ಸಿನಿವಾಣಿ

ಹಿರಿತೆರೆಗೆ ಬಂದ ಗೀತಾ; ಡಿಯರ್ ಕಣ್ಮಣಿಗೆ ಎಂಟ್ರಿ ಕೊಟ್ಟ ಭವ್ಯಾ

Webdesk - Ravikanth

ಬೆಂಗಳೂರು: ‘ಬಿಗ್ ಬಾಸ್’ ಖ್ಯಾತಿಯ ಕಿಶನ್ ಮತ್ತು ಸಾತ್ವಿಕಾ (ಶ್ರಾವ್ಯಾ) ಅಭಿನಯದ ‘ಲವ್ ಯೂ ಕಣ್ಮಣಿ’ ಚಿತ್ರದ ಮುಹೂರ್ತ ಕಳೆದ ತಿಂಗಳಷ್ಟೇ ನಡೆದಿತ್ತು. ಸುದೀಪ್ ಬಂದು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ, ಚಿತ್ರತಂಡದವರಿಗೆ ಶುಭ ಹಾರೈಸಿ ಹೋಗಿದ್ದರು. ಈಗ ಆ ಚಿತ್ರತಂಡಕ್ಕೆ ಭವ್ಯಾ ಗೌಡ ಎಂಟ್ರಿಯಾಗಿದೆ.

ಯಾರು ಈ ಭವ್ಯಾ ಎಂಬ ಪ್ರಶ್ನೆ ಬೇಡ. ಭವ್ಯಾ ಕಿರುತರೆಯಲ್ಲಿ ಜನಪ್ರಿಯ ಮುಖ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಗೀತಾ’ ಧಾರಾವಾಹಿಯಲ್ಲಿ ಗೀತಾ ಪಾತ್ರ ಮಾಡುತ್ತಿರುವ ಈ ಭವ್ಯಾ, ಈಗ ಈ ಚಿತ್ರದ ಮೂಲಕ ಮೊದಲ ಬಾರಿಗೆ ಹಿರಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.

ಒಬ್ಬ ನಾಯಕ, ಇಬ್ಬರು ನಾಯಕಿಯರು ಎಂದರೆ ಇದೊಂದು ತ್ರಿಕೋನ ಪ್ರೇಮಕಥೆ ಎಂಭ ಭಾವನೆ ಬರಬಹುದು. ಆದರೆ, ಇದು ತ್ರಿಕೋನ ಪ್ರೇಮಕಥೆಯಲ್ಲ ಎನ್ನುತ್ತಾರೆ ಚಿತ್ರದ ನಿರ್ವಪಕಿ ಕಂ ನಿರ್ದೇಶಕಿ ವಿಸ್ಮಯಾ ಗೌಡ. ‘ಇದು ತ್ರಿಕೋನ ಪ್ರೇಮಕಥೆಯಲ್ಲ. ಈ ಚಿತ್ರದಲ್ಲಿ ಇಬ್ಬರು ನಾಯಕರು, ಇಬ್ಬರು ನಾಯಕಿಯರಿದ್ದಾರೆ. ಕಥೆ ವಿಭಿನ್ನವಾಗಿದ್ದು, ನಾಲ್ವರ ಪಾತ್ರಗಳಿಗೂ ಸಮಾನ ಆಧ್ಯತೆ ನೀಡಲಾಗಿದೆ’ ಎನ್ನುತ್ತಾರೆ.

ಇದಕ್ಕೂ ಮೊದಲೇ ಭವ್ಯಾಗೆ ಸಿನಿಮಾದಲ್ಲಿ ನಟಿಸುವ ಅವಕಾಶಗಳು ಸಿಕ್ಕದ್ದವಂತೆ. ಆದರೆ, ಇಷ್ಟವಾಗುವ ಪಾತ್ರ ಸಿಕ್ಕಿಲ್ಲ ಎಂಬ ಕಾರಣಕ್ಕೆ ಅವರೇ ದೂರವಿದ್ದರಂತೆ. ‘ಇಲ್ಲಿ ಗಟ್ಟಿಯಾದ ಪಾತ್ರವಿದೆ. ನನ್ನ ಪಾತ್ರದ ಬಗ್ಗೆ ಕೇಳಿ ಎರಡು ದಿನಗಳ ಕಾಲ ಅದರ ಗುಂಗಿನಿಂದ ಹೊರಬರುವುದಕ್ಕೆ ಸಾಧ್ಯವಾಗಲಿಲ್ಲ. ಜತೆಗೆ, ‘ಗೀತಾ’ ಧಾರಾವಾಹಿಯಲ್ಲಿ ನಟಿಸುವುದಕ್ಕೆ ಯಾವುದೇ ತೊಂದರೆಯಾಗದಂತೆ ಡೇಟ್ ಹೊಂದಿಸುವುದಾಗಿ ಹೇಳಿದ್ದು ಇನ್ನೂ ಖುಷಿಯಾಯಿತು. ಹಾಗಾಗಿ ಈ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿದ್ದೇನೆ’ ಎನ್ನುತ್ತಾರೆ ಭವ್ಯಾ. ಅಂದಹಾಗೆ, ಅವರು ತಮ್ಮ ನಿಜಜೀವನಕ್ಕಿಂತಲೂ ಎಂಟು ವರ್ಷ ದೊಡ್ಡವಳ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಅಷ್ಟೇ ಅಲ್ಲ, ‘ಗೀತಾ’ ಧಾರವಾಹಿಯಲ್ಲಿ ಸಾಂಪ್ರದಾಯಿಕ ಹುಡುಗಿಯಾಗಿ ಕಾಣಿಸಿಕೊಂಡಿದ್ದ ಭವ್ಯಾ, ಇಲ್ಲಿ ಮಾಡರ್ನ್ ಯುವತಿಯ ಪಾತ್ರದಲ್ಲಿ ನಟಿಸುತ್ತಿರು ವುದಾಗಿ ಹೇಳಿ ಕೊಳ್ಳುತ್ತಾರೆ.