ಸಿನಿವಾಣಿ

guns and roses film review: ಭೂಗತ ಲೋಕದ ವ್ಯೂಹದೊಳಗೆ ಪ್ರೀತಿಯ ಪಯಣ

ಚಿತ್ರ: ಗನ್ಸ್ ಆ್ಯಂಡ್ ರೋಸಸ್

ನಿರ್ದೇಶನ: ಶ್ರೀನಿವಾಸ್ ಕುಮಾರ್

ನಿರ್ಮಾಣ: ನಟರಾಜ್

ತಾರಾಗಣ: ಅರ್ಜುನ್, ಯಶ್ವಿಕಾ ನಿಷ್ಕಲಾ, ಅವಿನಾಶ್, ಶೋಭರಾಜು, ಕಿಶೋರ್ ಮತ್ತಿತರರು

ಶಿವ ಸ್ಥಾವರಮಠ

ಭೂಗತ ಜಗತ್ತಿನ ವ್ಯೂಹದೊಳಗೆ ಒಮ್ಮೆ ಪ್ರವೇಶಿಸಿದರೆ ಮುಗಿಯಿತು. ಅಲ್ಲಿಂದ ಹೊರಬರುವುದು ಕಷ್ಟ-ಸಾಧ್ಯ. ನಾವು ಬಿಟ್ಟರೂ, ಅದು ನಮ್ಮನ್ನು ಬಿಡುವುದಿಲ್ಲ. ಇದರಿಂದಾಗಿ ಪ್ರೀತಿಸಿದ ಹುಡುಗಿ, ಜೀವನ, ಸಂಬಂಧಗಳು ಒಂದೊಂದಾಗಿ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಇದೇ ಹಿನ್ನೆಲೆಯಲ್ಲಿ ಶ್ರೀನಿವಾಸ್ ಕುಮಾರ್ ನಿರ್ದೇಶನದ ‘ಗನ್ಸ್ ಆ್ಯಂಡ್ ರೋಸಸ್’ ಸಿನಿಮಾದ ಕಥೆ ಸಾಗುತ್ತದೆ. ಈ ರೀತಿಯ ಹಲವು ಕಥೆಗಳು ಈ ಹಿಂದೆ ಬಂದಿವೆ. ಆ ಪಟ್ಟಿಗೆ ಇದೀಗ ಈ ಸಿನಿಮಾ ಸೇರುತ್ತದೆ.

ಆತ ಸೂರ್ಯ (ಅರ್ಜುನ್), ಸಣ್ಣ ತಪ್ಪಿನಿಂದಾಗಿ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿ ಬಂದು ಮತ್ತೆ ಭೂಗತ ಲೋಕದ ನಂಟು ಪಡೆಯುತ್ತಾನೆ. ಮುಂದೆ ಎಲ್ಲ ಡೀಲ್ ಈತನೇ ಮಾಡುವುದರಿಂದ ಅದೇ ಲೋಕದಲ್ಲಿ ಬಹು ಬೇಗ ಬೆಳೆದು ಗ್ಯಾಂಗ್ ಲೀಡರ್ ಆಗುತ್ತಾನೆ. ಈ ನಡುವೆ ಆತನಿಗೆ ರಮ್ಯಾ (ಯಶ್ವಿಕಾ) ಪರಿಚಯವಾಗಿ ಪ್ರೀತಿಯಾಗುತ್ತದೆ. ಆತನ ಹಿನ್ನೆಲೆ ಎಲ್ಲ ತಿಳಿದರೂ ರಮ್ಯಾ, ಸೂರ್ಯನ ಜತೆ ಹೊಸ ಜೀವನ ಕಟ್ಟಿಕೊಳ್ಳಲು ಹವಣಿಸುತ್ತಿರುವಾಗಲೇ ದುರಂತವೊಂದು ನಡೆಯುತ್ತದೆ. ಹಾಗಾದರೆ, ಆ ದುರಂತವೇನು, ಬಂದೂಕಿನ ನಳಿಕೆಯ ಅಬ್ಬರದ ನಡುವೆ ಪ್ರೀತಿ ಹೇಗೆ ಹುಟ್ಟಿತು? ಭೂಗತ ಜಗತ್ತಿನ ಕಥೆ ಏನು? ಎಂದು ತಿಳಿಯಬೇಕಾದರೆ ‘ಗನ್ಸ್ ಆ್ಯಂಡ್ ರೋಸಸ್’ ಸಿನಿಮಾ ನೋಡಿ.

ನಿರ್ದೇಶಕ ಶ್ರೀನಿವಾಸ್ ಭೂಗತ ಜಗತ್ತಿನ ಒಂದು ಎಳೆಯ ಜತೆಗೆ ಡ್ರಗ್ಸ್ ದಂಧೆಯ ಬಗ್ಗೆ ತಿಳಿಸಿದ್ದಾರೆ. ಇನ್ನಷ್ಟು ಅಂದವಾಗಿ ಕಥೆ ಕಟ್ಟಬಹುದಿತ್ತು ಹಾಗೂ ಹೆಚ್ಚು ಡ್ರಾಮಾ ಸೃಷ್ಟಿಸುವ ಅವಕಾಶವಿತ್ತು. ಭೂಗತ ಲೋಕವನ್ನು ಇನ್ನಷ್ಟು ರೋಚಕವಾಗಿ ತೋರಿಸಿದ್ದರೆ ಕಥೆ ಪ್ರೇಕ್ಷಕರಿಗೆ ಮತ್ತಷ್ಟು ಆಪ್ತವಾಗುತ್ತಿತ್ತು. ಚಿತ್ರಕಥೆ ಸಾಧಾರಣ ಎನಿಸಿದರೂ, ಆ್ಯಕ್ಷನ್ ಅಬ್ಬರಗಳು ನೋಡಿಸಿಕೊಂಡು ಹೋಗುತ್ತವೆ. ನಾಯಕ ಅರ್ಜುನ್ ಸಾಹಸ ದೃಶ್ಯಗಳಲ್ಲಿ ಅಬ್ಬರಿಸಿದ್ದು, ನಟನೆಯಲ್ಲಿ ಇನ್ನಷ್ಟು ಮಾಗಬೇಕಿದೆ. ನಟಿ ಯಶ್ವಿಕಾ ಕೊಟ್ಟಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದ್ದಾರೆ. ಶೋಭರಾಜ್, ಕಿಶೋರ್ ಪಾತ್ರಗಳಲ್ಲಿ ಮಿಂಚಿದ್ದಾರೆ. ಜನಾರ್ದನ ಬಾಬು ಛಾಯಾಗ್ರಹಣ ಗಮನಸೆಳೆಯುತ್ತದೆ.