|ಚೇತನ್ ನಾಡಿಗೇರ್ ಬೆಂಗಳೂರು
ಇದು ಮೂವರು ಗಿರಿಯರ ಕಥೆ ... ಹಾಗಂತ ಹೇಳಿ ನಕ್ಕರು ರಿಷಬ್. ಜೂನ್ 23ಕ್ಕೆ ಬಿಡುಗಡೆ ಆಗುತ್ತಿರುವ ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರದಲ್ಲಿ ಅವರು ಗಿರಿ ಎಂಬ ಸಹಾಯಕ ನಿರ್ದೇಶಕನ ಪಾತ್ರ ಮಾಡಿದ್ದಾರೆ. ಇಡೀ ಚಿತ್ರ ನಿಮ್ಮ ಸುತ್ತಲೇ ಸುತ್ತುತ್ತದಾ ಎಂದರೆ, ಇದು ಒಬ್ಬ ಗಿರಿಯ ಕಥೆಯಲ್ಲ ಮೂವರು ಗಿರಿಯರ ಕಥೆ ಎನ್ನುತ್ತಾರೆ. ‘ಇಲ್ಲಿ ನಾನೊಬ್ಬನೇ ಗಿರಿ ಅಲ್ಲ. ನಾಯಕಿಯ ಹೆಸರು ಗಿರಿಜಾ ಥಾಮಸ್. ವಿಲನ್ ಹೆಸರು ಸಹ ಗಿರಿ. ಇದು ಮೂವರು ಗಿರಿಯರ ಕಥೆ.
ಒಂದಕ್ಕಿಂತ ಒಂದು ಕ್ರೇಜಿಯಾದಂತಹ ಪಾತ್ರಗಳು. ಇದೊಂದು ಪಕ್ಕಾ ಕಾಮಿಡಿ ಚಿತ್ರ ಎನ್ನುತ್ತಾರೆ’ ರಿಷಬ್. ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರದ ಪ್ರಚಾರದ ನಡುವೆಯೇ ಅವರು ‘ಕಾಂತಾರ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೂ ಮುಂದುವರೆಸಿದ್ದಾರೆ. ಆ ಚಿತ್ರದ ಕುರಿತು ಮಾತನಾಡುವ ಅವರು, ‘ಮೊದಲ ಸಿನಿಮಾ ಮಾಡಿದ ಅನುಭವ ಆಯ್ತು. ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಆದ ನಂತರ ನಾಲ್ಕು ವರ್ಷಗಳ ಗ್ಯಾಪ್ ಆಗಿತ್ತು. ಮತ್ತೆ ನಿರ್ದೇಶನ ಮಾಡಿದ್ದು ಒಂದು ಹೊಸ ಜೋಶ್ ಬಂದಂತಾಗಿದೆ ಎನ್ನುತ್ತಾರೆ ರಿಷಬ್.
‘ಕಾಂತಾರ’ದಲ್ಲಿ ಅವರು ಕಂಬಳದಲ್ಲಿ ಕೋಣ ಓಡಿಸುವ ಜಾಕಿ ಪಾತ್ರ ಮಾಡಿದ್ದಾರಂತೆ. ಹಾಗಂತ ಇದು ಸಂಪೂರ್ಣ ಕಂಬಳದ ಕಥೆ ಅಲ್ಲವಂತೆ. ಹಾಗೆಯೇ, ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ವೀರ ಕಂಬಳ’ ಚಿತ್ರಕ್ಕೂ, ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲವಂತೆ. ‘ಅದು ಸಂಪೂರ್ಣವಾಗಿ ಕಂಬಳ ಮತ್ತು ಅದರ ಸುತ್ತ ಇರುವ ರಾಜಕೀಯದ ಕುರಿತಾದ ಚಿತ್ರ. ಇದು ಕಂಬಳದ ಕಥೆಯಲ್ಲ. ಭೂಮಿಯ ಕಥೆ. ಊರಿನಲ್ಲಿ ಇದ್ದಾಗ ಕೆಲವು ಘಟನೆಗಳನ್ನು ನೋಡಿದ್ದೆ. ಅರಣ್ಯ ಇಲಾಖೆ, ಭೂಮಿ ಒತ್ತುವರಿ ... ಹೀಗೆ ಹಲವು ವಿಷಯಗಳ ಸುತ್ತ ಈ ಚಿತ್ರ ಸುತ್ತುತ್ತದೆ.
ನಮ್ಮ ಕಡೆ ಭೂಮಿ ಎಂದರೆ ಬರೀ ಭೂಮಿಯಲ್ಲ. ಅದೊಂದು ಸಂಸ್ಕೃತಿ. ಅಲ್ಲಿನ ದೈವ, ಕಂಬಳ ಎಲ್ಲವೂ ಬಹಳ ಮುಖ್ಯವಾಗುತ್ತದೆ. ಈ ಎಲ್ಲದರ ಕುರಿತು ಚಿತ್ರದಲ್ಲಿ ಹೇಳುವುದಕ್ಕೆ ಹೊರಟಿದ್ದೇವೆ’ ಎನ್ನುತ್ತಾರೆ ಅವರು. ರಿಷಬ್ ಈ ಚಿತ್ರದಲ್ಲಿ ಕೋಣ ಓಡಿಸಿದ್ದಾರಂತೆ. ‘ಇಲ್ಲಿ ನಾಯಕ ಎಂಥವನು ಎಂದು ತೋರಿಸುವುದಕ್ಕೆ ಕಂಬಳದ ದೃಶ್ಯವೂ ಇದೆ. ನಾವು ಮನೆಯ ವತಿಯಿಂದ ಕಂಬಳ ನಡೆಸಿದರೂ ಇಷ್ಟು ವರ್ಷ ನಾನು ಯಾವತ್ತೂ ಕೋಣ ಓಡಿಸಿರಲಿಲ್ಲ. ಈ ಚಿತ್ರಕ್ಕಾಗಿ ಒಂದಿಷ್ಟು ದಿನ ಅಭ್ಯಾಸ ಮಾಡಿದೆ.
ನಮ್ಮನೆ ಗದ್ದೆಯಲ್ಲೇ ಕಂಬಳದ ಚಿತ್ರೀಕರಣದ ನಡೆದಿದ್ದು. ಇಡೀ ಚಿತ್ರದ ಚಿತ್ರೀಕರಣ ನಮ್ಮ ಊರಲ್ಲೇ ಆಗಿದೆ. ಮನೆಯಿಂದ ಐದು ನಿಮಿಷದ ದೂರದಲ್ಲಿ ಊರಿನ ಸೆಟ್ ಹಾಕಿದ್ದೆವು’ ಎಂದು ಮಾಹಿತಿ ಕೊಡುತ್ತಾರೆ ಅವರು. ಸೆ.30ಕ್ಕೆ ‘ಕಾಂತಾರ’ ಬಿಡುಗಡೆ ಮಾಡಿ, ಆ ನಂತರ ‘ಬೆಲ್ ಬಾಟಂ 2’ ಚಿತ್ರದಲ್ಲಿ ತೊಡಗಿಸಿಕೊಳ್ಳುತ್ತಾರಂತೆ ರಿಷಬ್. ಇನ್ನು, ಶಿವರಾಜಕುಮಾರ್ ಅಭಿನಯದಲ್ಲಿ ಅವರೊಂದು ಚಿತ್ರ ನಿರ್ದೇಶಿಸುವ ಸುದ್ದಿ ಇತ್ತು. ಈ ಕುರಿತು ಕೇಳಿದರೆ, ಬಹುಶಃ ಮುಂದಿನ ವರ್ಷ ಶುರುವಾಗಬಹುದು ಎನ್ನುತ್ತಾರೆ. ಪ್ರಮೋದ್ ಶೆಟ್ಟಿ ಅಭಿನಯದಲ್ಲಿ ‘ಲಾಫಿಂಗ್ ಬುದ್ಧ’ ಎಂಬ ಚಿತ್ರವನ್ನು ಅವರು ನಿರ್ವಿುಸುತ್ತಿದ್ದು, ಜೂನ್ 27ರಿಂದ ಆ ಚಿತ್ರದ ಚಿತ್ರೀಕರಣ ಶುರುವಾಗಲಿದೆಯಂತೆ.