ಸಿನಿವಾಣಿ

ಕೊರಗಜ್ಜನ ಸಂಗೀತ ಸಾಮ್ರಾಜ್ಯ; ಸುಧೀರ್​ ಅತ್ತಾವರ್​ ಚಿತ್ರಕ್ಕೆ ಗೋಪಿ ಸುಂದರ್​ ಸಂಗೀತ ಸಂಯೋಜನೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

"ವಿಜಯಾನಂದ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಹೆಸರಾಂತ ಸಂಗೀತ ನಿರ್ದೇಶಕ ಗೋಪಿ ಸುಂದರ್​, ಆ ಬಳಿಕ "ವಿಷ್ಣುಪ್ರಿಯ' ಸಿನಿಮಾಗೂ ಸಂಗೀತ ನೀಡಿದ್ದರು. ಇದೀಗ ಕನ್ನಡದ "ಕೊರಗಜ್ಜ' ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಹ್ಯಾಟ್ರಿಕ್​ ಬಾರಿಸಿದ್ದಾರೆ.

ಸುಧೀರ್​ ಅತ್ತಾವರ್​ ನಿರ್ದೇಶನದ, ತ್ರಿವಿಕ್ರಮ ಸಪಲ್ಯ ನಿರ್ಮಾಣದ "ಕೊರಗಜ್ಜ' ಚಿತ್ರದ ಬಗ್ಗೆ ಗೋಪಿ ಸುಂದರ್​, "ಇದು ಸಾಮಾನ್ಯ ತಂದೆ, ಮಗಳ ಕಥೆಯಲ್ಲ. ನಿರ್ದೇಶಕರು ತುಂಬ ರೀಸರ್ಚ್​ ಮಾಡಿರುವ ಸಿನಿಮಾ. ಹೊಸ ಸಂಪ್ರದಾಯ, ವಿಶೇಷ ನಂಬಿಕೆಗಳ ಆಧಾರದ ಮೇಲೆ ನಿಂತಿರುವ ಚಿತ್ರ. ಹೀಗಾಗಿ ಆ ವಿಷಯಗಳನ್ನು ಅಧ್ಯಯನ ಮಾಡಿ ಸಂಗೀತ ಸಂಯೋಜಿಸಲು ನನಗೂ ಹೆಚ್ಚು ಸಮಯ ಬೇಕಾಗಿತ್ತು. "ಕೊರಗಜ್ಜ' ನನಗೆ ಹೊಸ ರೀತಿಯ ಜಾನರ್​ ಆವಿಷ್ಕಾರ ಮಾಡಲು ಸಹಾಯ ಮಾಡಿದೆ. ಸಾಮಾನ್ಯ ಮಾದರಿಯನ್ನು ಮೀರಿ ಯಾರೂ ಊಹಿಸದ ರೀತಿಯ ಬಗೆ ಬಗೆಯ ಸೂಕ್ಷ್ಮ ಪದರಗಳನ್ನು ಹೊಂದಿರುವ ಚಿತ್ರ. ಈ ಸಿನಿಮಾಗೆ ಸಂಗೀತ ನೀಡುವುದು ಅತ್ಯಂತ ಸವಾಲಿನ ಕೆಲಸ ಮತ್ತು ಸೌಭಾಗ್ಯ' ಎಂದು ಅನುಭವ ಹಂಚಿಕೊಂಡರು.

ನಿರ್ದೇಶಕ ಸುಧೀರ್​, "ಗೋಪಿ ಸುಂದರ್​ ಅವರು ಸಂಗೀತ ನೀಡಿದ್ದ "ಪುಲಿ ಮುರುಗನ್​' ಆಸ್ಕರ್​ನಲ್ಲಿ ಸ್ಪರ್ಧಿಸಿ, ಕೊನೆಯ ಹಂತದಲ್ಲಿ ಸೋತಿತ್ತು. ಆದರೆ, ನಮ್ಮ ಚಿತ್ರಕ್ಕೆ ಅದಕ್ಕಿಂತಲೂ ಉತ್ಕ್ರಷ್ಟ ಮಟ್ಟದ ಸಂಗೀತ ನೀಡಿದ್ದಾರೆ' ಎಂದರು. ಚಿತ್ರದಲ್ಲಿ ಆರು ಹಾಡುಗಳಿದ್ದು ಶ್ರೇಯಾ ಘೋಷಾಲ್​, ಶಂಕರ್​ ಮಹದೇವನ್​, ಸುನಿಧಿ ಚೌಹಾನ್​, ಜಾವೆದ್​ ಅಲಿ, ಅರ್ಮಾನ್​ ಮಲ್ಲಿಕ್​, ಸ್ರೂಪ್​ ಖಾನ್​ ಹಾಡಿದ್ದಾರೆ. ಹೀಗಾಗಿ "ಕೊರಗಜ್ಜ' ಆಡಿಯೋ ಹಕ್ಕುಗಳಿಗೂ ಭರ್ಜರಿ ಬೇಡಿಕೆಯಿದೆ ಎಂಬುದು ಚಿತ್ರತಂಡದ ಸಂತಸ ಹೆಚ್ಚಿಸಿದೆ.