ಸಿನಿವಾಣಿ

ಜುಲೈ 4ಕ್ಕೆ ‘ಹೆಬ್ಬುಲಿ ಕಟ್’: ಮಾನ್ವಿ ಮೂಲದ ನಿರ್ದೇಶಕ ಭೀಮ್ ರಾವ್ ನಿರ್ದೇಶನದ ಚಿತ್ರ

ಬೆಂಗಳೂರು: ‘ಹೆಬ್ಬುಲಿ’ ಚಿತ್ರದಲ್ಲಿ ನಟ ಕಿಚ್ಚ ಸುದೀಪ್ ವಿಭಿನ್ನ ಕೇಶ ವಿನ್ಯಾಸ 2017ರಲ್ಲಿ ಟ್ರೆಂಡ್ ಸೃಷ್ಟಿಸಿತ್ತು. ಮಕ್ಕಳು, ಯುವಕರು ಆ ಹೇರ್‌ಸ್ಟೈಲ್ ಮಾಡಿಸಿಕೊಂಡು ಸಂಭ್ರಮಿಸಿದ್ದರು. ಆ ವಿಭಿನ್ನ ಕೇಶ ವಿನ್ಯಾಸದ ಎಳೆಯೊಂದಿಗೆ ಸಾಮಾಜಿಕ ವಿಷಯಗಳನ್ನಿಟ್ಟುಕೊಂಡು ಮಾನ್ವಿ ಮೂಲದ ನಿರ್ದೇಶಕ ಭೀಮ್ ರಾವ್ ‘ಹೆಬ್ಬುಲಿ ಕಟ್’ ಸಿನಿಮಾ ಮಾಡಿದ್ದು, ಇತ್ತೀಚೆಗಷ್ಟೆ ಟ್ರೇಲರ್ ರಿಲೀಸ್ ಮಾಡಲಾಗಿದೆ. ನಟ ಸತೀಶ್ ನೀನಾಸಂ ಈ ಚಿತ್ರವನ್ನು ಅರ್ಪಿಸುತ್ತಿದ್ದು, ನವೀನ್ ಶಂಕರ್ ಜತೆ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಹಾಸ್ಯ, ಭಾವನಾತ್ಮಕ ದೃಶ್ಯಗಳು ಜತೆಗೆ ಸಾಮಾಜಿಕ ಅಂಶಗಳು ಟ್ರೇಲರ್‌ನಲ್ಲಿವೆ. ಸತೀಶ್ ನೀನಾಸಂ. ‘ಈ ಸಿನಿಮಾ ನನಗೆ ಹೆಚ್ಚು ಕನೆಕ್ಟ್ ಆಗುತ್ತದೆ. ಒಮ್ಮೆ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಕರೆ ಮಾಡಿ, ‘ಹೆಬ್ಬುಲಿ ಕಟ್’ ಸಿನಿಮಾ ನೋಡಿ, ಸಾಧ್ಯವಾದರೆ, ಜತೆಯಾಗಿ ನಿಲ್ಲಬೇಕು ಎಂದರು. ಸಿನಿಮಾ ನನ್ನನ್ನು ತುಂಬ ಸೆಳೆಯಿತು. ಮೊದಲರ್ಧ ಮುಗಿಯುಷ್ಟರಲ್ಲಿ ಎದೆ ಭಾರವಾಯ್ತು. ದ್ವಿತೀಯಾರ್ಧ ಮುಗಿಸಿದಾಗ ಕಡೆಯ 20 ನಿಮಿಷ ಉಸಿರಾಡಲು ಕಷ್ಟವಾಯಿತು. ಭಯ, ತಳಮಳ ಶುರುವಾಯ್ತು. ಒಂದೊಳ್ಳೆ ಕಂಟೆಂಟ್ ಇರುವ ಚಿತ್ರ’ ಎಂದು ಮಾಹಿತಿ ನೀಡಿದರು. ಭೀಮ್ ರಾವ್. ‘ಇದು ಆ್ ಬೀಟ್ ಚಿತ್ರವಲ್ಲ, ನೋಡಿದವರಿಗೆ ಕಣ್ಣೀರು ಬರಬಹುದು. ನೈಜ ಘಟನೆಯಾಧಾರಿತ ಸಿನಿಮಾ. ಸುದೀಪ್ ಅವರನ್ನು ಈ ಚಿತ್ರದಲ್ಲಿ ಐಕಾನ್ ಆಗಿ ತೋರಿಸಿದ್ದೇವೆ’ ಎಂದು ಮಾಹಿತಿ ನೀಡಿದರು. ಮೌನೇಶ್ ನಟರಂಗ, ಅನನ್ಯ ನಿಹಾರಿಕಾ, ಮಹಾದೇವ ಹಡಪದ, ಉಮಾ ವೈ.ಜಿ., ವಿನಯ್ ಮಹಾದೇವನ್, ಮಹಾಂತೇಶ್ ಹಿರೇಮಠ ಕಲಾ ಬಳಗದಲ್ಲಿದ್ದಾರೆ.