ಸಿನಿವಾಣಿ

ವನದುರ್ಗದಲ್ಲಿ ಗೌತಮಿ ದಸರಾ : ಮಂಗಳೂರಿನಲ್ಲಿ ಹಬ್ಬ ಆಚರಣೆ ಮಾಡಲಿದ್ದಾರೆ ‘ಮಂಗಳಾಪುರಂ’ ನಟಿ

ಬೆಂಗಳೂರು: ‘ಹತ್ತು ವರ್ಷಗಳ ಹಿಂದೆ ಒಮ್ಮೆ ವನದುರ್ಗೆ ದೇವಸ್ಥಾನಕ್ಕೆ ಹೋಗಿದ್ದಾಗ ಅಂದು ನನಗೆ ಪಾಸಿಟಿವ್ ಅನುಭವ ನೀಡಿತು. ಅಂದಿನಿಂದ ಇಂದಿನವರೆಗೆ ತಿಂಗಳಲ್ಲಿ ಒಂದು ದಿನವಾದರೂ ಕ್ಷೇತ್ರಕ್ಕೆ ಹೋಗಿ ಬರುತ್ತೇನೆ. ಪ್ರತಿ ದಿನ ದೇವಿ ನನ್ನ ಜತೆ ಇದ್ದಾಳೆ ಎಂಬ ಎಂದೆನಿಸುತ್ತದೆ. ಹಾಗೆಯೇ ನನ್ನ ಪ್ರತಿ ಬೆಳವಣಿಯೂ ದೇವಿಯ ಆಶೀರ್ವಾದದಿಂದಲೇ ಅನಿಸುತ್ತದೆ. ಅದಕ್ಕೆ ಈ ಬಾರಿ ದಸರಾ ಹಬ್ಬವನ್ನು ವನದುರ್ಗೆಯಲ್ಲಿ ಆಚರಿಸಲು ಹೊರಟಿದ್ದೇನೆ’- ಇದು ನಟಿ, ‘ಬಿಗ್‌ಬಾಸ್ ಕನ್ನಡ 11ರ’ ಸ್ಪರ್ಧಿ ಗೌತಮಿ ಜಾಧವ್ ‘ವನದುರ್ಗೆ ಕ್ಷೇತ್ರದ ಜತೆಗಿನ ನಂಟಿನ ಬಗ್ಗೆ ಹಂಚಿಕೊಂಡರು.

ನಟಿ ಗೌತಮಿ ಜಾಧವ್ ಕಿರುತೆರೆ ‘ಸತ್ಯ’ ಧಾರಾವಾಹಿ ಮೂಲಕ ಜನಪ್ರಿಯರಾಗಿ, ಬಳಿಕ ‘ಬಿಗ್‌ಬಾಸ್’ಗೂ ಹೋಗಿ ಬಂದಿದ್ದರು. ಇದೀಗ ಕನ್ನಡದ ‘ಮಂಗಳಾಪುರಂ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ, ಈ ಬಾರಿ ದಸರಾ ನಟಿ ಬದುಕಿನಲ್ಲಿ ಖುಷಿ ತಂದಿದ್ದು, ವನದುರ್ಗಾದಲ್ಲಿ ಹಬ್ಬ ಆಚರಿಸಲು ಮುಂದಾಗಿದ್ದಾರೆ. ‘ವನದುರ್ಗೆ ದೇವಸ್ಥಾನದಲ್ಲಿ ಹಬ್ಬ ಆಚರಿಸಲಿದ್ದೇನೆ. ಅದಕ್ಕಾಗಿ ಒಂದು ವಾರಗಳ ಕಾಲ ಅಲ್ಲೇ ವಾಸ್ತವ್ಯ ಹೂಡಲಿದ್ದೇವೆ. ಹಬ್ಬದ ದಿನ ಪೂಜೆ ಇರುತ್ತದೆ. ಅದರಲ್ಲಿ ಭಾಗಿಯಾಗಿ, ಬಳಿಕ ದೇವಿಯ ದರ್ಶನ ಪಡೆಯುತ್ತೇನೆ. ಅಲ್ಲಿ ಹುಲಿ ಕುಣಿತ ತುಂಬಾ ವಿಶೇಷ. ಅದನ್ನು ನೋಡಲೆಂದೇ ದೂರದಿಂದ ಜನ ಬರುತ್ತಾರೆ. ತಾಯಿ ವನದುರ್ಗೆ ದೇವಿಯ ಇನ್ನೊಂದು ರೂಪ. ಆಕೆಯನ್ನು ಪೂಜಿಸುವುದು ನನಗೆ ತುಂಬಾ ನೆಮ್ಮದಿ ನೀಡುತ್ತದೆ. ಮೈಸೂರು ದಸರಾವನ್ನು ನೇರವಾಗಿ ನೋಡುವ ಅವಕಾಶ ಇನ್ನು ಒದಗಿಬಂದಿಲ್ಲ. ಅಂಬಾರಿ ಮೆರವಣಿಗೆ ವೈಭವವನ್ನು ಜೀವನದಲ್ಲಿ ಒಂದು ಸಾರಿಯಾದರೂ ಕಣ್ತುಂಬಿಕೊಳ್ಳಬೇಕು ಎಂಬ ಆಸೆಯಿದೆ’ ಎನ್ನುತ್ತಾರೆ ಗೌತಮಿ.

ದೇವಿ ಆರಾಧನೆಯಿಂದ ಧೈರ್ಯ

‘ನವರಾತ್ರಿ ವೇಳೆ ಒಂಬತ್ತು ದಿನಾನೂ ದೇವಿಯನ್ನು ಒಂಬತ್ತು ಅವತಾರದಲ್ಲಿ ಪೂಜಿಸುತ್ತೇವೆ. ಪ್ರತಿ ರೂಪವು ಪ್ರತಿ ಹೆಣ್ಣಿನ ಭಾವನೆಯಾಗಿದೆ. ಅದಕ್ಕಾಗಿಯೇ ಆಕೆ ದೇವಿಯನ್ನು ವಿವಿಧ ರೂಪದಲ್ಲಿ ಪೂಜಿಸುತ್ತಾಳೆ. ಜೀವನದಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ದಿಟ್ಟವಾಗಿ ನಾವು ಎದುರಿಸಬೇಕಿದೆ. ಈ ಧೈರ್ಯ ದೇವಿ ಆರಾಧನೆಯಿಂದ ಬರುತ್ತದೆ ಎಂದು ಭಾವಿಸುವೆ. ಇನ್ನು ಈ ಬಾರಿ ಖಾಸಗಿ ವಾಹಿನಿಯಲ್ಲಿ ದಸರಾ ಹಬ್ಬಕ್ಕಾಗಿಯೇ ದೇವಿ ಅವತಾರದಲ್ಲಿ ಕಾಣಿಸಿಕೊಂಡಿದ್ದೇನೆ. ಅದು ಖುಷಿ ನೀಡಿತು’ ಎಂದು ಗೌತಮಿ ಸಂತಸ ಹಂಚಿಕೊಳ್ಳುತ್ತಾರೆ.