ಬೆಂಗಳೂರು: ನಟಿ ಹರ್ಷಿಕಾ ಪೂಣಚ್ಚ ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸದ್ಯ ವಲಸೆ ಕಾರ್ವಿುಕರ ಬೆನ್ನಿಗೆ ನಿಂತಿದ್ದಾರೆ. ಭುವನ್ ಪೊನ್ನಣ್ಣ ಜತೆಗೂಡಿ ದಿನಸಿ ಕಿಟ್, ಆಹಾರದ ಪೊಟ್ಟಣ ವಿತರಣೆಯಂಥ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಈ ನಡುವೆ ಅವರ ಹೊಸ ಚಿತ್ರದ ಅಪ್ಡೇಟ್ ಮಾಹಿತಿಯೊಂದು ಲಭ್ಯವಾಗಿದೆ.
ಭೋಜಪುರಿ ಭಾಷೆಯ ಚಿತ್ರದಲ್ಲಿ ಹರ್ಷಿಕಾ ನಟಿಸಿದ್ದು, ಆ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಪ್ರೇಮಾಂಶು ಸಿಂಗ್ ನಿರ್ದೇಶನದಲ್ಲಿ ತಯಾರಾಗಿರುವ ‘ಹಮ್ ಹೈ ರಾಹಿ ಪ್ಯಾರ್ ಕೆ’ ಚಿತ್ರದಲ್ಲಿ ಭೋಜಪುರಿಯ ಖ್ಯಾತ ನಟ ಪವನ್ ಸಿಂಗ್ಗೆ ಹರ್ಷಿಕಾ ಜೋಡಿಯಾಗಿದ್ದಾರೆ.
ಬಹುತೇಕ ಲಂಡನ್ನಲ್ಲಿ ಈ ಚಿತ್ರದ ಶೂಟಿಂಗ್ ನಡೆದಿದ್ದು, ಬಿಡುಗಡೆಗೂ ಸಿದ್ಧವಿದೆ. ರೊಮ್ಯಾಂಟಿಕ್ ಕಾಮಿಡಿ ಶೈಲಿಯ ಈ ಚಿತ್ರಕ್ಕೆ ಅಭಯ್ ಸಿನ್ಹಾ, ಶಿವಾಂಶು ಪಾಂಡೆ ಬಂಡವಾಳ ಹೂಡಿದ್ದಾರೆ. ಈಗಾಗಲೇ ದಕ್ಷಿಣದ ಎಲ್ಲ ಭಾಷೆಗಳಲ್ಲಿ ನಟಿಸಿರುವ ಹರ್ಷಿಕಾ ಇದೀಗ ಮೊದಲ ಸಲ ಭೋಜಪುರಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಲಾಕ್ಡೌನ್ ಮುಗಿದು ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ನಂತರ ಚಿತ್ರ ಬಿಡುಗಡೆಯಾಗಲಿದೆ.