ಸಿನಿವಾಣಿ

ಏನೇ ಆದರೂ.. ಐದು ಭಾಷೆಗಳಲ್ಲಿ...

vijayavani

ಬೆಂಗಳೂರು: ‘ಏನೇ ಆದರೂ..’ ನೋಡೋಣವೆಂದು ಇಲ್ಲೊಬ್ಬರು ಐದು ಭಾಷೆಗಳಲ್ಲಿ ಒಂದು ವಿಭಿನ್ನ ಪ್ರಯತ್ನ ಮಾಡಲು ಹೊರಟಿದ್ದಾರೆ. ಅಂದಹಾಗೆ ಇವರ ಪ್ರಯತ್ನದ ಮೂಲವಸ್ತು ಆಲ್ಬಂ ಸಾಂಗ್. ಹೌದು.. ಆಲ್ಬಂ ಸಾಂಗ್​ವೊಂದನ್ನು ಐದು ಭಾಷೆಗಳಲ್ಲಿ ಬಿಡುಗಡೆ ಮಾಡುವ ಮೂಲಕ ಮೊದಲ ಪ್ರಯತ್ನದಲ್ಲೇ ಒಂದು ಹೊಸ ಸಾಹಸಕ್ಕೆ ಮುಂದಾಗಿದ್ದಾರೆ ಸಂಗೀತ ಸಂಯೋಜಕ ಚಂದನ್ ರಾಜ್. ‘ಏನೇ ಆದರೂ..’ ಎಂಬ ಶೀರ್ಷಿಕೆಯಲ್ಲಿ ಮೂಡಿ ಬಂದಿರುವ ಈ ಆಲ್ಬಂ ಸಾಂಗ್ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲೂ ಬಿಡುಗಡೆ ಆಗಲಿದೆ. ಈ ಹೊಸ ಪ್ರಯತ್ನವನ್ನು ಗುರುತಿಸಿರುವ ‘ಲಹರಿ ಮ್ಯೂಸಿಕ್’ ಸಂಸ್ಥೆ ಈ ಆಲ್ಬಂ ಬಿಡುಗಡೆ ಜವಾಬ್ದಾರಿ ಹೊತ್ತುಕೊಂಡಿದೆ.

ಇದು ಪ್ರೀತಿಯ ಕುರಿತಾದ ಹಾಡು ಎನ್ನುವ ಚಂದನ್, ಇದಕ್ಕೆ ಸಂಗೀತ ಸಂಯೋಜಿಸಿದ್ದಲ್ಲದೆ ಗಾಯಕರಾಗುವ ಜತೆಗೆ ಅಭಿನಯವನ್ನೂ ಮಾಡಿದ್ದಾರೆ. ಇವರೊಂದಿಗೆ ರಚನಾ ದಶರಥ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

‘ಇದೊಂದು ಲವ್ ಸಾಂಗ್. ಕನ್ನಡದಲ್ಲಿ ಈ ಗೀತೆಗೆ ಚೇತನ್ ಅನಿಕೇತ್ ಸಾಹಿತ್ಯ ರಚಿಸಿದ್ದಾರೆ. ಇತರ ಭಾಷೆಗಳಲ್ಲಿ ಆಯಾ ಭಾಷೆಗಳವರಿಂದ ಸಾಹಿತ್ಯ ಬರೆಸಲಾಗಿದೆ. ಭಾಷೆಗೆ ತಕ್ಕಂತೆ ಸಾಹಿತ್ಯದಲ್ಲಿ ಸ್ವಲ್ಪ ಬದಲಾವಣೆ ಆಗಬಹುದಾದರೂ ಹಾಡಿನ ಒಟ್ಟಾರೆ ಫೀಲ್ ಹಾಗೂ ಆಶಯ ಬದಲಾಗಿಲ್ಲ’ ಎಂಬ ಮಾಹಿತಿ ನೀಡುತ್ತಾರೆ ಚಂದನ್. ‘ಇದು ನನ್ನ ಮೊದಲ ಪ್ರಯತ್ನ. ಆರಂಭದಲ್ಲಿ ಇದನ್ನು ಕನ್ನಡದಲ್ಲಷ್ಟೇ ಮಾಡುವ ಯೋಜನೆ ಇತ್ತು. ಬಳಿಕ ಐದು ಭಾಷೆಗಳಲ್ಲಿ ಮಾಡಿದರೆ ಹೇಗೆ ಎಂಬ ಯೋಚನೆ ಬಂದಿದ್ದರಿಂದ ಬಹುಭಾಷೆಗಳಲ್ಲಿ ನಿರ್ವಿುಸಲಾಗಿದೆ. ಎಲ್ಲ ಭಾಷೆಗಳಲ್ಲಿನ ಸಾಹಿತ್ಯ ರಚನೆ ಆದ ಮೇಲೇನೆ ಚಿತ್ರೀಕರಣ ಮಾಡಿಕೊಂಡಿದ್ದು’ ಎನ್ನುತ್ತಾರೆ ಅವರು. ಓಂಪ್ರಕಾಶ್ ಎ.ಎಂ. ನಿರ್ದೇಶನ ಹಾಗೂ ಚಂದನ್ ರಾಜ್ ನಿರ್ವಣದಲ್ಲಿ ಮೂಡಿಬಂದಿರುವ ಈ ಆಲ್ಬಂ ಸಾಂಗ್​ಗೆ ಉದಯ್ ಲೀಲಾ ಅವರ ಛಾಯಾಗ್ರಹಣ, ವಿಜೇತ್ ಚಂದ್ರ ಅವರ ಸಂಕಲನವಿದೆ.

ನಾನು ಮೂಲತಃ ಸಂಗೀತ ಸಂಯೋಜಕ. ಮುಂದೆ ಸಿನಿಮಾ ಸಂಗೀತ ನಿರ್ದೇಶಕ ಆಗಬೇಕು ಎಂಬ ಕನಸಿದೆ. ಆ ಕುರಿತ ತಯಾರಿ ರೀತಿಯಲ್ಲಿ ಇಂಥದ್ದೊಂದು ವಿಭಿನ್ನ ಪ್ರಯತ್ನ ಮಾಡಿದ್ದೇನೆ. | ಚಂದನ್ ರಾಜ್ ಸಂಗೀತ ಸಂಯೋಜಕ