ಸಿನಿವಾಣಿ

ಪ್ಲೀಸ್​ ಸಹಾಯ ಮಾಡಿ ಪಠಾಣ್​ ಸಿನಿಮಾ ಟಿಕೆಟ್​ ಸಿಗದಿದ್ರೆ ಸಾಯ್ತಿನಿ: ಶಾರೂಖ್ ಅಭಿಮಾನಿಯ ಹುಚ್ಚಾಟ, ನೆಟ್ಟಿಗರ ತರಾಟೆ

ಮುಂಬೈ: ಸಿನಿಮಾ ನಟರನ್ನು ಪ್ರಾಣಕ್ಕಿಂತ ಹೆಚ್ಚು ಆರಾಧಿಸುವ ಅಭಿಮಾನಿಗಳಿರುವುದನ್ನು ನೋಡಿದ್ದೇವೆ. ಸಿನಿಮಾ ಬಿಡುಗಡೆಯ ಸಂಭ್ರಮದ ವೇಳೆ ಏನಾದರೂ ಒಂದು ಎಡವಟ್ಟು ಮಾಡಿಕೊಂಡು ಪ್ರಾಣ ಕಳೆದುಕೊಂಡವರನ್ನು ನೋಡಿದ್ದೇವೆ. ನೆಚ್ಚಿನ ನಟನಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿರುವ ಹುಚ್ಚು ಅಭಿಮಾನಿಗಳು ನಮ್ಮ ನಡುವೆ ಇದ್ದಾರೆ. ಇದೀಗ ಶಾರೂಖ್​ ಖಾನ್​ ಅಭಿಮಾನಿಯ ವಿಡಿಯೋವೊಂದು ವೈರಲ್​ ಆಗಿದ್ದು, ನಾವು ಮೇಲೆ ಹೇಳಿದ ಮಾತಿಗೆ ವಿಡಿಯೋ ಪೂರಕವಾಗಿದೆ.

ಸುಮಾರು 5 ವರ್ಷಗಳ ಗ್ಯಾಪ್​ ನಂತರ ಶಾರೂಖ್​ ಖಾನ್​ ಪಠಾಣ್​ ಸಿನಿಮಾ ಮೂಲಕ ಮತ್ತೆ ಕಂಬ್ಯಾಕ್​ ಮಾಡುತ್ತಿದ್ದಾರೆ. ಪಠಾಣ್​ ಸಿನಿಮಾ ಆ್ಯಕ್ಸನ್​ ಎಂಟರ್ಟೈನ್​ಮೆಂಟ್​ ಸಿನಿಮಾ ಆಗಿದ್ದು, ದೀಪಿಕಾ ಪಡುಕೋಣೆ ನಾಯಕಿಯಾಗಿದ್ದಾರೆ. ನಟ ಜಾನ್​ ಅಬ್ರಾಹಂ ವಿಲನ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿದ್ಧಾರ್ಥ್​ ಆನಂದ್​ ಅವರು ನಿರ್ದೇಶನ ಮಾಡಿದ್ದು ಜನವರಿ 25ಕ್ಕೆ ವಿಶ್ವದಾಧ್ಯಂತ ಚಿತ್ರ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಬಹಳ ವರ್ಷದ ಬಳಿಕ ಶಾರೂಖ್​ ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ ಅದ್ಧೂರಿಯಾಗಿ ಸಿನಿಮಾ ಬಿಡುಗಡೆಗೆ ಅಭಿಮಾನಿ ಪ್ಲಾನ್​ ಮಾಡಿದ್ದಾರೆ.

ಈಗಾಗಲೇ ಪಠಾಣ್​ ಸಿನಿಮಾ ಪ್ರೀ ಬುಕ್ಕಿಂಗ್​ ಓಪನ್​ ಆಗಿದ್ದು, ಎಲ್ಲೆಡೆ ಸೋಲ್ಡೌಟ್​ ಆಗಿದೆ. ಶಾರೂಖ್​ ಅಭಿಮಾನಿ ರಿಯಾನ್​ ಎಂಬಾತ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು, ಅದು ವೈರಲ್​ ಆಗಿದೆ. ನಾನು ಶಾರೂಖ್​ ಅವರ ದೊಡ್ಡ ಅಭಿಮಾನಿ. ಐ ಲವ್​ ಶಾರೂಕ್. ನಾನು ಜ.25ಕ್ಕೆ ಪಠಾಣ್​ ಸಿನಿಮಾ ನೋಡಲೇಬೇಕು. ಮತ್ತು ಶಾರೂಖ್​ ಅವರನ್ನು ಭೇಟಿ ಮಾಡಬೇಕು. ಆದರೆ, ಸಿನಿಮಾ ಟಿಕೆಟ್​ ಬುಕ್​ ಮಾಡಲು ನನ್ನ ಬಳಿ ಹಣವಿಲ್ಲ. ದಯವಿಟ್ಟು ಯಾರಾದರೂ ನನಗೆ ಸಹಾಯ ಮಾಡಿ. ಪಠಾಣ್​ ಸಿನಿಮಾದ ಟಿಕೆಟ್​ ಕೊಡಿಸಿ ಎಂದು ರಿಯಾನ್​ ಮನವಿ ಮಾಡಿದ್ದಾರೆ.

ಮುಂದುವರಿದು ಮಾತನಾಡಿರುವ ರಿಯಾನ್​, ಪ್ಲೀಸ್​ ನನ್ನ ಯಾರಾದರೂ ನನ್ನನ್ನು ಬೆಂಬಲಿಸಿ, ಇಲ್ಲವಾದಲ್ಲಿ ನಾನು ಕೆರೆಗೆ ಹಾರಿ ಪ್ರಾಣ ಕಳೆದುಕೊಳ್ಳುತ್ತೇನೆ. ಸಿನಿಮಾ ಟಿಕೆಟ್​ ಸಿಗದಿದ್ದರೆ ಸಾಯುತ್ತೇನೆ ಎಂದು ರಿಯಾನ್​ ಹೇಳಿದ್ದಾರೆ. ವಿಡಿಯೋ ವೈರಲ್​ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂತಹ ಕ್ರೇಜಿ ವಿಡಿಯೋಗಳನ್ನು ಪೋಸ್ಟ್​ ಮಾಡಬೇಡ ಎಂದು ನೆಟ್ಟಿಗರೊಬ್ಬರು ತಾಕೀತು ಮಾಡಿದ್ದರೆ. ಸಿನಿಮಾ ಟಿಕೆಟ್​ ತೆಗೆದುಕೊಳ್ಳಲು ಇವರ ಬಳಿ ಹಣವಿಲ್ಲ ಆದರೆ, ಸ್ಮಾರ್ಟ್​ಫೋನ್​ ನಿರ್ವಹಿಸಲು ಇವರ ಬಳಿ ಹಣವಿದೆ ಎಂದು ಮತ್ತೊಬ್ಬ ನೆಟ್ಟಿಗ ವ್ಯಂಗ್ಯವಾಡಿದ್ದಾರೆ. ಇನ್ನು ಕೆಲವು ಆ ರೀತಿಯ ನಿರ್ಧಾರ ಮಾಡಬೇಡ ಎಂದಿದ್ದಾರೆ. (ಏಜೆನ್ಸೀಸ್​)