ಹೈದರಾಬಾದ್: ಈಗಾಗಲೇ ಸಾಕಷ್ಟು ನಟಿಯರು ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುವ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕರು, ನಟರು ಹಾಗೂ ನಿರ್ಮಾಪಕರು ಅವಕಾಶದ ಹೆಸರಿನಲ್ಲಿ ತಮ್ಮ ಬಯಕೆಗಳನ್ನು ಈಡೇರಿಸುವಂತೆ ನಟಿಯರನ್ನು ಕೇಳುವುದು ಸಿನಿ ಇಂಡಸ್ಟ್ರಿಗೆ ಅಂಟಿಕೊಂಡಿರುವ ಶಾಪವಾಗಿದೆ. ಬಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್ ಮತ್ತು ಮಾಲಿವುಡ್ನಲ್ಲಿ ನಡೆಯುವ ಕಾಸ್ಟಿಂಗ್ ಕೌಚ್ಗೆ ಅನೇಕ ಕಲಾವಿದೆಯರು ಸಂತ್ರಸ್ತೆಯರಾಗಿದ್ದಾರೆ. ಇನ್ನು ಕೆಲವರು ಅದನ್ನು ಎದುರಿಸಿದ್ದಾರೆ. ಸಾಕಷ್ಟು ನಟಿಯರು ತಮ್ಮ ಕಹಿ ಅನುಭವಗಳನ್ನು ಧೈರ್ಯವಾಗಿ ಹೇಳಿಕೊಂಡಿದ್ದಾರೆ. ಇದೀಗ ಟಾಲಿವುಡ್ನ ನಟಿ ಗಾಯತ್ರಿ ಗುಪ್ತಾ ಅವರು ಸಿನಿಮಾ ರಂಗದ ಕರಾಳ ಸತ್ಯವನ್ನು ಬಹಿರಂಗಪಡಿಸಿದ್ದಾರೆ.
ಗಾಯತ್ರಿ ಅವರು ತೆಲುಗು ಚಿತ್ರರಂಗದ ಖ್ಯಾತ ನಟಿ. ಫಿದಾ ಚಿತ್ರದಲ್ಲಿ ಬಹುಭಾಷಾ ಸಾಯಿ ಪಲ್ಲವಿಯ ಸ್ನೇಹಿತೆಯಾಗಿ ನಟಿಸಿ, ಒಳ್ಳೆಯ ಹೆಸರು ಗಳಿಸಿದ್ದರು. ಈ ಸಿನಿಮಾದ ನಂತರ ಒಳ್ಳೆಯ ಅವಕಾಶಗಳು ಸಿಕ್ಕವು. ಅಮರ್ ಅಕ್ಬರ್ ಆಂಟೋನಿ, ಬುರ್ರಕಥಾ, ಐಸ್ ಕ್ರೀಮ್-2, ದುಬೈ ರಿಟರ್ನ್, ಪ್ರೇಮ ಕಥಾ, ಸೀತಾ ಆನ್ ದಿ ರೋಡ್ ಹಾಗೂ ಕಿಸ್ ಕಿಸ್ ಬ್ಯಾಂಗ್ ಬ್ಯಾಂಗ್ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಸುದೀರ್ಘ ಗ್ಯಾಪ್ ನಂತರ ಗಾಯತ್ರಿ ಗುಪ್ತಾ ದಯಾ ವೆಬ್ ಸರಣಿಯೊಂದಿಗೆ ಡಿಜಿಟಲ್ ಪ್ರವೇಶ ಮಾಡಿದರು. ಇದರಲ್ಲಿ ಅವರು ಸಂತ್ರಸ್ತೆಯ ಪಾತ್ರದಲ್ಲಿ ನಟಿಸಿದ್ದಾರೆ. ಅದನ್ನೇ ಇಟ್ಟುಕೊಂಡು ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಗಾಯತ್ರಿ ಸೆನ್ಸೇಷನಲ್ ಕಾಮೆಂಟ್ಸ್ ಮಾಡಿದ್ದಾರೆ.
ಈ ಹಿಂದೆ ನನ್ನ ಕಾಸ್ಟಿಂಗ್ ಕೌಚ್ ಹೋರಾಟವನ್ನು ಯಾರೂ ಬೆಂಬಲಿಸಿರಲಿಲ್ಲ. ನಂತರ, ನನ್ನಂತೆ ಇತರರು ಹೋರಾಡಿದ್ದರಿಂದ, ಉದ್ಯಮವು ಸ್ಪಂದಿಸಿತು ಮತ್ತು ಸಮಿತಿಯನ್ನು ರಚಿಸಿತು, ಅದು ನಂತರ ಅನೇಕ ಸಂತ್ರಸ್ತರಿಗೆ ವೇದಿಕೆಯಾಯಿತು. ಆದರೆ, ಇಂಡಸ್ಟ್ರಿಯಲ್ಲಿ ಇನ್ನೂ ಕಾಸ್ಟಿಂಗ್ ಕೌಚ್ ಇದೆ ಎಂದು ನಾನು ಬಲವಾಗಿ ಹೇಳುತ್ತೇನೆ, ಆದರೆ ಅನೇಕ ನಾಯಕಿಯರು ಸ್ವಇಚ್ಛೆಯಿಂದಲೇ ಸೆಕ್ಸ್ ಮಾಡುತ್ತಿದ್ದಾರೆ. ಕೆಲವರು ಅವಶ್ಯಕತೆಯಿಂದ ಇಂತಹ ವಿಷಯಗಳನ್ನು ಒಪ್ಪಿಕೊಳ್ಳುತ್ತಾರೆ ಮತ್ತು ಅವರಲ್ಲಿ ಹೆಚ್ಚಿನವರು ಮುಗ್ಧ ಹುಡುಗಿಯರು ಎಂದು ಗಾಯತ್ರಿ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಖಿನ್ನತೆಗೆ ಒಳಗಾಗಿ, ಸಂಧಿವಾತದಿಂದ ಹೋರಾಡುತ್ತಿದ್ದೇನೆ ಎಂದು ಅವರು ಹೇಳಿದರು. ಆದರೆ ಈಗ ರೋಗ ಉಲ್ಬಣಗೊಂಡಿದ್ದು, ಚಿಕಿತ್ಸೆಗೆ 12 ಲಕ್ಷ ರೂ. ಅಗತ್ಯವಿದೆ. ಈವರೆಗೆ 1.5 ಲಕ್ಷ ರೂ. ಮಾತ್ರ ಇದೆ. ಯಾರಾದರೂ ದಾನಿಗಳು ಸಹಾಯ ಮಾಡುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಗಾಯತ್ರಿ ವಿನಂತಿಸಿದ್ದಾರೆ. ಸದ್ಯ ಗಾಯತ್ರಿ ಅವರು ಮಾತುಗಳು ಟಾಲಿವುಡ್ ಗಲ್ಲಿಯಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. (ಏಜೆನ್ಸೀಸ್)