ಸಿನಿವಾಣಿ

'ಆಸ್ಕರ್ ರೇಸ್‌ಗೆ Gondhal ತಪ್ಪು ಆಯ್ಕೆ' ಎಂದ ಅನುರಾಗ್ ಕಶ್ಯಪ್; 'ಪ್ಲೀಸ್ ಮೊದ್ಲು ಸಿನಿಮಾ ನೋಡಿ' ಎಂದ ನಿರ್ದೇಶಕ

  • ಆಸ್ಕರ್​ ಪ್ರಶಸ್ತಿಗೆ ಗೋಂಧಳ್​ ಭಾರತದ ಅಧಿಕೃತ ಸ್ಪರ್ಧಿಯಾಗಿ​ ನಾಮನಿರ್ದೇಶನ.

  • ಗೋಂಧಳ್​ ಸಿನಿಮಾ ಆಯ್ಕೆ ತಪ್ಪು ಎಂದ ನಿರ್ದೇಶಕ ಅನುರಾಗ್​ ಕಶ್ಯಪ್.

  • ಮೊದಲು ಸಿನಿಮಾ ನೋಡಿ ನಂತರ ವಿಮರ್ಶೆ ಮಾಡಿ ಎಂದ ಗೋಂಧಳ್ ನಿರ್ದೇಶಕ.

Gondhal Director REACTS on Anurag Kashyap Statement: ಮರಾಠಿಯ ಗೋಂಧಳ್​ ಸಿನಿಮಾವು 2027ರ ಆಸ್ಕರ್ ಪ್ರಶಸ್ತಿಗೆ ಭಾರತದ ಅಧಿಕೃತ ಸ್ಪರ್ಧಿಯಾಗಿ​ ನಾಮನಿರ್ದೇಶನಗೊಂಡಿದೆ. 99ನೇ ಅಕಾಡೆಮಿ ಪ್ರಶಸ್ತಿಯ ಅತ್ಯುತ್ತಮ ಅಂತರಾಷ್ಟ್ರೀಯ ಚಲನಚಿತ್ರ ವಿಭಾಗಕ್ಕೆ ಆಯ್ಕೆಯಾದ ಏಕೈಕ ಸೈಕಾಲಾಜಿಕಲ್​ ಥ್ರಿಲ್ಲರ್​ ಸಿನಿಮಾ ಇದಾಗಿದೆ. ಬೆಳ್ಳಿ ತೆರೆ ಮೇಲೆ ಅಷ್ಟಾಗಿ ಮಿಂಚದ ಈ ಸಿನಿಮಾ ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದೆ.

ಸಂತೋಷ್​ ದಾವಖರ್​ ನಿರ್ದೇಶನದ ಈ ಸಿನಿಮಾವು ಆಸ್ಕರ್​ ಪ್ರಶಸ್ತಿಗೆ ಆಯ್ಕೆಯಾಗುತ್ತಲೇ ಸಾಕಷ್ಟು ಕುತೂಹಲ ಸಿನಿ ಪ್ರೇಕ್ಷಕರಲ್ಲಿ ಮೂಡಿದೆ. ಆದರೆ, ಆ ಬೆನ್ನಲ್ಲೇ ಈ ಬಗ್ಗೆ ಬ್ಲ್ಯಾಕ್ ಫ್ರೈಡೇ, ನೋ ಸ್ಮೋಕಿಂಗ್, ಗುಲಾಲ್, ದಟ್ ಗರ್ಲ್ ಇನ್ ಯೆಲ್ಲೋ ಬೂಟ್ಸ್ ಎನ್ನುವ ಹಿಟ್ ಸಿನಿಮಾವನ್ನು ಬಾಲಿವುಡ್​ಗೆ ಕೊಟ್ಟ ಅನುರಾಗ್​ ಕಶ್ಯಪ್​ ಅವರು ಸಿನಿಮಾ ಆಯ್ಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.

ಅನುರಾಗ್​ ಕಶ್ಯಪ್​ ಹೇಳಿದ್ದಿಷ್ಟು

ತಪ್ಪಾದ ಸಿನಿಮಾ ಆಯ್ಕೆಗಳಿಂದಾಗಿ, ಭಾರತಕ್ಕೆ ಪ್ರತಿ ವರ್ಷವು ಆಸ್ಕರ್​ ಪ್ರಶಸ್ತಿ ಸಿಗುವುದು ಕೈ ತಪ್ಪುತ್ತಿದೆ. ಲಂಚ್​ ಬಾಕ್ಸ್, ಆಲ್​ವಿ ಇಮ್ಯಾಜಿನ್​ ಆಸ್​ ಲೈಟ್ ನಂತಹ ಸಿನಿಮಾ ಇದ್ದರೂ ಸಹ ಭಾರತೀಯ ಚಲನಚಿತ್ರ ಒಕ್ಕೂಟ ತಪ್ಪು ಆಯ್ಕೆ ಮಾಡಿ, ಪಶಸ್ತಿ ದಕ್ಕುವುದನ್ನು ತಪ್ಪಿಸಿದೆ ಎಂದು ಅಸಮಾಧಾನ ಹೊರಹಾಕಿದ್ದರು. ಅವರ ಈ ಹೇಳಿಕೆಗೆ ಸಿನಿಮಾ ತಂಡ ಉತ್ತರಿಸಿದ್ದು, ಮೊದ್ಲು ಸಿನಿಮಾ ನೋಡಿ ಎಂದು ಖಡಕ್​ ಆಗಿ ಹೇಳಿದೆ.

ಸಂತೋಷ್​ ದಾವಖರ್​ ಹೇಳಿದ್ದೇನು?

'ನಾನು ಅನುರಾಗ್​ ಕಶ್ಯಪ್​ ಸರ್​ ಅವರ ನಿರ್ದೇಶನಕ್ಕೆ ನಾನು ಗೌರವ ಕೊಡುತ್ತೇನೆ. ಏಪ್ರಿಲ್ 26 ರಂದು ರಾತ್ರಿ 11:55ಕ್ಕೆ ನಾನು ಬೆಂಗಳೂರು-ಮುಂಬೈ ವಿಮಾನದಲ್ಲಿ ಪ್ರಯಾಣಿಸುವಾಗ ಸಿನಿಮಾ ಬಗ್ಗೆ ಅವರೊಂದಿಗೆ ಮಾತನಾಡಿದ್ದೆ. ಅವರು ಗೋಂಧಳ್ ಸಿನಿಮಾ ನೋಡಿಲ್ಲ ಎಂದರು. ಆದರೆ, ಖಂಡಿತ ನೋಡ್ತೇನೆ ಎಂದು ಸ್ಪಷ್ಟನೆ ಕೊಟ್ಟರು. ಅಂದಿನಿಂದ ಅವರು ನನಗೆ ಸಾರ್ವಜನಿಕವಾಗಿ ಎಲ್ಲಿಯೂ ಸಿಕ್ಕಿಲ್ಲ'.

'ಎಲ್ಲರಿಗೂ ನಾನು ಮಾಡಿಕೊಳ್ಳುವ ವಿನಂತಿ ಏನೇಂದ್ರೆ ಮೊದಲು ಸಿನಿಮಾ ನೋಡಿ. ನಂತರ ನಿಮ್ಮ ತೀರ್ಪು ಕೊಡಿ. ಈಗಷ್ಟೇ ಸಿನಿಮಾ ಲೋಕಕ್ಕೆ ಕಾಲಿಟ್ಟ ನಿರ್ದೇಶಕನಿಂದ ಮಾಡಲ್ಪಟ್ಟ ಮರಾಠಿ ಸಿನಿಮಾ ಗೋಂಧಳ್. ಇದೊಂದು ಸೈಕಾಲಾಜಿಕಲ್ ಥ್ರಿಲ್ಲರ್ ಸಿನಿಮಾವಾಗೊದೆ. ಇದನ್ನು ಒಟಿಟಿಗಾಗಿ ಅಲ್ಲ, ಥಿಯೇಟರ್‌ಗಾಗಿ ಸಿದ್ಧಪಡಿಸಲಾಗಿದೆ. ಭಾರತವನ್ನು ಪ್ರತಿನಿಧಿಸುವ ಜವಾಬ್ದಾರಿ ನಮಗಿದೆ ಎಂಬುದು ನಮಗೆ ತಿಳಿದಿದೆ. ಮುಂದೆ ಸಿನಿಮಾ ಮತ್ತೆ ರಿಲೀಸ್​ ಆದಾಗ ಥಿಯೇಟರ್​ನಲ್ಲಿ ನೋಡಿ..ಧನ್ಯವಾದ' ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ, (ಏಜೆನ್ಸೀಸ್).