ಫೆಬ್ರವರಿ 26ರಿಂದ 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದ್ದು, ಅದರ ತಯಾರಿಗಳು ಹೇಗಿವೆ ಮತ್ತು ಈ ಬಾರಿಯ ಚಿತ್ರೋತ್ಸವದ ವಿಶೇಷತೆಗಳೇನು ಎಂಬುದರ ಬಗ್ಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಸಿನಿವಾಣಿ ಜತೆ ಮಾತನಾಡಿದ್ದಾರೆ.
ಬೆಂಗಳೂರು: ಈ ಬಾರಿಯ ಚಿತ್ರೋತ್ಸವಕ್ಕಾಗಿ ನಾನು ಹಗಲೂ ರಾತ್ರಿ ಕೆಲಸ ಮಾಡುತ್ತಿದ್ದೇನೆೆ. ನಾನು ಅಧಿಕಾರ ಸ್ವೀಕಾರ ಮಾಡಿದ ದಿನದಿಂದ ಚಿತ್ರೋತ್ಸವ ಆರಂಭಕ್ಕೆ ಕೇವಲ 48 ದಿನ ಮಾತ್ರ ಬಾಕಿ ಇತ್ತು. ಒಂದು ರೀತಿಯಲ್ಲಿ ಚಾಲೆಂಜ್ ಆಗಿದ್ದರೂ, ಎಲ್ಲರ ಸಹಕಾರದಿಂದ ಕೆಲಸವನ್ನು ಆರಂಭಿಸಿದ್ದೇನೆ ಜತೆಗೆ ಈ ಬಾರಿ ಗೋ ಗ್ರೀನ್ ಚಿತ್ರೋತ್ಸವ ಮಾಡುತ್ತಿದ್ದೇನೆ ಎಂದು ಮಾತಿಗಿಳಿದರು ಸುನೀಲ್ ಪುರಾಣಿಕ್.
ಮುಖ್ಯಮಂತ್ರಿಗಳ ಸಹಕಾರ: ಅಧ್ಯಕ್ಷನಾಗಿ ಬಂದಾಗ ಚಿತ್ರೋತ್ಸವ ಎಲ್ಲಿ ಮಾಡಬೇಕು, ಜ್ಯೂರಿಗಳ್ಯಾರು, ವಿದೇಶದಿಂದ ಬರುವವರಿಗೆ ವಿಸಾ ಸೇರಿದಂತೆ ಸಾಕಷ್ಟು ಕೆಲಸಗಳಿತ್ತು. ಎಲ್ಲದಕ್ಕೂ ನನಗೆ ಅಧಿಕಾರಿ ವರ್ಗ ಮತ್ತು ಬೇರೆ ಬೇರೆಯವರು ಸಹಾಯ ಮಾಡಿದರು. ಎಲ್ಲದಕ್ಕಿಂತ ಮುಖ್ಯಮಂತ್ರಿಗಳು ಫ್ರೀ ಹ್ಯಾಂಡ್ ಕೊಟ್ಟು ಕೆಲಸ ಮಾಡಿ ಎಂದರು ಹಾಗಾಗಿ ಕೆಲಸಗಳು ಸಾಂಗವಾಗಿ ನಡೆದವು.
ವಿವಿಧ ದೇಶಗಳ ಚಿತ್ರಗಳು: ಈ ಬಾರಿಯ ಚಿತ್ರೋತ್ಸವಕ್ಕೆ 50 ದೇಶಗಳ, 200 ಚಿತ್ರಗಳು ಬರುತ್ತಿವೆ. ಎಲ್ಲವೂ ಅದ್ಭುತ ಸಿನಿಮಾಗಳೇ, ಆಸ್ಕರ್ ವಿಜೇತ ಚಿತ್ರಗಳು ಸಹ ಇದರಲ್ಲಿದೆ. ಕನ್ನಡದ 35 ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಈ ಬಾರಿ ‘ಇಂಡಿಯನ್ ಟ್ರೆಡಿಷನಲ್ ಮ್ಯೂಸಿಕ್ ಆಂಡ್ ಫಿಲಂಸ್’ ಎಂಬ ಥೀಮ್ ಇಟ್ಟುಕೊಂಡಿದ್ದೇವೆ. ಹಾಗಾಗಿ ‘ತಾನ್ಸೇನ್’, ‘ಹಂಸಗೀತೆ’, ‘ಮಲಯಮಾರುತ’ದಂತಹ ಚಿತ್ರಗಳನ್ನು ಪ್ರದರ್ಶನ ಮಾಡುತ್ತಿದ್ದೇವೆ. ನಮ್ಮ ಸಂಸ್ಕೃತಿ ಮತ್ತು ನಮ್ಮ ಪರಂಪರೆಯನ್ನು ಬಿಟ್ಟು ಹೋಗಬಾರದು ಎಂಬುದು ನಮ್ಮ ಉದ್ದೇಶವಾಗಿದೆ. ಇನ್ನು ಅನಂತ್ನಾಗ್ ಅವರ ಚಿತ್ರಜೀವನದ ಮುಖ್ಯ ಚಿತ್ರಗಳನ್ನು ಪ್ರದರ್ಶನ ಮಾಡಿ ಅವರಿಗೆ ಗೌರವ ಸಲ್ಲಿಸಲಿದ್ದೇವೆ.
ಈ ಬಾರಿ ಗೋ ಗ್ರೀನ್: ಚಿತ್ರೋತ್ಸವದಲ್ಲಿ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧ ಮಾಡಿದ್ದೇವೆ. ಜತೆಗೆ ಡೆಲಿಗೇಟ್ ಪಾಸ್ಗಳನ್ನು ರಟ್ಟಿನಲ್ಲಿ ಮಾಡುತ್ತಿದ್ದೇವೆ. ಪರಿಸರ ರಕ್ಷಣೆ ದೃಷ್ಟಿಯಿಂದ ಇದನ್ನು ಜಾರಿಗೆ ತರಲಾಗಿದೆ.
ಸಿನಿಮಾಗಳ ಆಯ್ಕೆ ಮಾನದಂಡ: ಕನ್ನಡ ಚಿತ್ರಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಕರ್ನಾಟಕ ವಾಣಿಜ್ಯ ಮಂಡಳಿಗೆ ನೀಡಿದ್ದೆವು ಅವರು 8 ಚಿತ್ರಗಳನ್ನು ನೀಡಿದರು. ನಾನು ಬಿಡುಗಡೆಯಾದ ಚಿತ್ರಗಳ ಸಂಖ್ಯೆ ಜಾಸ್ತಿ ಎಂಬ ಕಾರಣಕ್ಕೆ 2 ಚಿತ್ರಗಳನ್ನು ಮತ್ತೆ ಸೇರಿಸಲು ಅವಕಾಶ ಕೊಟ್ಟಿದ್ದೇನೆ. ಹಾಗಾಗಿ ಚಿತ್ರೋತ್ಸವಕ್ಕೆ ಬಂದಿರುವ ಕನ್ನಡ ಚಿತ್ರಗಳನ್ನು ಆಯ್ಕೆ ಮಾಡಿರುವುದು ವಾಣಿಜ್ಯ ಮಂಡಳಿಯೇ ಹೊರತು ನಾವಲ್ಲ. ಎನ್ನುತ್ತಾರೆ ಪುರಾಣಿಕ್.
ಜ್ಯೂರಿಗಳು: ಜ್ಯೂರಿಗಳು ಯಾರ್ಯಾರು ಎಂಬುದನ್ನು ಸದ್ಯದಲ್ಲೇ ಸುದ್ದಿಗೋಷ್ಠಿ ಕರೆದು ಹೇಳುತ್ತೇನೆ. ಆದರೆ ಈ ಬಾರಿ ಮೂರು ಜನರನ್ನು ಬೇರೆ ಬೇರೆ ರಾಜ್ಯಗಳಿಂದ ಕರೆತಂದಿದ್ದೇವೆ. ಅವರೆಲ್ಲರೂ ಅಂತಾರಾಷ್ಟ್ರೀಯ ಮಟ್ಟದ ಚಿತ್ರೋತ್ಸವದಲ್ಲಿ ಜ್ಯೂರಿಗಳಾಗಿ ಕೆಲಸ ಮಾಡಿದವರು. ಜ್ಯೂರಿಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಿದ್ದೇವೆ.
ಉದ್ಘಾಟನೆಗೆ ಯಾರಿಗೂ ಹಣ ನೀಡಿಲ್ಲ: ಕೆಲ ಚಿತ್ರೋತ್ಸವಗಳಲ್ಲಿ ಉದ್ಘಾಟನೆಗೆಂದು ಅತಿಥಿಗಳನ್ನು ಕರೆಸುವುದಕ್ಕಾಗಿಯೇ ಒಂದಷ್ಟು ಹಣ ಪೋಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿತ್ತು ‘ಇಲ್ಲಿ ನಾನು ಧೈರ್ಯವಾಗಿ ಹೇಳುತ್ತೇನೆ. ಒಬ್ಬೇ ಒಬ್ಬ ಗೆಸ್ಟ್ಗೂ ಒಂದು ರೂಪಾಯಿ ನೀಡಿಲ್ಲ. ಸರ್ಕಾರಕ್ಕೆ ಎಷ್ಟು ಹಣ ಉಳಿಸಬಹುದೋ ಅಷ್ಟನ್ನು ಉಳಿಸಿದ್ದೇನೆ. ಅತಿಥಿಗಳು ಯಾರ್ಯಾರು ಎಂಬುದು ಸಹ ಸದ್ಯದಲ್ಲೇ ತಿಳಿಸುತ್ತೇನೆ’ಎಂದರು.
ನಾಲ್ಕು ಜಾಗದಲ್ಲಿ ಪ್ರದರ್ಶನ: ಚಿತ್ರೋತ್ಸವ ಹೆಚ್ಚಿನ ಜನರಿಗೆ ರೀಚ್ ಆಗಲಿ ಎಂಬ ಉದ್ದೇಶದಿಂದ ನಾಲ್ಕು ಕಡೆಗಳಲ್ಲಿ ಸಿನಿಮಾಗಳನ್ನು ಪ್ರದರ್ಶನ ಮಾಡುತ್ತಿದ್ದೇವೆ. ಇದರಿಂದ ಓರಾಯನ್ ಮಾಲ್ನಲ್ಲಿ ಆಗುತ್ತಿದ್ದ ಕ್ರೌಡ್ ಸಹ ಈ ಬಾರಿ ತಪು್ಪತ್ತದೆ. ನವರಂಗ್ನಲ್ಲಿ 800 ಸೀಟ್ ಇವೆ, ಓರಾಯನ್ನಲ್ಲಿ ಎರಡು ಸ್ಕ್ರೀನ್ಗಳಲ್ಲಿ ನೋಡುವಷ್ಟು ಜನ ಇಲ್ಲಿ ಒಂದೇ ಬಾರಿಗೆ ನೋಡುತ್ತಾರೆ. ದಕ್ಷಿಣ ಭಾಗದ ಸಿನಿಮಾ ಪ್ರೇಮಿಗಳು ಸುಚಿತ್ರ, ಚಾಮರಾಜಪೇಟೆಯ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿಯೇ ನೋಡಲಿ ಎಂದು ಅಲ್ಲಿಯೂ ಪ್ರದರ್ಶನ ಮಾಡುತ್ತಿದ್ದೇವೆ ಎಂಬುದು ಸುನೀಲ್ ಅವರ ಉತ್ತರವಾಗಿದೆ.
ಫಿಲಂ ಬಜಾರ್ಗೆ ಅವಕಾಶ: ಜಗತ್ತಿನಾದ್ಯಂತ ಕನ್ನಡ ಸಿನಿಮಾಗಳಿಗೆ ಮಾರುಕಟ್ಟೆ ಸೃಷ್ಟಿ ಮಾಡಬೇಕು ಎಂಬ ಉದ್ದೇಶದಿಂದ ಈ ಬಾರಿ ‘ಡೈರೆಕ್ಟರ್ಸ್ ಫಿಲಂ ಬಜಾರ್’ನ್ನು ಆರಂಭಿಸಿದ್ದೇವೆ. ಇದು ಭಾರತೀಯ ಚಿತ್ರರಂಗದ ಮಟ್ಟಿಗೆ ಮೊದಲ ಪ್ರಯತ್ನ ಎಂದು ಸಂತಸ ವ್ಯಕ್ತಪಡಿಸುತ್ತಾರವರು.
ವ್ಯಕ್ತಿ ಆಧಾರಿತ ಚಿತ್ರಗಳಿಗಿಂತಲೂ ಕಂಟೆಂಟ್ಗೆ ಬೆಲೆ
ಈ ಬಾರಿ ಚಿತ್ರೋತ್ಸವಕ್ಕೆ ಆ ಚಿತ್ರ ಆಯ್ಕೆಯಾಗಿಲ್ಲ, ಇದು ಆಗಿಲ್ಲ ಎನ್ನುವವರು ಚಿತ್ರೋತ್ಸವಕ್ಕೆ ಬಂದು ಒಮ್ಮೆ ಸಿನಿಮಾಗಳನ್ನು ನೋಡಲಿ, ಆಮೇಲೆ ಮಾತಾಡಲಿ. ಕಂಟೆಂಟ್ , ಮೇಕಿಂಗ್, ಪ್ರತಿಭೆ ಅಷ್ಟೇ ಮಾನದಂಡ. ವ್ಯಕ್ತಿ ಆಧಾರಿತ ಚಿತ್ರಗಳನ್ನು ನಾವು ಆಯ್ಕೆ ಮಾಡಿಲ್ಲ. ಸಮಾಜದಲ್ಲಿ ಯಾರೊಬ್ಬರಿಗೂ ಅವಮಾನ ಆಗುವಂತಹ ಸಿನಿಮಾಗಳನ್ನು ನಾವು ಪ್ರದರ್ಶನ ಮಾಡುವುದಿಲ್ಲ. ಸಿನಿಮಾಗಳನ್ನು ಆಯ್ಕೆ ಮಾಡಿರುವ ಜ್ಯೂರಿಗಳಿಗೆ ಗೌರವ, ಅವರ ಆಯ್ಕೆ ಸರಿ ಇಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುಖಾ ಸುಮ್ಮನೆ ಬರೆಯಬಾರದು ಎಂದು ಹೇಳುತ್ತಾರವರು.
ಆನ್ಲೈನ್ ನೋಂದಣಿ
ಈಗ ಎಲ್ಲವೂ ಡಿಜಿಟಲ್ವುಯ, ಎಲ್ಲರ ಹತ್ತಿರ ಸ್ಮಾರ್ಟ್ಫೋನ್ ಇದೆ. ಹಾಗಾಗಿ ಚಿತ್ರೋತ್ಸವವನ್ನು ಡಿಜಿಟಲೈಸ್ ಮಾಡುವ ಉದ್ದೇಶದಿಂದ ನಾವು ಆನ್ಲೈನ್ ರಿಜಿಸ್ಟ್ರೇಶನ್ ಮಾಡಿದ್ದೇವೆ. ಇದಕ್ಕೆ ಕೊಂಚ ವಿರೋಧ ವ್ಯಕ್ತವಾಗಿದೆ. ಅದ್ಯಾಕೆ ಎಂಬುದು ನನಗೆ ಇನ್ನೂ ಗೊತ್ತಾಗಿಲ್ಲ. ಬೇರೆ ಬೇರೆ ಚಿತ್ರೋತ್ಸವಗಳಲ್ಲಿ ಸೀಟಿಂಗ್ ಅರೇಂಜ್ವೆುಂಟ್ಸ್ ಕೂಡ ಆನ್ಲೈನ್ ಮೂಲಕವೇ ಆಗುತ್ತದೆ. ಚಿತ್ರಪ್ರೇಮಿಗಳು ನಮ್ಮ ಕಚೇರಿಯವರೆಗೂ ಬಂದು ಪಾಸ್ ಪಡೆಯುವ ಬದಲಿಗೆ ಆನ್ಲೈನ್ನಲ್ಲಿಯೇ ರಿಜಿಸ್ಟರ್ ಮಾಡಿಕೊಳ್ಳಬಹುದು. ಹೀಗೆ ಮಾಡಿದಾಗ ಎಲ್ಲದಕ್ಕೂ ದಾಖಲೆ ಇರುತ್ತದೆ. ಆನ್ಲೈನ್ನಲ್ಲಿ ರಿಜಿಸ್ಟರ್ ಮಾಡಲು ಸಾಧ್ಯವಾಗದವರಿಗಾಗಿ ನಂದಿನಿ ಬಡವಾಣೆಯಲ್ಲಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ ಫೆ 21ರವರೆಗೆ ನೊಂದಣಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ನೊಂದಣಿ ಮಾಡಿಸಿಕೊಂಡ ಪ್ರತಿನಿಧಿಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸುಚಿತ್ರ, ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಫೆ. 22 ರಿಂದ25ರವರೆಗೆ, ಚಲನಚಿತ್ರ ಅಕಾಡೆಮಿಯಲ್ಲಿ 26ರವರೆಗೆ ತಮ್ಮ ಕಾರ್ಡ್ಗಳನ್ನು ಪಡೆಯಬಹುದು. 27ರಿಂದ ಓರಾಯನ್ ಮಾಲ್ನಲ್ಲಿಯೂ ಪಡೆಯಬಹುದು.
ಈ ಬಾರಿಯ ಬೆಂಗಳೂರು ಚಲನಚಿತ್ರೋತ್ಸವ ಪಾರದರ್ಶಕವಾಗಿ ಮತ್ತು ಪ್ರಾಮಾಣಿಕವಾಗಿ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಅಪಸ್ವರ ಎತ್ತಿರುವವರೆಲ್ಲರೂ ಚಿತ್ರೋತ್ಸವಕ್ಕೆ ಬಂದು ಚಿತ್ರೋತ್ಸವವನ್ನು ನೋಡಿ ಆಮೇಲೆ ಮಾತನಾಡಬಹುದು. | ಸುನೀಲ್ ಪುರಾಣಿಕ್ ಚಲನಚಿತ್ರ ಅಕಾಡೆಮಿ ಅಧ್ಯಕ್ಷ
ಹರಿ