- ಕಳೆದ ಕೆಲ ವರ್ಷಗಳಿಂದೀಚೆಗೆ ಗುಜರಾತಿಗಳು ಎಲ್ಲೆಡೆ ಸದ್ದು ಮಾಡುತ್ತಿದ್ದಾರೆ
- ಕೇವಲ ₹50 ಲಕ್ಷ ಬಜೆಟ್ನಲ್ಲಿ ನಿರ್ಮಾಣವಾದ ಗುಜರಾತಿ ಚಿತ್ರವೊಂದು ಬರೋಬ್ಬರಿ ₹100 ಕೋಟಿ ಗಳಿಕೆ ಮಾಡಿಕೊಳ್ಳುವ ಮೂಲಕ ದಾಖಲೆ ನಿರ್ಮಿಸಿದೆ
- 2019ರ "ಚಾಲ್ ಜೀವ ಲೈಯೇ' (₹52 ಕೋಟಿ) ಅತಿಹೆಚ್ಚು ಕಲೆಕ್ಷನ್ ಮಾಡಿಕೊಂಡ ಗುಜರಾತಿ ಸಿನಿಮಾ ಎನಿಸಿಕೊಂಡಿತ್ತು.
- "ಲಾಲೋ: ಶ್ರೀಕೃಷ್ಣ ಸದಾ ಸಹಾಯತೇ' ಕಥೆ ಬಾಲಿವುಡ್ನ "ಓಹ್ ಮೈ ಗಾಡ್' ಅಥವಾ ಕನ್ನಡದ "ಮುಕುಂದ ಮುರಾರಿ' ಚಿತ್ರದ ಸಾಲಿನಲ್ಲಿ ಸಾಗುತ್ತದೆ.
Laalo ; Krishna Sada Sahayate - ಕಳೆದ ಕೆಲ ವರ್ಷಗಳಿಂದೀಚೆಗೆ ಗುಜರಾತಿಗಳು ಎಲ್ಲೆಡೆ ಸದ್ದು ಮಾಡುತ್ತಿದ್ದಾರೆ. ರಾಜಕಾರಣದಿಂದ ಹಿಡಿದು ಉದ್ಯಮದವರೆಗೆ, ಕ್ರಿಕೆಟ್ನಿಂದ ಹಿಡಿದು ಇದೀಗ ಚಿತ್ರರಂಗದಲ್ಲೂ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಹೌದು, ಕೇವಲ ₹50 ಲಕ್ಷ ಬಜೆಟ್ನಲ್ಲಿ ನಿರ್ಮಾಣವಾದ ಗುಜರಾತಿ ಚಿತ್ರವೊಂದು ಬರೋಬ್ಬರಿ ₹100 ಕೋಟಿ ಗಳಿಕೆ ಮಾಡಿಕೊಳ್ಳುವ ಮೂಲಕ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ನಿರ್ಮಿಸಿದೆ. ಅಂದಹಾಗೆ ಆ ಸಿನಿಮಾ ಹೆಸರು "ಲಾಲೋ, ಕೃಷ್ಣ ಸದಾ ಸಹಾಯತೇ'.
ಅ.10ರಂದು ಬಿಡುಗಡೆಯಾದ ಈ ಡ್ರಾಮಾಗೆ ಅಂಕಿತ್ ಸಾಖಿಯಾ ನಿರ್ದೇಶನವಿದ್ದು, ರೀವಾ ರಚ್ಛ್, ಶ್ರುಹದ್ ಗೋಸ್ವಾಮಿ, ಕರಣ್ ಜೋಶಿ ಮತ್ತು ಬೇಬಿ ಮಿಷ್ಟಿ ಕಡೇಚಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಮೊದಲ ವಾರ ₹33 ಲಕ್ಷ, ಎರಡನೇ ವಾರ ₹27 ಲಕ್ಷ ಮತ್ತು ಮೂರನೇ ವಾರ ₹62 ಲಕ್ಷ ಗಳಿಕೆ ಮಾಡಿಕೊಂಡಿದ್ದ "ಲಾಲೋ' ನಾಲ್ಕನೇ ವಾರ ಭರ್ಜರಿ ಬೌಂಡರಿ ಬಾರಿಸತೊಡಗಿತು. ನಾಲ್ಕು, ಐದು ಮತ್ತು ಆರನೇ ವಾರ ಚಿತ್ರವು ಕ್ರಮವಾಗಿ ₹13 ಕೋಟಿ, ₹26 ಕೋಟಿ ಮತ್ತು ₹25 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿಕೊಂಡಿದೆ. ಈ ಸಿನಿಮಾ ಒಟ್ಟು ಗಳಿಕೆ ₹102 ಕೋಟಿ ದಾಟಿದೆ ಎನ್ನಲಾಗಿದೆ.
ಅದಕ್ಕೂ ಮುನ್ನ 2019ರ "ಚಾಲ್ ಜೀವ ಲೈಯೇ' (₹52 ಕೋಟಿ) ಅತಿಹೆಚ್ಚು ಕಲೆಕ್ಷನ್ ಮಾಡಿಕೊಂಡ ಗುಜರಾತಿ ಸಿನಿಮಾ ಎನಿಸಿಕೊಂಡಿತ್ತು. ಇದೀಗ ಆರು ವರ್ಷಗಳ ಬಳಿಕ ಆ ದಾಖಲೆ ಮುರಿದಿರುವ "ಲಾಲೋ' ಅದಕ್ಕಿಂತ ಎರಡು ಪಟ್ಟು ಗಳಿಕೆ ಮಾಡಿಕೊಂಡು ಗುಜರಾತಿ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.
ಲಾಲೋ ಕಥೆಯೇನು?
ಶ್ರೀಕೃಷ್ಣ ಗುಜರಾತಿಗಳ ಅಚ್ಚುಮೆಚ್ಚಿನ ದೇವರು. "ಲಾಲೋ: ಶ್ರೀಕೃಷ್ಣ ಸದಾ ಸಹಾಯತೇ' ಕಥೆ ಬಾಲಿವುಡ್ನ "ಓಹ್ ಮೈ ಗಾಡ್' ಅಥವಾ ಕನ್ನಡದ "ಮುಕುಂದ ಮುರಾರಿ' ಚಿತ್ರದ ಸಾಲಿನಲ್ಲಿ ಸಾಗುತ್ತದೆ. ದೇವರಿದ್ದಾನೆಯೇ ಎಂಬ ಪ್ರಶ್ನೆಗೆ ಖುದ್ದು ದೇವರೇ ಬಂದು ಉತ್ತರ ನೀಡುವುದೇ ಚಿತ್ರದ ಒನ್ಲೈನ್. ಲಾಲೋ ಎಂಬ ಸಾಮಾನ್ಯ ಆಟೋ ಚಾಲಕನ ಜೀವನದಲ್ಲಿ ನಡೆಯುವ ಟನೆಗಳ ಸುತ್ತ ಕಥೆ ಸಾಗುತ್ತದೆ. ಒಂದು ಕಟ್ಟಡದಲ್ಲಿ ಸಿಕ್ಕೀಬಿಳುವ ಆತ ಎದುರಿಸುವ ಸಂಕಷ್ಟಗಳು, ತನ್ನ ಜೀವನ, ಹೋರಾಟ, ಸರಿ& ತಪ್ಪುಗಳ ಮೆಲುಕು ಹಾಕುತ್ತಾ, ಅಲ್ಲಿಂದ ತಪ್ಪಿಸಿಕೊಳ್ಳಲು ಹೇಗೆ ಯತ್ನಿಸುತ್ತಾನೆ ಎಂಬುದೇ "ಲಾಲೋ'.