ಬೆಂಗಳೂರು: 2020 ಬಂದೇ ಬಿಡ್ತು. ಆ ಪ್ರಯುಕ್ತ ಸಿನಿಮಾ ತಂಡಗಳು ತಂತಮ್ಮ ಚಿತ್ರಗಳ ಹೊಸ ಪೋಸ್ಟರ್ಗಳನ್ನು ಬಿಡುಗಡೆ ಮಾಡಿಕೊಂಡು ಹೊಸ ವರ್ಷದ ಶುಭಾಶಯ ಕೋರುತ್ತಿವೆ. ಪುನೀತ್ ರಾಜ್ಕುಮಾರ್, ಉಪೇಂದ್ರ, ರಮೇಶ್ ಅರವಿಂದ್, ಡಾಲಿ ಧನಂಜಯ, ದುನಿಯಾ ವಿಜಯ್, ಶರಣ್.. ಹೀಗೆ ಸ್ಟಾರ್ ಕಲಾವಿದರ ಸಿನಿಮಾಗಳ ಲುಕ್ಗಳು ಕಣ್ಣರಳಿಸಿ ನೋಡುವಂತಿವೆ.
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ‘ನಟಸಾರ್ವಭೌಮ’ ಸಿನಿಮಾ ಬಳಿಕ ಸಂತೋಷ್ ಆನಂದ್ರಾಮ್ ಜತೆ ಮತ್ತೆ ಕೈ ಜೋಡಿಸಿದ್ದಾರೆ. ‘ಯುವರತ್ನ’ ಚಿತ್ರದ ಮೂಲಕ ಈ ಜೋಡಿ ಆಗಮಿಸುತ್ತಿದ್ದು, ಟೀಸರ್ ಮೂಲಕವೇ ನಿರೀಕ್ಷೆ ದುಪ್ಪಟ್ಟು ಮಾಡಿತ್ತು. ಈಗ ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿರುವ ಚಿತ್ರತಂಡ ಹೊಸ ವರ್ಷಕ್ಕೆ ಅಸ್ಥಿಪಂಜರದ ಗಿಫ್ಟ್ ನೀಡಿದೆ. ಅಂದರೆ, ಅಸ್ಥಿಪಂಜರ ಹೊತ್ತು ಪುನೀತ್ ಆಗಮಿಸಿದ್ದು, ಲುಕ್ ಕುತೂಹಲ ಹುಟ್ಟಿಸುವಂತಿದೆ.
ಅದೇ ರೀತಿ ಸಿಂಪಲ್ ಸುನಿ ನಿರ್ದೇಶನದ ‘ಅವತಾರ ಪುರುಷ’ ಚಿತ್ರದಲ್ಲಿನ ಶರಣ್-ಆಶಿಕಾ ಜೋಡಿಯ ಮತ್ತೊಂದು ಲುಕ್ ರಿವೀಲ್ ಆಗಿದೆ. ಸಿನಿಮಾದಲ್ಲಿ ಕಥಾನಾಯಕನ ಹಲವು ಅವತಾರಗಳಲ್ಲಿ ಶರಣ್ ಕಾಣಿಸಿಕೊಂಡಿದ್ದು, ಈಗ ಪಕ್ಕಾ ಸಾಂಪ್ರದಾಯಿಕ ಅವತಾರದಲ್ಲಿ ಎದುರಾಗಿದ್ದಾರೆ. ಅದೇ ರೀತಿ ಡಾಲಿ ಧನಂಜಯ ನಟನೆಯ ಬಡವ ರಾಸ್ಕಲ್, ರಮೇಶ್ ಅರವಿಂದ್ ನಟನೆ ಮತ್ತು ನಿರ್ದೇಶನದ ‘100’, ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಚಿತ್ರದ ಗಣೇಶ್, ದಿಗಂತ್, ಪವನ್ ಅವರ ಹೊಸ ಲುಕ್ ನ್ಯೂ ಇಯರ್ಗೆ ಬಿಡುಗಡೆ ಆಗಿದೆ. ಅಷ್ಟೇ ಅಲ್ಲ ಮೊನ್ನೆಯಷ್ಟೇ ‘ರಾಬರ್ಟ್’ ಆಗಿ ಖಡಕ್ ಲುಕ್ನಲ್ಲಿ ಎಂಟ್ರಿಕೊಟ್ಟಿದ್ದ ದರ್ಶನ್, ವರ್ಷದ ಆರಂಭಕ್ಕೆ ಬೈಕ್ ಏರಿ ಆಗಮಿಸಿದ್ದಾರೆ. ಆರ್. ಚಂದ್ರು ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ಅವರ ಬಹುನಿರೀಕ್ಷಿತ ಮತ್ತು ಬಹುಭಾಷೆಯಲ್ಲಿ ನಿರ್ಮಾಣ ಆಗುತ್ತಿರುವ ‘ಕಬ್ಜ’ ತಂಡವೂ ಪೋಸ್ಟರ್ ಮೂಲಕ ಶುಭಕೋರಿದೆ. ಮತ್ತೊಂದೆಡೆ ಜಯರಾಂ ಭದ್ರಾವತಿ ನಿರ್ದೇಶನದಲ್ಲಿ ಉಪೇಂದ್ರ ಅಭಿನಯಿಸುತ್ತಿರುವ ‘ಬುದ್ಧಿವಂತ 2’ ಚಿತ್ರತಂಡ ಕೂಡ ಶುಭ ಹಾರೈಸಿದೆ. ಇತ್ತ ಕಳೆದ ವರ್ಷ ‘ರಾಂಧವ’ ಸಿನಿಮಾ ಮೂಲಕ ನಾಯಕನಾಗಿ ಚಂದನವನಕ್ಕೆ ಪದಾರ್ಪಣೆ ಮಾಡಿದ್ದ ನಟ ಭುವನ್ ಪೊನ್ನಣ್ಣ ಈಗ ‘ಮಾಫಿ: ರಾಕ್ಷಸನ ಸಾಮ್ರಾಜ್ಯ’ ಚಿತ್ರದ ಜತೆ ಆಗಮಿಸುತ್ತಿದ್ದಾರೆ.