ಸಿನಿವಾಣಿ

ಮಾರ್ಚ್​​ ಐದಕ್ಕೆ ಬರ್ತಾನೆ 'ಹೀರೋ' ...

manjunathktgns

ಬೆಂಗಳೂರು: ರಿಷಭ್​ ಶೆಟ್ಟಿ ಅಭಿನಯದ ಮತ್ತು ನಿರ್ಮಾಣದ 'ಹೀರೋ' ಚಿತ್ರದ ಟ್ರೇಲರ್​, ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾದ ನಂತರ ಈ ಚಿತ್ರದ ಬಿಡುಗಡೆ ಯಾವಾಗ ಎಂಬ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇತ್ತು. ಬಹುಶಃ ಫೆಬ್ರವರಿಯಲ್ಲಿ ಬಿಡುಗಡೆಯಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಫೆಬ್ರವರಿಯಲ್ಲಿ ಯಾವಾಗ ಬಿಡುಗಡೆ ಎಂಬ ಕುರಿತಾಗಿ ನಿಖರವಾಗಿ ಮಾಹಿತಿ ಇರಲಿಲ್ಲ.

ಇದೀಗ, ಚಿತ್ರದ ಬಿಡುಗಡೆ ದಿನಾಂಕ ಕೊನೆಗೂ ಫಿಕ್ಸ್​ ಆಗಿದೆ. ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ರಿಷಭ್​, ಚಿತ್ರವನ್ನು ಮಾರ್ಚ್​​ ಐದರಂದು ರಾಜ್ಯಾದ್ಯಂತ ಬಿಡಗುಡೆ ಮಾಡುವುದಾಗಿ ಹೇಳಿದ್ದಾರೆ. ಮುಖ್ಯ ಚಿತ್ರಮಂದಿರ ಮತ್ತು ರಾಜ್ಯಾದ್ಯಂತ ಎಷ್ಟು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂಬ ವಿಷಯ ಇನ್ನಷ್ಟೇ ಬಹಿರಂಗವಾಗಬೇಕಿದೆ.

ಅಂದಹಾಗೆ, ಲಾಕ್​ಡೌನ್​ ಮುಗಿದ ನಂತರ ಶುರುವಾದ ಮೊದಲ ಚಿತ್ರವೆಂದರೆ ಅದು 'ಹೀರೋ'. ಚಿಕ್ಕಮಗಳೂರು ಬಳಿಯ ಎಸ್ಟೇಟ್​ವೊಂದಕ್ಕೆ ಹೋದ ರಿಷಭ್​ ಮತ್ತು ಅವರ ಚಿತ್ರತಂಡ, ಅಲ್ಲೇ 40ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಿಕೊಂಡು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಇಷ್ಟು ದಿನಗಳ ಕಾಲ ಪೋಸ್ಟ್​ಪ್ರೊಡಕ್ಷನ್​ ಹಂತದಲ್ಲಿದ್ದ ಚಿತ್ರ, ಇದೀಗ ಮುಕ್ತಾಯದ ಹಂತಕ್ಕೆ ಬಂದಿದ್ದು, ಸದ್ಯದಲ್ಲೇ ಸೆನ್ಸಾರ್​ ಆಗಲಿದೆ.

'ಹೀರೋ' ಚಿತ್ರದಲ್ಲಿ ರಿಷಭ್​ ಶೆಟ್ಟಿ, ಗಾನವಿ ಲಕ್ಷ್ಮಣ್​, ಪ್ರಮೋದ್​ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಅಶೋಕವನ ಎಸ್ಟೇಟ್​ ಎಂಬ ಎಸ್ಟೇಟ್​​ನಲ್ಲಿ ನಡೆಯುವ ಕಥೆ ಇರುವ ಈ ಚಿತ್ರವನ್ನು ನಿರ್ದೇಶಿಸಿರುವವರು ಭರತ್​ ರಾಜ್​. 'ಕಿರಿಕ್​ ಪಾರ್ಟಿ' ಮುಂತಾದ ಚಿತ್ರಗಳಿಗೆ ನಿರ್ದೇಶಕರಾಗಿದ್ದ ಭರತ್​, 'ಹೀರೋ' ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಅಜನೀಶ್​ ಲೋಕನಾಥ್​ ಸಂಗೀತ ಈ ಚಿತ್ರಕ್ಕಿದೆ.