ಸಿನಿವಾಣಿ

ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪುನೀತ್ ರಾಜಕುಮಾರ್​-ಸಂಜಾರಿ ವಿಜಯ್​ಗೆ ಶ್ರದ್ಧಾಂಜಲಿ

ನವೆಂಬರ್ 20ರಿಂದ 28ರವರೆಗೂ ಗೋವಾದಲ್ಲಿ ನಡೆಯಲಿರುವ 52ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದ ಗೌರವ ವಿಭಾಗದಲ್ಲಿ ಕನ್ನಡದ ಪುನೀತ್ ಮತ್ತು ಸಂಚಾರಿ ವಿಜಯ್ ಅವರ ಚಿತ್ರಗಳು ಪ್ರದರ್ಶನವಾಗಲಿವೆ. ಈ ಚಿತ್ರೋತ್ಸವದಲ್ಲಿ ಹಲವು ವಿಭಾಗಗಳಿದ್ದು, ಈ ಪೈಕಿ ಹೋಮೇಜ್ ವಿಭಾಗವೂ ಒಂದು.

ಆ ವರ್ಷ ನಿಧನರಾದ ಚಿತ್ರರಂಗದ ಜನಪ್ರಿಯ ಸೆಲೆಬ್ರಿಟಿಗಳ ಮುಖ್ಯ ಚಿತ್ರಗಳನ್ನು ಈ ವಿಭಾಗದಲ್ಲಿ ಪ್ರದರ್ಶನ ಮಾಡಲಾಗುತ್ತಿದೆ. ಈ ವರ್ಷ ನಿಧನರಾದ ಕ್ರಿಸ್ಟೋಫರ್ ಪ್ಲಮ್ಮರ್ ಮುಂತಾದವರನ್ನು ಈ ವರ್ಷ ಚಿತ್ರೋತ್ಸವದಲ್ಲಿ ನೆನಪಿಸಿಕೊಳ್ಳಲಿದ್ದು, ಈ ಸಾಲಿನಲ್ಲಿ ಕನ್ನಡದ ಪುನೀತ್ ರಾಜಕುಮಾರ್ ಮತ್ತು ಸಂಚಾರಿ ವಿಜಯ್ ಅವರನ್ನು ಸಹ ಅವರ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ನೆನಪಿಸಿಕೊಳ್ಳಲಾಗುತ್ತದೆ. ಪುನೀತ್ ಮತ್ತು ಸಂಚಾರಿ ವಿಜಯ್ ಅಭಿನಯದ ಯಾವೆಲ್ಲ ಚಿತ್ರಗಳು ಇಲ್ಲಿ ಪ್ರದರ್ಶನವಾಗಲಿವೆ ಎಂದು ಇನ್ನಷ್ಟೇ ಗೊತ್ತಾಗಬೇಕಿದೆ.

ವರ್ಷದ ವ್ಯಕ್ತಿಗಳಿಗೆ ಗೌರವ: ನಟಿ ಮತ್ತು ಸಂಸದೆ ಹೇಮಾ ಮಾಲಿನಿ ಮತ್ತು ಸೆನ್ಸಾರ್ ಮಂಡಳಿಯ ಅಧ್ಯಕ್ಷ ಪ್ರಸೂನ್ ಜೋಷಿ ಅವರನ್ನು ವರ್ಷದ ವ್ಯಕ್ತಿಗಳಾಗಿ ಈ ಚಿತ್ರೋತ್ಸವದಲ್ಲಿ ಗೌರವಿಸಲಾಗುತ್ತಿದೆ.