ಚೆನ್ನೈ: ಸೂಪರ್ಸ್ಟಾರ್ ರಜನಿಕಾಂತ್, ನಟ ಶ್ರೀನಿವಾಸನ್ ಮತ್ತು ಚಲನಚಿತ್ರ ನಿರ್ಮಾಪಕ ಆಡಮ್ ಅಯೂಬ್, ಮದ್ರಾಸ್ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಒಟ್ಟಿಗೆ ಅಧ್ಯಯನ ಮಾಡಿದರು. ರಜನಿಕಾಂತ್ ಅವರ ಹಳೆಯ ಆತ್ಮೀಯ ಸ್ನೇಹಿತರಲ್ಲಿ ಆಡಮ್ ಅಯೂಬ್ ಕೂಡ ಒಬ್ಬರು. ಆರಂಭದ ದಿನಗಳಲ್ಲಿ ರಜನಿಕಾಂತ್ ಸೂಪರ್ ಸ್ಟಾರ್ ಪಟ್ಟಕ್ಕೇರಲು ಕಾರಣರಾದ ಗೆಳೆಯರಲ್ಲಿ ಅವರೂ ಒಬ್ಬರು. ಇದೀಗ ಆಡಮ್ ಅಯೂಬ್ ತಮ್ಮ ಸವಿ ನೆನಪುಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.
ಆನ್‌ಲೈನ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆಡಮ್ ಅಯೂಬ್ ಅವರು ರಜನಿಕಾಂತ್ ಜೀವನ ಮತ್ತು ಚಿತ್ರರಂಗದ ಪ್ರವೇಶವನ್ನು ನೆನಪಿಸಿಕೊಂಡಿದ್ದಾರೆ. ರಜನಿಕಾಂತ್ ಅವರು ತುಂಬಾ ಕಪ್ಪಗಿದ್ದಾರೆ. ಇದೇ ಕಾರಣಕ್ಕೆ ಈ ಹಿಂದೆ ಅವರಲ್ಲಿ ಕೀಳರಿಮೆಯ ಭಾವ ಜಾಸ್ತಿ ಇತ್ತು. ಅಷ್ಟೇ ಅಲ್ಲದೆ, ರಜಿನಿ ಅವರು ಬಡ ಕುಟುಂಬದ ಹಿನ್ನೆಲೆಯಿಂದ ಬಂದವರು. ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದರು. ರಜೆ ಹಾಕಿ ನಟನೆಯನ್ನು ಕಲಿಯಲು ಬರುತ್ತಿದ್ದರು. ಸ್ನೇಹಿತರು ಹಾಗೂ ಬಸ್ ಕಂಡಕ್ಟರ್ಗಳು ಕೂಡ ರಜಿನಿಗೆ ಒಂದಷ್ಟು ಹಣ ಕೊಡುತ್ತಿದ್ದರು. ಆದುದರಿಂದಲೇ ಆಗ ರಜನಿಕಾಂತ್ ನಟನೆ ಕಲಿಯಲು ಸಾಧ್ಯವಾಯಿತು. ಇಲ್ಲವಾದಲ್ಲಿ ನಟನೆಯಿಂದ ದೂರ ಉಳಿಯಬೇಕಾಗಿತ್ತು.
ನೀನು ಬೆಳ್ಳಗಿರುವೆ ಎಂದು ರಜಿನಿ ನನಗೆ ಆಗಾಗ ಹೇಳುತ್ತಿದ್ದರು. ಆದರೆ, ತನ್ನ ಬಗ್ಗೆ ಕೀಳರಿಮೆ ಭಾವನೆ ಹೊಂದಿದ್ದರು. ಆಗ ನಾನು ರಜಿನಿಗೆ ಸತ್ಯನ್ ಅವರ ಕತೆ ಹೇಳುತ್ತಿದ್ದೆ. ಸತ್ಯನ್ ಅವರು ರಜಿನಿಗಿಂತ ಕಪ್ಪಾಗಿದ್ದರು. ಇಲ್ಲಿ ಬಣ್ಣವು ಸಮಸ್ಯೆಯಲ್ಲ ಎಂದು ನಾನು ರಜಿನಿಗೆ ಭರವಸೆ ನೀಡುತ್ತಿದೆ. ತರಬೇತಿ ಪಡೆದ ಬಳಿಕ ಅಂತಿಮ ಪರೀಕ್ಷೆಯ ನಂತರ ನಿರ್ದೇಶಕ ಕೆ. ಬಾಲಚಂದ್ರನ್ ಅವರು ರಜನಿಕಾಂತ್ ಅವರನ್ನು ಕರೆದರು.
ರಜಿನಿಕಾಂತ್ ಅವರು 1975ರಲ್ಲಿ ಕೆ.ಬಾಲಚಂದ್ರನ್ ನಿರ್ದೇಶನದ ಅಪೂರ್ವ ರಾಗಂಗಲ್ ಚಿತ್ರದಲ್ಲಿ ನಟನೆಯನ್ನು ಪ್ರಾರಂಭಿಸಿದರು. ಅದರ ಪ್ರೀಮಿಯರ್ ಶೋಗೆ ನನ್ನನ್ನು ಆಹ್ವಾನಿಸಲಾಗಿತ್ತು. ಆ ಸಮಯದಲ್ಲೂ ರಜಿನಿ ಕೆಲಸಕ್ಕೆ ಹೋಗಿದ್ದರು. ಪ್ರೀಮಿಯರ್ ಶೋ ನೋಡಿದ ನಂತರ ನಾನು ರಜಿನಿಗೆ ಕೆಲಸ ಬಿಡುವಂತೆ ಹೇಳಿದೆ. ಆದರೆ, ಇನ್ನು ಚಿತ್ರ ಬಿಡುಗಡೆಯಾಗಿಲ್ಲ ಎಂಬುದು ರಜನಿಕಾಂತ್ ಅವರ ಉತ್ತರವಾಗಿತ್ತು. ರಾಜೀನಾಮೆ ನೀಡಿದ ನಂತರ ಹೆಚ್ಚಿನ ಚಿತ್ರಗಳು ಸಿಗದಿದ್ದರೆ ನನ್ನ ಕುಟುಂಬ ಉಪವಾಸ ಬೀಳಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಆದರೆ, ನನ್ನ ಒತ್ತಾಯಕ್ಕೆ ಮಣಿದು ಕೊನೆಗೂ ರಜಿನಿಕಾಂತ್ ರಾಜೀನಾಮೆ ನೀಡಿದರು. ಇದಾದ ನಂತರ ಅವರು ದೊಡ್ಡ ಸ್ಟಾರ್ ಆದರು. ಆ ನಂತರ ನಾವು ಹೆಚ್ಚು ಭೇಟಿಯಾಗಿಲ್ಲ ಎಂದು ಆಡಮ್ ಅಯೂಬ್ ಹೇಳಿದರು. (ಏಜೆನ್ಸೀಸ್)