- 2011ರ ಮೇ 10ರಂದು ಯೂಟ್ಯೂಬ್ನಲ್ಲಿ "ಶ್ರೀ ಹನುಮಾನ್ ಚಾಲೀಸಾ'ಬಿಡುಗಡೆ ಮಾಡಲಾಗಿತ್ತು
- ಯೂಟ್ಯೂಬ್ನಲ್ಲಿ 500 ಕೋಟಿ ವೀವ್ಸ್ ದಾಟಿದ ಭಾರತದ ಮೊದಲ ಗೀತೆ ಎಂಬ ದಾಖಲೆ ಮಾಡಿದೆ.
- ಯೂಟ್ಯೂಬ್ ಇತಿಹಾಸದಲ್ಲೇ ಅತಿಹೆಚ್ಚು ವೀಕ್ಷಣೆಗೊಂಡ ಅಗ್ರ 10 ಹಾಡುಗಳಲ್ಲಿ ಸ್ಥಾನ ಪಡೆದಿರುವುದು ಅದ್ಭುತ ಸಾಧನೆ
- ಪಂಜಾಬಿ ಹಾಡು "ಲೆಹೆಂಗಾ' 182 ಕೋಟಿ ವೀವ್ಸ್ ಪಡೆದು ಎರಡನೇ ಸ್ಥಾನದಲ್ಲಿದೆ
Hanuman Chalisa - "ಶ್ರೀ ಹನುಮಾನ್ ಚಾಲೀಸಾ'. ಬಹುತೇಕ ಭಾರತೀಯ ಹಿಂದುಗಳು ಪ್ರತಿದಿನ ಕೇಳುವ ಭಕ್ತಿಗೀತೆ. ಯೂಟ್ಯೂಬ್ ಸೇರಿ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಂಗೀತದ ಆ್ಯಪ್ಗಳಲ್ಲಿ ಹನುಮಾನ್ ಚಾಲೀಸಾದ ನೂರಾರು ವರ್ಷನ್ಗಳಿವೆ. ಅವುಗಳಲ್ಲಿ ಅತಿಹೆಚ್ಚು ವೈರಲ್ ಆಗಿರುವುದು ಟಿ ಸಿರೀಸ್ ಮಾಲೀಕ ದಿವಂಗತ ಗುಲ್ಶನ್ ಕುಮಾರ್ ಅವರು ನಟಿಸಿದ್ದ ಹಾಡು. ಲಲಿತ್ ಸೇನ್ ಮತ್ತು ಚಂದರ್ ಸಂಗೀತ ನಿರ್ದೇಶನದಲ್ಲಿ ಹರಿಹರನ್ ಧ್ವನಿಯಾಗಿದ್ದ ಈ ಹಾಡನ್ನು ಶಂಭು ಗೋಪಾಲ್ ನಿರ್ದೇಶಿಸಿದ್ದರು. 2011ರ ಮೇ 10ರಂದು ಯೂಟ್ಯೂಬ್ನಲ್ಲಿ "ಶ್ರೀ ಹನುಮಾನ್ ಚಾಲೀಸಾ'ಬಿಡುಗಡೆ ಮಾಡಲಾಗಿತ್ತು. ಈ 15 ವರ್ಷಗಳಲ್ಲಿ ಈ ಭಕ್ತೀಗಿತೆ ಬರೋಬ್ಬರಿ 501 ಕೋಟಿಗೂ ಅಧಿಕ ಬಾರಿ ವೀಕ್ಷಣೆಗೊಂಡಿದೆ. ಆ ಮೂಲಕ ಯೂಟ್ಯೂಬ್ನಲ್ಲಿ 500 ಕೋಟಿ ವೀವ್ಸ್ ದಾಟಿದ ಭಾರತದ ಮೊದಲ ಗೀತೆ ಎಂಬ ದಾಖಲೆ ಮಾಡಿದೆ. ಈ ಬಗ್ಗೆ ಗುಲ್ಶನ್ ಕುಮಾರ್ ಪುತ್ರ ಟಿ ಸಿರೀಸ್ ಮಾಲೀಕ ಭೂಷಣ್ ಕುಮಾರ್, "ನನ್ನನ್ನೂ ಸೇರಿ ಹನುಮಾನ್ ಚಾಲೀಸಾಗೆ ಕೋಟ್ಯಂತರ ಜನರ ಹೃದಯದಲ್ಲಿ ವಿಶೇಷ ಸ್ಥಾನವಿದೆ. ನನ್ನ ತಂದೆ ಭಕ್ತೀಗಿತೆಗಳನ್ನು ಮನೆ ಮನೆಗಳಿಗೆ ತಲುಪಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಈ ಸಾಧನೆಯು ಅವರ ದೂರದೃಷ್ಟಿಯ ಪ್ರತಿಬಿಂಬವಾಗಿದೆ. ಯೂಟ್ಯೂಬ್ ಇತಿಹಾಸದಲ್ಲೇ ಅತಿಹೆಚ್ಚು ವೀಕ್ಷಣೆಗೊಂಡ ಅಗ್ರ 10 ಹಾಡುಗಳಲ್ಲಿ ಸ್ಥಾನ ಪಡೆದಿರುವುದು ಅದ್ಭುತ ಸಾಧನೆಯೇ ಸರಿ' ಎಂದು ಸಂತಸ ಹಂಚಿಕೊಂಡಿದ್ದಾರೆ. &ಏಜೆನ್ಸೀಸ್
ದಾಖಲೆ ಬರೆದ ಹಾಡುಗಳು
ಯೂಟ್ಯೂಬ್ನಲ್ಲಿ ಅತಿಹೆಚ್ಚು ವೈರಲ್ ಆಗಿರುವ ಹಾಡುಗಳಲ್ಲಿ 1688 ಕೋಟಿ ವೀವ್ಸ್ನೊಂದಿಗೆ "ಬೇಬಿ ಶಾರ್ಕ್' ಮೊದಲ ಸ್ಥಾನದಲ್ಲಿದೆ. ನಂತರ "ಡೆಸ್ಪಸಿಟೊ' ಹಾಡು (885 ಕೋಟಿ ವೀವ್ಸ್) , "ವ್ಹೀಲ್ಸ್ ಆನ್ ದ ಬಸ್' (816 ಕೋಟಿ ವೀವ್ಸ್), "ಬಾತ್ ಸಾಂಗ್ಸ್' (728 ಕೋಟಿ ವೀವ್ಸ್) ಮತ್ತು "ಜಾನಿ ಜಾನಿ ಯೆಸ್ ಪಾಪಾ' (712 ಕೋಟಿ ವೀವ್ಸ್) ಕ್ರಮವಾಗಿ ಎರಡರಿಂದ ಐದನೇ ಸ್ಥಾನದಲ್ಲಿವೆ. ಇನ್ನು ಅತಿ ಹೆಚ್ಚು ವೀಕ್ಷಣೆಯಾದ ಭಾರತೀಯ ಹಾಡುಗಳಲ್ಲಿ 501 ಕೋಟಿ ವೀವ್ಸ್ನೊಂದಿಗೆ "ಶ್ರೀ ಹನುಮಾನ್ ಚಾಲೀಸಾ' ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿರುವ ಹಾಡುಗಳು 200 ಕೋಟಿ ವೀವ್ಸ್ ಕೂಡ ಮುಟ್ಟಿಲ್ಲ ಎಂಬುದು ಗಮನಾರ್ಹ. ಪಂಜಾಬಿ ಹಾಡು "ಲೆಹೆಂಗಾ' (182 ಕೋಟಿ ವೀವ್ಸ್), ಹರಿಯಾಣವೀ ಹಾಡು "52 ಗಜ್ ಕಾ ದಮನ್' (173 ಕೋಟಿ ವೀವ್ಸ್) ಮತ್ತು ತಮಿಳಿನ "ರೌಡಿ ಬೇಬಿ' (171 ಕೋಟಿ ವೀವ್ಸ್) ನಂತರದ ಸ್ಥಾನದಲ್ಲಿವೆ.