ಸಿನಿವಾಣಿ

ನಾದಬ್ರಹ್ಮ ಹಂಸಲೇಖ ಸಂಗೀತ ನೀಡಿರುವ ‘ಸೋಲ್​ಮೇಟ್ಸ್​‘ ಚಿತ್ರದ ಹಾಡು ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ನಾದಬ್ರಹ್ಮ ಹಂಸಲೇಖ ಸಂಗೀತ ನೀಡಿರುವ, ಪಿ.ವಿ. ಶಂಕರ್​ ನಿರ್ದೇಶನದ ಸಿನಿಮಾ ‘ಸೋಲ್​ಮೇಟ್ಸ್​‘. ಚಿತ್ರಕ್ಕೆ ಪರಿಸರ ಪ್ರೇಮಿ ಎಂಬ ಅಡಿಬರಹವಿದೆ. ‘ಸೋಲ್​ಮೇಟ್ಸ್​‘ನಲ್ಲಿ ಇಬ್ಬರು ನಾಯಕರಿದ್ದು ‘ರಂಗ್​ಬಿರಂಗಿ‘ ಶ್ರೀಜಿತ್ ಆರ್ಯ ಮತ್ತು ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು‘ ನಟ ಪ್ರಸನ್ನ ಶೆಟ್ಟಿ ನಟಿಸಿದ್ದಾರೆ. ಅವರಿಗೆ ಇಬ್ಬರು ನಾಯಕಿಯರಿದ್ದು ಯಶ್ವಿಕಾ ನಿಷ್ಕಲಮತ್ತು ರಜನಿ ಅಭಿನಯಿಸಿದ್ದಾರೆ. ಉಳಿದಂತೆ ಅಲ್ಮಾಸ್​, ಯಶ್​ ಶೆಟ್ಟಿ, ಶರತ್ ಲೋಹಿತಾಶ್ವ, ಅರವಿಂದ್ ರಾವ್, ಅರುಣಾ ಬಾಲರಾಜ್, ಅರಸು ಮಹಾರಾಜ್​ ಪ್ರಶಾಂತ್​ ನಟನ, ನವೀನ್ ಡಿ. ಪಡೀಲ್​ ತಾರಾಗಣದಲ್ಲಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ‘ಕಿಲಕಿಲ‘ ಎಂದು ಸಾಗುವ ಹಂಸಲೇಖ ರಚಿಸಿ, ಸಂಗೀತ ನೀಡಿರುವ ಅನಿರುದ್ಧ ಶಾಸ್ತ್ರಿ ಮತ್ತು ಅಂಕಿತಾ ಕುಂಡು ಧ್ವನಿಯಾಗಿರುವ ಹಾಡನ್ನು ಬಿಡುಗಡೆ ಮಾಡಲಾಗಿದೆ.

ನಿರ್ದೇಶಕ ಪಿ.ವಿ. ಶಂಕರ್​, ನನಗೆ ಸಣ್ಣ ವಯಸ್ಸಿನಿಂದಲೂ ಸಿನಿಮಾ ಹುಚ್ಚು. ನಾನು ನೋಡಿದ ಮೊದಲ ಸಿನಿಮಾ ಪುಟ್ನಂಜ ಅಲ್ಲಿಂದ ನನ್ನ ಹಂಸಲೇಖರ ನಂಟು ಬೆಳೆಯಿತು. ಹೀಗಾಗಿ ನನ್ನ ಮೊದಲ ಸಿನಿಮಾಕ್ಕೆ ಅವರಿಂದಲೇ ಸಂಗೀತ ನಿರ್ದೇಶನ ಮಾಡಿಸಿದ್ದೇನೆ. ಅವರಿಲ್ಲಿ ಐದು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರ ಆಶೀರ್ವಾದ ಸದಾ ನನಗೆ ಬೇಕು‘ ಎಂದು ಮಾಹಿತಿ ನೀಡಿದರು.

ನಾಯಕ ಶ್ರೀಜಿತ್​, ‘ನಾನು ಹೆಸರಿಗೆ ತಕ್ಕಂತೆ ಸತ್ಯವಂತನೂ, ಮಹಾ ಪರಿಸರ ಪ್ರೇಮಿಯೂ ಆದ ಸತ್ಯ ಎಂಬ ಯುವಕನ ಪಾತ್ರದಲ್ಲಿ ನಟಿಸಿದ್ದೇನೆ. ಪರಿಸರ ಮತ್ತು ಅವನು ಪ್ರೀತಿಸುವ ಹುಡುಗಿ ಇಬ್ಬರೂ ಅವನ ಸೋಲ್​ಮೇಟ್ಸ್ ಆಗಿರುತ್ತಾರೆ. ಹಾಗಾಗಿ ಈ ಟೈಟಲ್ ಸಿನಿಮಾಕ್ಕೆ ಸರಿಯಾಗಿ ಹೊಂದುತ್ತದೆ‘ ಎಂದರು. ತುಂಬ ಮೃದು ಮನಸಿನ ಹುಡುಗಿ ಭೂಮಿಯ ಪಾತ್ರ ನನ್ನದು. ಹಂಸಲೇಖ ಸರ್​ ಸಂಗೀತ ನೀಡಿರುವ ಚಿತ್ರದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕ ಖುಷಿಯಿದೆ ಎಂದು ನಾಯಕಿ ಯಶ್ವಿಕಾ ನಿಷ್ಕಲ ಸಂತಸ ವ್ಯಕ್ತಪಡಿಸಿದರು. ಮತ್ತೊಬ್ಬ ನಾಯಕ ಪ್ರಸನ್ನ ಶೆಟ್ಟಿ, ಗೋಪಿ ಎಂಬ ಹಳ್ಳಿ ಹುಡುಗನ ಪಾತ್ರದಲ್ಲಿ ನಟಿಸಿದ್ದಾರೆ.