ಸಿನಿವಾಣಿ

ಜಂಟಲ್​ಮನ್​ಗೆ ದರ್ಶನ್ ಸಾಥ್; ಇಂದು ಬಿಡುಗಡೆ ಪೂರ್ವ ಕಾರ್ಯಕ್ರಮ

malli

ಬೆಂಗಳೂರು:  ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್​ಮನ್​​ ಚಿತ್ರಕ್ಕೆ ಈಗ ಆನೆಬಲ ಬಂದಂತಾಗಿದೆ. ಕಾರಣ, ಗಜ ಎಂದೇ ಹೆಸರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.

ಅದರಲ್ಲೂ ಈ ಚಿತ್ರ ಫೆ. 7ಕ್ಕೆ ತೆರೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಸೋಮವಾರ (ಫೆ.3) ಬೆಂಗಳೂರಿನಲ್ಲಿ ಬಿಡುಗಡೆಪೂರ್ವ ಸಮಾರಂಭ ಹಮ್ಮಿಕೊಂಡಿದ್ದು, ಇದಕ್ಕೆ ದರ್ಶನ್ ಅತಿಥಿಯಾಗಿ ಆಗಮಿಸಿ ಶುಭ ಕೋರಲಿದ್ದಾರೆ. ‘ಜಿ ಸಿನಿಮಾಸ್’ ಬ್ಯಾನರ್​ನಲ್ಲಿ ಗುರು ದೇಶಪಾಂಡೆ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ನಿರ್ದೇಶಕ ಜಡೇಶ್ ಕುಮಾರ್ ಹಂಪಿ ಆಕ್ಷನ್-ಕಟ್ ಹೇಳಿದ್ದು, ನಾಯಕ-ನಾಯಕಿ ಆಗಿ ಪ್ರಜ್ವಲ್ ದೇವರಾಜ್-ನಿಶ್ವಿಕಾ ನಾಯ್ಡು ಅಭಿನಯಿಸಿದ್ದಾರೆ.

‘ಅಭಿಮಾನಿ ಬಳಗ, ಸ್ನೇಹಿತರು, ಹೊಸ ಕಲಾವಿದರು, ನಿಮಾಪಕರು ಹಾಗೂ ನಿರ್ದೇಶಕರಿಗೆ ದರ್ಶನ್ ಯಾವಾಗಲೂ ತಮ್ಮ ಬೆಂಬಲ ಹಾಗೂ ಸಹಕಾರ ನೀಡುತ್ತಾರೆ. ಅದೇ ರೀತಿ ನಮ್ಮ ಚಿತ್ರವನ್ನೂ ಅವರು ಬೆಂಬಲಿಸುತ್ತಿದ್ದು ಪ್ರಿ-ರಿಲೀಸ್ ಇವೆಂಟ್​ಗೆ ಆಗಮಿಸಲಿದ್ದಾರೆ. ಚಿತ್ರದ ಮುಹೂರ್ತಕ್ಕೂ ಅವರು ಬಂದು ಹಾರೈಸಿದ್ದರು’ ಎಂದು ತಿಳಿಸಿದ್ದಾರೆ ನಿರ್ಮಾಪಕ ಗುರು ದೇಶಪಾಂಡೆ.

‘ಹೈಪರ್ ಸಾಮ್ನಿಯಾ ಎಂಬ ನಿದ್ರೆಗೆ ಸಂಬಂಧಿತ ಕಾಯಿಲೆ ಬಗ್ಗೆ ಮನರಂಜನೆ ಮೂಲಕ ಅರಿವು ಮೂಡಿಸುವ ಪ್ರಯತ್ನವನ್ನು ಈ ಚಿತ್ರದ ಮೂಲಕ ಮಾಡಲಾಗುತ್ತಿದೆ. ಪ್ರಿ-ರಿಲೀಸ್ ಇವೆಂಟ್​ನಲ್ಲಿ ದರ್ಶನ್, ಪ್ರಜ್ವಲ್ ದೇವರಾಜ್ ಕುಟುಂಬ, ಇಡೀ ಚಿತ್ರತಂಡ, ಚಿತ್ರರಂಗದ ಗಣ್ಯರು ಉಪಸ್ಥಿತರಿರುತ್ತಾರೆ’ ಎಂದಿದ್ದಾರೆ ಗುರು.