ಸಿನಿವಾಣಿ

ಹಿಟ್​ ಸೀರಿಯಲ್​ಗಳ ನಿರ್ದೇಶಕ ಚಿತ್ರರಂಗಕ್ಕೆ; 'ಕಂಬ್ಳಿಹುಳ' ನಟನ ಜತೆಗೆ ಸಿನಿಮಾ

ಬೆಂಗಳೂರು: ಕಿರುತೆರೆಯಲ್ಲಿ ಜನಪ್ರಿಯರಾದ ಹಲವು ನಿರ್ದೇಶಕರು ಹಿರಿತೆರೆಯಲ್ಲೂ ಹೆಸರು ಮಾಡಿದ್ದಾರೆ. ಈಗ ಆ ಸಾಲಿಗೆ ಹಯವದನ ಸಹ ಸೇರಲು ಹೆಜ್ಜೆ ಇಟ್ಟಿದ್ದಾರೆ. ಈಗಾಗೇ ಕನ್ನಡ ಕಿರುತೆರೆಯಲ್ಲಿ 'ಶುಭ ಮಂಗಳ', 'ನಾಗಿಣಿ', 'ಕಮಲಿ', 'ಅಗ್ನಿ ಸಾಕ್ಷಿ', ಮಧುಬಾಲ' ಮುಂತಾದ ಜನಪ್ರಯ ಧಾರಾವಾಹಿಗಳನ್ನು ನಿರ್ದೇಶಿಸಿರುವ ಅವರು ಈಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಇತ್ತೀಚೆಗಷ್ಟೇ ಬಿಡುಗಡೆಯಾದ 'ಕಂಬ್ಳಿಹುಳ' ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿರುವ ಅಂಜನ್​ ನಾಗೇಂದ್ರ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಇತ್ತೀಚೆಗೆ ಆ ಚಿತ್ರದ ಸ್ಕ್ರಿಪ್ಟ್​ ಪೂಜೆ ಸಹ ಸದ್ದಿಲ್ಲದೆ ಮುಗಿದಿದೆ. ಇನ್ನು, ಚಿತ್ರ ಪ್ರಾರಂಭವಾಗುವುದಕ್ಕೆ ದಿನಗಣನೆ ಪ್ರಾರಂಭವಾಗಿದ್ದು, 2023ರ ಜನವರಿಯಲ್ಲಿ ಈ ಚಿತ್ರ ಪ್ರಾರಂಭವಾಗುವ ಸಾಧ್ಯತೆ ಇದೆ.

ತಮ್ಮ ಹಿರಿತೆರೆ ಎಂಟ್ರಿ ಕುರಿತು ಮಾತನಾಡುವ ಹಯವದನ, 'ಕಿರುತೆರೆಯಲ್ಲಿ ಸಾಕಷ್ಟು ವರ್ಷಗಳಿಂದ ಸಕ್ರಿಯನಾಗಿದ್ದೇನೆ. ಕೆಲವು ಜನಪ್ರಿಯ ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದೇನೆ. ಸಿನಿಮಾ ನಿರ್ದೇಶನ ಇದೇ ಮೊದಲು. ಇದೊಂದು ಸೋಶಿಯಲ್ ಡ್ರಾಮಾ ಕಥೆ ಇರುವ ಜರ್ನಿ ಸಿನಿಮಾ. ಅಪ್ಪ-ಮಗನ ಸೆಂಟಿಮೆಂಟ್ ಚಿತ್ರದ ಹೈಲೈಟ್. ಸಾಮಾಜಿಕ ಜಾಲತಾಣಕ್ಕೆ ಅಡಿಕ್ಟ್ ಆಗಿರುವ ಮಕ್ಕಳು ಮತ್ತು ಕಷ್ಟಪಟ್ಟು ದುಡಿದು ಬದುಕು ಕಟ್ಟಿಕೊಂಡಿರುವ ಪೋಷಕರ ನಡುವಿನ ಜನರೇಶನ್ ಗ್ಯಾಪ್​ ಕುರಿತು ಈ ಚಿತ್ರದಲ್ಲಿ ಹೇಳಲಿದ್ದೇವೆ' ಎನ್ನುತ್ತಾರೆ ಹಯವದನ.

ಈ ಚಿತ್ರದಲ್ಲಿ ಒಂದು ಪ್ರೇಮಕಥೆಯೂ ಇದೆಯಂತೆ. 'ಯುವಕರಿಗೆ ಸ್ಪಂದಿಸುವ ಮತ್ತು ಅವರಿಗೆ ಸ್ಫೂರ್ತಿ ತುಂಬುವ ಕಥೆ ಈ ಚಿತ್ರದಲ್ಲಿದೆ. ಸದ್ಯದಲ್ಲೇ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಲಿದ್ದೇವೆ' ಎಂದು ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಅವರು ಹಂಚಿಕೊಳ್ಳುತ್ತಾರೆ.

ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್ ಹಾಗೂ ಕೃಷ್ಣಛಾಯ ಚಿತ್ರ ಬ್ಯಾನರ್​ನಡಿ ಪವನ್ ಸಿಮಿಕೇರಿ ಮತ್ತು ಹಯವದನ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಿವ ಪ್ರಸಾದ್ ಸಂಗೀತ ಸಂಯೋಜನೆ, ನಟರಾಜ್ ಮದ್ದಾಲ ಛಾಯಾಗ್ರಹಣ ಈ ಚಿತ್ರಕ್ಕಿದೆ. ನಾಯಕಿ ಮತ್ತು ಉಳಿದ ಕಲಾವಿದರ ಆಯ್ಕೆ ಇನ್ನಷ್ಟೇ ಆಗಬೇಕಿದೆ.