ಬೆಂಗಳೂರು: ಕರ್ನಾಟಕ ಕಂಡ ಶ್ರೇಷ್ಠ ದಾರ್ಶನಿಕ, ಆಧ್ಯಾತ್ಮಕ ಚಿಂತಕ ಮತ್ತು ವಚನಕಾರರಾದ ಬಸವಣ್ಣನವರು ಕನ್ನಡ ಚಿತ್ರರಂಗಕ್ಕೆ ದೊಡ್ಡ ಮಟ್ಟದ ಸ್ಪೂರ್ತಿಯಾಗಿದ್ದಾರೆ. ಹಲವು ಚಿತ್ರಗಳಲ್ಲಿ ಅವರ ವಚನಗಳನ್ನು ಬಳಸಿಕೊಳ್ಳುವುದರ ಜತೆಗೆ, ಹಲವು ಚಿತ್ರಗಳಲ್ಲಿ ಕನ್ನಡ ನಾಡು ಮತ್ತು ನುಡಿಗೆ ಅವರ ಸಾಧನೆ ಕುರಿತು ಪ್ರಸ್ತಾಪವಿದೆ.
ಪ್ರಮುಖವಾಗಿ ಕನ್ನಡ ಚಿತ್ರರಂಗದಲ್ಲಿ ಬಸವಣ್ಣನವರ ಕುರಿತು ಮೂರು ಬಾರಿ ಚಿತ್ರಗಳಾಗಿವೆ. ಈ ಪೈಕಿ ಮೊದಲ ಚಿತ್ರವೆಂದರೆ ಅದು 1959ರಲ್ಲಿ ಬಿಡುಗಡೆಯಾದ ‘ಜಗಜ್ಯೋತಿ ಬಸವೇಶ್ವರ’. ಟಿ.ವಿ. ಸಿಂಗ್ ಠಾಕೂರ್ ನಿರ್ದೇಶನದ ಈ ಚಿತ್ರದಲ್ಲಿ ಹೊನ್ನಪ್ಪ ಭಾಗವತರ್ ಅವರು ಬಸವೇಶ್ವರರಾಗಿ ಕಾಣಿಸಿಕೊಂಡರೆ, ಬಿಜ್ಜಳನಾಗಿ ಡಾ. ರಾಜಕುಮಾರ್ ನಟಿಸಿದ್ದರು. ಬಿಜ್ಜಳನ ಮಂತ್ರಿಯಾಗಿ ಬಸವೇಶ್ವರರು ಏನೆಲ್ಲಾ ಸಮಾಜ ಸುಧಾರಕ ಕೆಲಸಗಳನ್ನು ಮಾಡುತ್ತಾರೆ ಎಂದು ಸಾರುವ ಈ ಚಿತ್ರದ ಕಥೆಯನ್ನು ಮಾ.ನಂ. ನಂಜಪ್ಪ ಬರೆದಿದ್ದರು. ಇನ್ನು ಜಿ.ವಿ. ಅಯ್ಯರ್ ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ರಚಿಸಿದ್ದರು. ಕನ್ನಡ ಚಿತ್ರರಂಗದ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದ ಈ ಚಿತ್ರದಲ್ಲಿ ಬಸವಣ್ಣನವರ ಹಲವು ವಚನಗಳನ್ನು ಬಳಸಿಕೊಳ್ಳಲಾಗಿತ್ತು.
ಇದಾಗಿ ಹಲವು ವರ್ಷಗಳ ನಂತರ, ಅಂದರೆ 1983ರಲ್ಲಿ ‘ಕ್ರಾಂತಿಯೋಗಿ ಬಸವಣ್ಣ’ ಎಂಬ ಇನ್ನೊಂದು ಚಿತ್ರ ನಿರ್ವಣವಾಯಿತು. ಕೆ.ಎಸ್.ಎಲ್ ಸ್ವಾಮಿ ನಿರ್ದೇಶನದ ಈ ಚಿತ್ರಕ್ಕೆ ಮಾತೆ ಮಹಾದೇವಿ ಅವರು ಕಥೆ, ಚಿತ್ರಕಥೆ, ಸಂಭಾಷಣೆಯ ಜತೆಗೆ ಸಾಹಿತ್ಯವನ್ನೂ ರಚಿಸಿದ್ದರು. ಈ ಬಾರಿ ಹಿರಿಯ ನಟ ಅಶೋಕ್ ಬಸವಣ್ಣನ ಪಾತ್ರ ಮಾಡಿದರೆ, ಬಿಜ್ಜಳನಾಗಿ ಶ್ರೀನಿವಾಸಮೂರ್ತಿ ಅಭಿನಯಿಸಿದ್ದರು. ಕೆಲವು ವರ್ಷಗಳ ಹಿಂದೆ ಬಂದ ‘ಕಾರಣಿಕ ಶಿಶು’ ಎಂಬ ಚಿತ್ರ, ಬಸವಣ್ಣನವರ ಬಾಲ್ಯದ ಕುರಿತಾಗಿತ್ತು. ಸಾಮಾನ್ಯ ಹುಡುಗನ ಬಾಲ್ಯದಲ್ಲಾಗುವ ಘಟನೆ, ಹೇಗೆ ಆತನನ್ನು ಬದಲಾಯಿಸುತ್ತದೆ, ಮುಂದೊಂದು ದಿನ ಮಹಾನ್ ದಾರ್ಶನಿಕನಾಗುವತ್ತ ದಾರಿ ಮಾಡಿಕೊಡುತ್ತದೆ ಎಂಬ ಕಥೆ ಇರುವ ಈ ಚಿತ್ರದಲ್ಲಿ ಬಾಲ ಬಸವನಾಗಿ ಅನಿಲ್ ಕುಮಾರ್ ನಟಿಸಿದರೆ, ಲಕ್ಷ್ಮಣ್ ನಿರ್ದೇಶನವಿತ್ತು.
ಇದು ಬಸವಣ್ಣನವರ ಕುರಿತಾಗಿ ಬಂದ ಚಿತ್ರಗಳಾದರೆ, ಅವರ ಸಮಕಾಲೀನರು, ಒಡನಾಡಿಗಳು ಮತ್ತು ಅನುಯಾಯಿಗಳ ಕುರಿತಾಗಿಯೂ ಕನ್ನಡ ಚಿತ್ರರಂಗದಲ್ಲಿ ಕೆಲವು ಚಿತ್ರಗಳು ಬಿಡುಗಡೆಯಾಗಿದ್ದು, ಅಲ್ಲೂ ಬಸವಣ್ಣನವರ ಪಾತ್ರ ಪ್ರಮುಖವಾಗಿವೆ. ಈ ಪೈಕಿ ಪ್ರಮುಖವಾದ ಚಿತ್ರ ಎಂದರೆ, ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ಟಿ.ಎಸ್. ನಾಗಾಭರಣರ ‘ಅಲ್ಲಮ’. ಹೆಸರೇ ಹೇಳುವಂತೆ, ಇದು ಅಲ್ಲಮ ಪ್ರಭು ಅವರ ಜೀವನವನ್ನಾಧರಿಸಿದ ಚಿತ್ರ. ಈ ಚಿತ್ರದಲ್ಲಿ ಅಲ್ಲಮರ ಒಡನಾಡಿಯಾಗಿದ್ದ ಬಸವಣ್ಣರ ಪಾತ್ರ ಪ್ರಮುಖವಾಗಿದ್ದು, ಆ ಪಾತ್ರವನ್ನು ನಟ ಸಂಚಾರಿ ವಿಜಯ್ ನಿರ್ವಹಿಸಿದ್ದಾರೆ.
ಬಸವಣ್ಣನವರ ಅನುಯಾಯಿಯಾಗಿದ್ದ ಹರಳಯ್ಯರ ಕುರಿತಾಗಿ ‘ಮಹಾಶರಣ ಹರಳಯ್ಯ’ ಎಂಬ ಚಿತ್ರ ಕೆಲವು ವರ್ಷಗಳ ಹಿಂದೆ ಬಿಡುಗಡೆಯಾಗಿತ್ತು. ಬಸವಣ್ಣರಿಗಾಗಿ ತಮ್ಮ ಚರ್ಮದಿಂದ ಚಪ್ಪಲಿ ತಯಾರಿಸುವ ಹರಳಯ್ಯನ ಪಾತ್ರದಲ್ಲಿ ಶ್ರೀಧರ್ ನಟಿಸಿದರೆ, ಬಸವಣ್ಣನಾಗಿ ರಮೇಶ್ ಅರವಿಂದ್ ಅಭಿನಯಿಸಿದ್ದರು. ಅದೇ ರೀತಿ, ಸಾಯಿಕುಮಾರ್ ಅಭಿನಯದ ‘ಮಡಿವಾಳ ಮಾಚಿದೇವ’ ಚಿತ್ರದಲ್ಲಿ ಬಸವಣ್ಣನವರ ಪಾತ್ರವಿದ್ದು, ಹಿರಿಯ ನಟ ವಿಜಯಕಾಶಿ ಈ ಪಾತ್ರ ಮಾಡಿದ್ದರು. ಇನ್ನು ಹಿರಿಯ ನಟ ರಾಮಕೃಷ್ಣ ಅವರು ಎರಡು ಚಿತ್ರಗಳಲ್ಲಿ ಬಸವಣ್ಣನ ಪಾತ್ರ ಮಾಡಿದ್ದಾರೆ. ‘ಶಿವಯೋಗಿ ಅಕ್ಕ ಮಹಾದೇವಿ’ ಮತ್ತು ಅನು ಪ್ರಭಾಕರ್ ಅಭಿನಯದ ‘ಶ್ರೀ ದಾನಮ್ಮ ದೇವಿ’ ಚಿತ್ರಗಳಲ್ಲಿ ರಾಮಕೃಷ್ಣ ಅವರು ಜಗದ್ಗುರುವಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.