‘ಈ ವರ್ಷವೂ ಹುಟ್ಟುಹಬ್ಬದ ಸಂಭ್ರಮಾಚರಣೆ ಇರುವುದಿಲ್ಲ ...’ ಎಂದು ಗಣೇಶ್ ಐದು ದಿನಗಳ ಹಿಂದೆಯೇ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಸಂದೇಶ ಮುಟ್ಟಿಸಿದ್ದರು. ಅದರಂತೆ ಅವರು ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಹಾಗೆಯೇ ಮನೆಯಲ್ಲೂ ಇರುವುದಿಲ್ಲ. ಪ್ರವಾಸಕ್ಕೆ ಹೊರಟಿದ್ದಾರೆ. ‘ಮತ್ತೆ ಕರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಸುದ್ದಿಗಳು ಬರುತ್ತಿವೆ. ಅಭಿಮಾನಿಗಳಿಗೆ ನನ್ನಿಂದ ಸಮಸ್ಯೆ ಆಗುವುದು ಇಷ್ಟವಿಲ್ಲ. ಹಾಗಾಗಿ, ಇದ್ದಲ್ಲೇ ಒಳ್ಳೆಯ ಕೆಲಸ ಮಾಡಿ, ನಾಲ್ಕು ಜನರಿಗೆ ಸಹಾಯ ಮಾಡಿ ಎಂದು ಹೇಳಿದ್ದೇನೆ’ ಎನ್ನುತ್ತಾರೆ ಗಣೇಶ್.
ಇನ್ನು, ಅವರ ‘ಗಾಳಿಪಟ 2’ ಚಿತ್ರವು ಬಿಡಗುಡೆಗೆ ಸಜ್ಜಾಗುತ್ತಿದೆ. ಆಗಸ್ಟ್ 12ರಂದು ರಾಜ್ಯಾದ್ಯಂತ ಬಿಡುಗಡೆ ಯಾಗುತ್ತಿದೆ. ಈ ಕುರಿತು ಮಾತನಾಡುವ ಅವರು, ‘ಇದು ‘ಗಾಳಿಪಟ’ದ ಮುಂದುವರೆದ ಭಾಗವಲ್ಲ. ಆ ಚಿತ್ರದ ಕೆಲವು ಪಾತ್ರಗಳು ಇಲ್ಲೂ ಮುಂದುವರೆಯುತ್ತವೆ. ನಾನು, ದಿಗಂತ್, ರಘು ಸಾರ್ ಇಲ್ಲೂ ಇರುತ್ತೇವೆ. ರಾಜೇಶ್ ಬದಲು ಪವನ್ ಬಂದಿದ್ದಾರೆ. ಚಿತ್ರದ ಬಹಳಷ್ಟು ಭಾಗದ ಚಿತ್ರೀಕರಣ ಕುದುರೆಮುಖದಲ್ಲಾಗಿದೆ. ಇನ್ನು, ಪ್ರಮುಖ ದೃಶ್ಯಗಳನ್ನು ಕಜಕಿಸ್ತಾನದಲ್ಲೂ ಶೂಟ್ ಮಾಡಿದ್ದೇವೆ’ ಎನ್ನುತ್ತಾರೆ. ಕುದುರೆಮುಖದಲ್ಲಿ ಚಿತ್ರೀಕರಣ ಮಾಡಿದ್ದೇ ಒಂದು ಅವಿಸ್ಮರಣೀಯ ಅನುಭವ ಎನ್ನುತ್ತಾರೆ ಗಣೇಶ್.
‘ಲೊಕೇಶನ್ಗೆ ಹೋಗುತ್ತಿದ್ದಂತೆಯೇ ಮೈ ಜುಂ ಎಂದಿತು. ‘ಹೃದಯಗೀತೆ’ಯ ವಿಷ್ಣುವರ್ಧನ್ ನೆನಪಿಗೆ ಬಂದರು. ‘ಪ್ರೇಮಲೋಕ’, ‘ಏಳು ಸುತ್ತಿನ ಕೋಟೆ’ ... ಹೀಗೆ 80ರ ದಶಕದ ಕ್ಲಾಸಿಕ್ ಚಿತ್ರಗಳ ಚಿತ್ರೀಕರಣ ಮಾಡಿದ ಸ್ಥಳದಲ್ಲಿ ನಮ್ಮ ಚಿತ್ರದ ಚಿತ್ರೀಕರಣ ಮಾಡಿದ್ದೇವೆ. ಕನ್ನಡ ಚಿತ್ರಗಳ ಮತ್ತು ದೊಡ್ಡ ನಟರ ಅಭಿಮಾನಿಯಾಗಿ ಪುಳಕವಾಯ್ತು.’ ಎಂದು ಖುಷಿ ವ್ಯಕ್ತಪಡಿಸುತ್ತಾರೆ ಗಣೇಶ್. ಆಗಸ್ಟ್ನಲ್ಲಿ ‘ಗಾಳಿಪಟ 2’ ಬಿಡುಗಡೆಯಾದ ಮೇಲೆ, ‘ಬಾನದಾರಿಯಲ್ಲಿ’ ಚಿತ್ರೀಕರಣಕ್ಕಾಗಿ ಆಫ್ರಿಕಾಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಮಧ್ಯೆ, ಸುವರ್ಣ ವಾಹಿನಿಗಾಗಿ ಒಂದು ಕಾರ್ಯಕ್ರಮವನ್ನೂ ನಡೆಸಿಕೊಡಲಿದ್ದಾರೆ.
ಯೋಗರಾಜ್ ಭಟ್, ಗಣೇಶ್, ಜಯಂತ್ ಕಾಯ್ಕಿಣಿ, ಸೋನು ನಿಗಮ್ ಜತೆಯಾದ ಹಾಡುಗಳು ಸಾಕಷ್ಟು ಜನಪ್ರಿಯವಾಗಿವೆ. ಈಗ ‘ಗಾಳಿಪಟ 2’ ಚಿತ್ರಕ್ಕಾಗಿ ಈ ನಾಲ್ವರು ‘ನಾನಾಡದಾ ಮಾತೆಲ್ಲವಾ ಕದ್ದಾಲಿಸು ...’ ಎಂಬ ಹಾಡಿಗೆ ಜತೆಯಾಗಿದ್ದು, ಈ ಹಾಡು ಇಂದು ಗಣೇಶ್ ಹುಟ್ಟುಹಬ್ಬದ ಉಡುಗೊರೆಯಾಗಿ ಬಿಡುಗಡೆಯಾಗುತ್ತಿದೆ. ಈ ಹಾಡಿನ ಕುರಿತು ಮಾತನಾಡುವ ಗಣೇಶ್, ‘ಇದು ‘ಮಿಂಚಾಗಿ ನೀನು ಬರಲು ...’ ಹಾಡಿಗೆ ಬದಲಿ ಅಲ್ಲ. ಆದರೆ, ಅದೇ ತರಹದ ಅದ್ಭುತವಾದ ಮೆಲೋಡಿ ಹಾಡು. ಇಸ್ತ್ರಿ ಪೆಟ್ಟಿಗೆ, ಕೊಡ ಸೇರಿದಂತೆ ಕೆಲವು ಪ್ರಾಪರ್ಟಿಗಳನ್ನು ಬಳಸಿಕೊಂಡು ಈ ಹಾಡನ್ನು ಪರಿಸರದ ಮಧ್ಯೆ ಚಿತ್ರೀಕರಣ ಮಾಡಲಾಗಿದೆ. ಕಾಯ್ಕಿಣಿ ಮತ್ತು ಭಟ್ಟರ ಒಳಗೆ ಒಬ್ಬ ಪ್ರೇಮಿ ಇದ್ದಾನೆ. ಅವನಲ್ಲೊಂದು ಪೋಲಿತನವಿದೆ. ಅವರಾಸೆ ತೀರಿಸಿಕೊಳ್ಳೋಕೆ ನನ್ನನ್ನು ಬಳಸಿಕೊಳ್ಳುತ್ತಾರೆ. ಅವರ ಖುಷಿಯನ್ನು ನನ್ನ ಮೂಲಕ ವ್ಯಕ್ತಪಡಿಸುತ್ತಾರೆ’ ಎಂದು ತಮಾಷೆಯಾಗಿ ಹೇಳಿದರು.