ಬೆಂಗಳೂರು: "ಹಿಡ್ಕೊಂಡು ಹೇಳುವೆ ಅನ್ನದ ತುತ್ತು, ಕನ್ನಡ ತಾಯಿಗೆ ನನ್ನ ನಿಯತ್ತು ...' ಪುನೀತ್ ಈ ಹಾಡು ಹೇಳಿದ್ದು, ಸಾವಿರಾರು ಜನರ ಮಧ್ಯೆ ಸಂಭ್ರಮಿಸಿದ್ದು ಬರೀ ಬಿಲ್ಡಪ್ಗೋಸ್ಕರವೇನಲ್ಲ. ಅದನ್ನು ಅಕ್ಷರಶಃ ಕಾರ್ಯರೂಪಕ್ಕೆ ತಂದವರು ಅವರು. "ನನಗ್ಯಾವ ಅಡ್ರೆಸ್ ಬೇಕಾಗಿಲ್ಲ, ನಾನ್ಯಾವತ್ತೂ ಕನ್ನಡದ ಆಸಾಮಿ ...' ಎಂದ ಅವರು ಅಕ್ಷರಶಃ ತಮ್ಮ ಮಾತನ್ನು ಉಳಿಸಿಕೊಂಡರು. ಕೊನೆಯವರೆಗೂ ಕನ್ನಡದ ಆಸಾಮಿಯಾಗಿಯೇ ಬದುಕಿದರು.
ಪುನೀತ್ ಈ ವಿಷಯದಲ್ಲಿ ತಂದೆಗೆ ತಕ್ಕ ಮಗ. ಡಾ. ರಾಜಕುಮಾರ್ ಕೊನೆಯವರೆಗೂ ಹೇಗೆ ಕನ್ನಡವನ್ನೇ ಉಸಿರಾಡಿದರೋ, ಕನ್ನಡ ಚಿತ್ರಗಳಲ್ಲೇ ನಟಿಸಿದರೋ, ಅದೇ ದಾರಿಯಲ್ಲಿ ಪುನೀತ್ ಸಹ ಸಾಗಿದರು. ಪುನೀತ್ ಇದುವರೆಗೂ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಪೈಕಿ ಕೆಲವು ಚಿತ್ರಗಳು ಬೇರೆ ಭಾಷೆಗಳಿಗೆ ಡಬ್ ಆಗಿದ್ದು ಬಿಟ್ಟರೆ, ಅವರೆಂದೂ ಬೇರೆ ಭಾಷೆಗಳಿಗೆ ಹೋದವರಲ್ಲ. ಅವರಿಗೆ ಬೇರೆ ಚಿತ್ರರಂಗಗಳಲ್ಲಿ ಒಳ್ಳೆಯ ಪರಿಚಯವಿತ್ತು, ಅಲ್ಲಿನ ಸ್ಟಾರ್ ನಟರ ಒಡನಾಟವಿತ್ತು, ಅವರು ಒಪ್ಪಿದ್ದರೆ ಅವಕಾಶಗಳು ಸಿಗುತ್ತಿತ್ತು. ಆದರೆ, ಪುನೀತ್ ಮಾತ್ರ ಆ ಬಗ್ಗೆ ಎಂದೂ ಯೋಚಿಸಿದವರಲ್ಲ. ಇನ್ನು, ಕನ್ನಡದ ವಿಷಯವಾಗಿ ಪುನೀತ್ ಸುಮ್ಮನೆ ಪ್ರಚಾರ ತೆಗೆದುಕೊಂಡವರಲ್ಲ. ಸನ್ನಿವೇಶ ಸಂದರ್ಭಕ್ಕೆ ತಕ್ಕಂತೆ ಕನ್ನಡದ ಕುರಿತಾದ ನಾಡು&ನುಡಿಯ ಕುರಿತಾದ ಸಂಭಾಷಣೆಗಳನ್ನು ಕೆಲವು ಚಿತ್ರಗಳಲ್ಲಿ ಹೇಳಿದ್ದು ಬಿಟ್ಟರೆ, ಮಿಕ್ಕಂತೆ ಪ್ರಚಾರಕ್ಕೆಂದು ಎಂದೂ ಅವರು ಕನ್ನಡವನ್ನು ಬಳಸಿಕೊಳ್ಳಲಿಲ್ಲ. ಇನ್ನು ಹಾಡುಗಳಲ್ಲೂ ಅಷ್ಟೇ. ಅವರ ಚಿತ್ರಗಳಲ್ಲಿ ಕನ್ನಡದ ಕುರಿತಾದ ಹಾಡು ಎಂದು ಸಿಗುವುದು ಬಹಳ ಕಡಿಮೆ.
"ಮೌರ್ಯ' ಚಿತ್ರದ "ಸಿಂಪಲ್ಲಾಗ್ ಹೇಳ್ತೀನಿ ಕೇಳೇ ಕನ್ನಡ ಭಾಷೆ ...', "ದೊಡ್ಮನೆ ಹುಡ್ಗ' ಚಿತ್ರದ "ಅಭಿಮಾನಿಗಳೇ ನಮ್ಮನೆ ದೇವು ನಿಮ್ಮಿಂದಲೇ ನಮ್ಮದೆ ಉಸಿರು ...' ಸೇರಿದಂತೆ ಒಂದೆರಡು ಹಾಡುಗಳನ್ನು ಬಿಟ್ಟರೆ, ಮಿಕ್ಕಂತೆ ಪುನೀತ್ ಚಿತ್ರಗಳಲ್ಲಿ "ಕನ್ನಡ' ಹಾಡುಗಳನ್ನು ಸುಮ್ಮನೆ ತುರುಕಿಲ್ಲ ಎಂದು ಗಮನಿಸಬೇಕಾದ ವಿಷಯ. ಕೆಲವರು ಆಡಿ ತೋರಿಸಿದರೆ, ಪುನೀತ್ ಮಾತ್ರ ಮಾಡಿ ತೋರಿಸಿದರು. "ದೊಡ್ಮನೆ ಹುಡ್ಗ' ಅಂದರೆ ಸುಮ್ಮನೆ ಅಲ್ಲ ಎನ್ನುವುದು ಇದಕ್ಕೇ.