ಸಿನಿವಾಣಿ

ಅರ್ಧ ಶತಕ ಪೂರೈಸಿದ ಹನ್ಸಿಕಾ

Webdesk - Ravikanth

ಬಾಲನಟಿಯಾಗಿ ಬಂದು ನಾಯಕಿಯಾಗಿ ಮಿಂಚುತ್ತಿರುವ ಕೆಲವೇ ನಟಿಯರಲ್ಲಿ ಹನ್ಸಿಕಾ ಮೋಟ್ವಾನಿ ಪ್ರಮುಖರು. ತಮಿಳು, ತೆಲುಗು, ಹಿಂದಿ ಜತೆಗೆ ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅವರಿಗೆ ನಾಯಕಿಯಾಗಿ ‘ಬಿಂದಾಸ್’ ಚಿತ್ರದಲ್ಲಿ ನಟಿಸಿದ್ದರು ಹನ್ಸಿಕಾ. ಅವರೀಗ 50 ಚಿತ್ರಗಳನ್ನು ಪೂರ್ಣಗೊಳಿಸಿದ ಖುಷಿಯಲ್ಲಿದ್ದಾರೆ. ಅವರು ನಾಯಕಿಯಾಗಿ ನಟಿಸಿರುವ 50ನೇ ಚಿತ್ರ ‘ಮಹಾ’ ಶುಕ್ರವಾರ (ಜುಲೈ 22) ಬಿಡುಗಡೆಯಾಗಿದೆ.

ಅರ್ಧಶತಕ ಪೂರೈಸಿದ ಖುಷಿಯಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿರುವ ಹನ್ಸಿಕಾ, ‘‘ಮಹಾ’ ನನ್ನ ಮೊದಲ ಮಹಿಳಾ ಪ್ರಧಾನ ಚಿತ್ರ. ಮೊದಲ ಬಾರಿಗೆ ಅಮ್ಮನ ಪಾತ್ರದಲ್ಲಿ ನಟಿಸಿದ್ದೇನೆ. ಹಾಗೆಯೇ ಇದು ನನ್ನ ಮೊದಲ ಥ್ರಿಲ್ಲರ್ ಚಿತ್ರ ಕೂಡ’ ಎಂದಿದ್ದಾರೆ. ಹಾಗೆಯೇ ಮಾಜಿ ಪ್ರಿಯಕರ ತಮಿಳು ನಟ ಸಿಂಬು ಜತೆ ಮತ್ತೆ ತೆರೆ ಹಂಚಿಕೊಂಡಿರುವ ಕುರಿತೂ ಹೇಳಿಕೊಂಡಿರುವ ಹನ್ಸಿಕಾ, ‘ಸಿಂಬು ಯಾವಾಗಲೂ ನನ್ನ ಒಳ್ಳೆಯ ಗೆಳೆಯ. ಕೇವಲ ಒಂದು ಕರೆ ಮಾಡಿ ಕೇಳಿದ್ದಕ್ಕೆ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು’ ಎಂದಿದ್ದಾರೆ.

ಇದೇ ಸಂಭ್ರಮದಲ್ಲಿ ಅಭಿಮಾನಿಗಳಿಗೆ ಒಂದು ಓಪನ್ ಲೆಟರ್ ಬರೆದಿರುವ ಹನ್ಸಿಕಾ, ‘ನನಗೆ ಸಿನಿಮಾನೇ ಎಲ್ಲ. ಒಬ್ಬ ನಟಿಯಾಗಿ 50 ಚಿತ್ರಗಳಲ್ಲಿ ನಟಿಸುವುದು ಸಾಮಾನ್ಯವಾದ ವಿಷಯವಲ್ಲ. ಇದುವರೆಗೂ ನನಗೆ ಬೆಂಬಲವಾಗಿ ನಿಂತ ಎಲ್ಲರಿಗೂ ಧನ್ಯವಾದಗಳು’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. -ಏಜೆನ್ಸೀಸ್