ಸಿನಿವಾಣಿ

ಏಕ್​ಲವ್​ಯಾ: ಎದೆಬಡಿತ ಜೋರಾಗಿದೆ...

ಬೆಂಗಳೂರು: ‘ಜೋಗಿ’ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಚಿತ್ರ ಇಂದು (ಫೆ. 24) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ರಕ್ಷಿತಾ ಸಹೋದರ ಮತ್ತು ಪ್ರೇಮ್ ಬಾಮೈದ ರಾಣ ನಾಯಕನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಹೇಗಿದೆ ಮೊದಲ ಚಿತ್ರದ ಅನುಭವ ಎಂದರೆ, ಚಿತ್ರದ ಹಾಡಿನಂತೆ ‘ಎದೆ ಬಡಿತ ಜೋರಾಗಿದೆ...’ ಎಂದು ರಾಣ ಉತ್ತರಿಸುತ್ತಾರೆ. ‘ಮೊದಲ ಚಿತ್ರವೆಂದ ಮೇಲೆ ಸಹಜವಾಗಿ ಟೆನ್ಶನ್ ಜೋರಾಗಿದೆ. ಮೇಲಾಗಿ ಅಕ್ಕ ಚಿತ್ರ ನಿರ್ಮಾಣ ಮಾಡಿದರೆ, ಬಾವ ನಿರ್ದೇಶನ ಮಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಏಳು ವರ್ಷಗಳ ಕನಸು ಇಂದು ನನಸಾಗುತ್ತಿದೆ’ ಎನ್ನುತ್ತಾರೆ ರಾಣ.

ರಾಣ ಇದಕ್ಕೂ ಮೊದಲು ‘ದಿ ವಿಲನ್’ ಚಿತ್ರಕ್ಕೆ ಕೆಲಸ ಮಾಡಿದವರು. ಆ ಚಿತ್ರದಲ್ಲಿ ಸಾಕಷ್ಟು ಅನುಭವ ದಕ್ಕಿದಂತೆ. ‘ಮೊದಲ ಚಿತ್ರದಲ್ಲೇ ನನಗೆ ಮೂರು ಗುರುಗಳು ಸಿಕ್ಕಿದರು. ಪ್ರೇಮ್ ಶಿವಣ್ಣ ಮತ್ತು ಸುದೀಪ್ ಅವರಿಂದ ಸಾಕಷ್ಟು ಕಲಿತಿದ್ದೇನೆ. ‘ಬರೀ ಸಹಾಯಕ ನಿರ್ದೇಶಕನಾಗಿದ್ದರೆ ಸಾಲದು, ನೀನು ಹೀರೋ ಆಗುವುದಕ್ಕೆ ಬಂದವನು. ನನ್ನ ದೃಶ್ಯಗಳನ್ನು ಮಾನಿಟರ್ ಮಾಡಿ ತೋರಿಸು ಎಂದು ಸುದೀಪ್ ಹೇಳುತ್ತಿದ್ದರು. ಇದಕ್ಕೆ ನಿರ್ದೇಶಕರೂ ಒಪ್ಪಿದರು. ಅವರು ಹೇಳಿಕೊಟ್ಟಿದ್ದನ್ನು ಮೊದಲು ನಟಿಸಿ ತೋರಿಸುತ್ತಿದ್ದೆ. ನಾನು ಶೇ. 1ರಷ್ಟು ಮಾಡಿದ್ದರೆ, ಕೊನೆಗೆ ಸುದೀಪ್ ಶೇ. 100ರಷ್ಟು ಜೀವ ತುಂಬುತ್ತಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ ಅವರು.

ಆದರೆ, ಅಷ್ಟಕ್ಕೇ ಮುಗಿಯಲಿಲ್ಲ. ಒಬ್ಬ ನಟನಿಗೆ ಬೇಕಾದ ಎಲ್ಲ ತರಬೇತಿಗಳನ್ನು ಪಡೆದೇ ಕ್ಯಾಮೆರಾ ಮುಂದೆ ನಿಂತರಂತೆ ರಾಣ. ನ್ಯೂಯಾರ್ಕ್​ನಲೀ ಸ್ಟ್ರಾಬರ್ಸ್ ಥಿಯೇಟರ್​ನಲ್ಲಿ ನಟನೆ, ಇಮ್ರಾನ್ ಸರ್ದಾರಿಯಾರಿಂದ ನೃತ್ಯ, ಮಾಸ್ ಮಾದಾರಿಂದ ಫೈಟು ಕಲಿತು ‘ಏಕ್ ಲವ್ ಯಾ’ದಲ್ಲಿ ನಟಿಸಿದ್ದಾರೆ. ‘ಇದು ಪ್ರೇಮಕಥೆಯಾದರೂ ಮರ ಸುತ್ತುವ ಕಥೆಯಲ್ಲ. ಕಮರ್ಷಿಯಲ್ ಅಂಶಗಳಿರುವ ಚಿತ್ರ ಇದು. ನಮ್ಮ ಪ್ರಯತ್ನ ಮಾಡಿದ್ದೇವೆ. ಜನ ಏನು ತೀರ್ಪು ಕೊಡುತ್ತಾರೋ ’ ಎಂದು ಕಾಯುತ್ತಿದ್ದಾರೆ ರಾಣ.