಶಾ ಫ್ರಾನ್ಸಿಸ್ ಜತೆ ಸಂಬಂಧದಲ್ಲಿದ್ದಾರೆ ಎಂಬ ವದಂತಿಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು, ಭಾರೀ ವಿವಾದ ಸೃಷ್ಟಿಸಿದೆ. ಸಾಲು ಸಾಲು ಚುಚ್ಚು ಮಾತುಗಳು, ಆರೋಪಗಳ ಬೆನ್ನಲ್ಲೇ ಕೆನಿಶಾ ತಮ್ಮ ಬಹುದಿನಗಳ ನೋವನ್ನು ಹೊರಹಾಕಿದ್ದಾರೆ.
ಕೆನಿಶಾ ಫ್ರಾನ್ಸಿಸ್ ಜತೆಗಿನ ಲವ್ ಅಫೇರ್ ರವಿ ಅವರ ದಾಂಪತ್ಯ ಮುರಿಯಲು ಕಾರಣ ಎಂಬ ಚರ್ಚೆ ಬಹಳ ದಿನಗಳಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಬ್ರೇಕ್ ಇಲ್ಲದ ನಡೆಯುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ರವಿ ಅವರು ಕೆನಿಶಾ ಜತೆಗಿರುವ ಅನೇಕ ಫೋಟೋಗಳನ್ನು ಹಂಚಿಕೊಂಡಾಗ, ಗಾಯಕಿ ವಿರುದ್ಧ ನೆಟ್ಟಿಗರು ಮನಬಂದಂತೆ ಮಾತನಾಡಿದ್ದಾರೆ. ಒಬ್ಬರ ಸಂಸಾರ ಒಡೆದವಳು, ಮನೆಹಾಳಿ ಎಂದೆಲ್ಲ ಅಸಭ್ಯವಾಗಿ ಕಾಮೆಂಟ್ ಮಾಡಿದ್ದಾರೆ. ಇದನ್ನೆಲ್ಲ ತಾಳಲಾರದೆ ಸ್ವತಃ ಕೆನಿಶಾ ಅವರೇ ಓಪನ್ ಆಗಿ ಮಾತನಾಡಿದ್ದು, ಇಂತಹ ಮಾತುಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ವಿಡಿಯೋ ಮೂಲಕ ದುಃಖ ಹಂಚಿಕೊಂಡ ಗಾಯಕಿ, ಯಾರೊಬ್ಬರ ಸಂಸಾರವನ್ನು ಒಡೆಯುವ ಉದ್ದೇಶ ನನ್ನದಲ್ಲ. ರವಿ ಮೋಹನ್ ಅವರು ಮೊದಲೇ ನೋವಿನಲ್ಲಿದ್ದರು. ಇಂತಹ ಪರಿಸ್ಥಿತಿಯಲ್ಲಿ ಅವರ ಜೊತೆಗಿದ್ದು, ಧೈರ್ಯ ಹೇಳುವುದಷ್ಟೇ ನನ್ನ ಮೂಲ ಉದ್ದೇಶವಾಗಿತ್ತು. ಹೀಗಾಗಿ, ಅವರಿಂದ ನಾನು ದೂರ ಉಳಿದೆ. ಯಾವಾಗ ಅವರು ನನ್ನಿಂದ ಸಹಾಯ ಕೇಳಿದರೋ, ತಕ್ಷಣವೇ ಮೋಹನ್ಗೊಂದು ಸಲಹೆ ನೀಡಿದೆ. ನಿಮಗೆ ಸಪೋರ್ಟ್ ಮಾಡುವ ಒಳ್ಳೆಯ ವ್ಯಕ್ತಿ ನಾನಾಗಲು ಸಾಧ್ಯವಿಲ್ಲ. ಒಬ್ಬ ಒಳ್ಳೆಯ ಸ್ನೇಹಿತೆಯಾಗಿ ನಿಮ್ಮ ಪಯಣದಲ್ಲಿ ಜೊತೆಗಿರುವೆ ಎಂದಿದ್ದಾರೆ.
"ರವಿ ಅವರೊಂದಿಗೆ ಎಷ್ಟೋ ಕಾರ್ಯಕ್ರಮಗಳಿಗೆ ಹೋದಾಗ ಚಿತ್ರರಂಗದಿಂದ ಹಿಡಿದು ಕೆಲವರು ನನಗೆ ಧನ್ಯವಾದ ತಿಳಿಸಿದ್ದಾರೆ. ನೋವಿನಲ್ಲಿದ್ದ ಮೋಹನ್ರ ಮುಖದಲ್ಲಿ ನಗು ತರಿಸಿದ್ದೀರಿ, ಅವರನ್ನು ಖುಷಿಯಾಗಿರಿಸಿದ್ದೀರಿ ಎಂದೆಲ್ಲ ಮೆಚ್ಚುಗೆ ಮಾತನಾಡಿದ್ದಾರೆ. ಆನ್‌ಲೈನ್ ಟೀಕೆಗಳು ನನ್ನ ಚೈತನ್ಯವನ್ನು ಮುರಿಯಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ನನ್ನನ್ನು ಬೈದಿದ್ದಾರೆ. ಮಾನಸಿಕ ಕಿರುಕುಳ ನೀಡಿದ್ದಾರೆ ಜೊತೆಗೆ ಇನ್ಸ್ಟಾಗ್ರಾಮ್ ಅಕೌಂಟ್ ಕೂಡ ಹ್ಯಾಕ್ ಮಾಡಿದ್ದಾರೆ" ಎಂದು ಹೇಳಿದರು.
"ಹೊಟ್ಟೆಯಲ್ಲೇ ಮಗುವನ್ನು ಕಳೆದುಕೊಂಡ ನಾನು, ಇನ್ನೊಬ್ಬರಿಂದ ಅವರ ಮಕ್ಕಳು ಅಥವಾ ಕುಟುಂಬದವರು ದೂರವಿಡಲು ಸಾಧ್ಯ ಅಂತ ನಿಮಗೆ ಅನಿಸುತ್ತಾ? ಜೀವನವನ್ನೇ ಕೊನೆಗೊಳಿಸುವ ಹಂತಕ್ಕೆ ನನ್ನನ್ನು ದೂಡಬೇಡಿ. ಕೆಲಸ, ನೋವಿನಿಂದ ಹೊರಬರುವತ್ತ ಮಾತ್ರ ನಾನು ಗಮನ ಹರಿಸುತ್ತಿದ್ದೇನೆ" ಎಂದು ಕಣ್ಣೀರಿಟ್ಟಿದ್ದಾರೆ,(ಏಜೆನ್ಸೀಸ್)