ಸಿನಿವಾಣಿ

ನ.19ಕ್ಕೆ ಗಗವೃವಾ: ಹಬ್ಬಕ್ಕೆ ಬಿಡುಗಡೆ ಆಯ್ತು ಟ್ರೇಲರ್​

ಬೆಂಗಳೂರು: ಕೆಲವೇ ದಿನಗಳ ಹಿಂದೆ ರಾಜ್​ ಬಿ. ಶೆಟ್ಟಿ ನಿರ್ದೇಶನದ "ಗರುಡ ಗಮನ ವೃಷಭ ವಾಹನ' ಚಿತ್ರಕ್ಕೆ ರತ್​ ಶೆಟ್ಟಿ ಕೈ ಜೋಡಿಸಿದ್ದಾರೆ ಮತ್ತು ಪರಂವಾ ಪಿಕ್ಚರ್ಸ್​ ನಡಿ ಬಿಡುಗಡೆ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಈಗ ಚಿತ್ರದ ಬಿಡುಗಡೆಯ ದಿನಾಂಕವೂ ಹೊರಬಿದ್ದಿದೆ.

ನವೆಂಬರ್​ 19ರಂದು ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿಜಯದಶಮಿಯಂದು ಚಿತ್ರದ ಟ್ರೇಲರ್​ ಬಿಡುಗಡೆಯಾಗುತ್ತದೆ ಎಂದು ಚಿತ್ರತಂಡದವರು ಘೋಷಿಸಿದ್ದರು. ಅಷ್ಟೇ ಅಲ್ಲ, ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸುವುದಾಗಿಯೂ ಹೇಳಿದ್ದರು. ಅದರಂತೆ ಶುಕ್ರವಾರ ಟ್ರೇಲರ್​ ಬಿಡುಗಡೆಯಾಗಿದ್ದು, ಅದರಲ್ಲೇ ಬಿಡುಗಡೆಯ ದಿನಾಂಕವನ್ನು ಸಹ ಘೋಷಿಸಲಾಗಿದೆ.

"ಒಂದು ಮೊಟ್ಟೆಯ ಕಥೆ' ನಂತರ ರಾಜ್​ ಬಿ. ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿ, ನಟಿಸಿರುವ "ಗರುಡ ಗಮನ ವೃಷಭ ವಾಹನ' ಚಿತ್ರದಲ್ಲಿ ರಿಷಬ್​ ಶೆಟ್ಟಿ ಸಹ ಒಂದು ಪ್ರಮುಖ ಪಾತ್ರ ವಹಿಸಿದ್ದಾರೆ. ಕರಾವಳಿಯ ಹಿನ್ನೆಲೆಯಲ್ಲಿ ಸಾಗುವ ಈ ಕಥೆಯಲ್ಲಿ ಇಬ್ಬರು ಸ್ನೇಹಿತರು ಕಾಲಾನುಕ್ರಮದಲ್ಲಿ ಹೇಗೆ ಬದ್ಧ ವೈರಿಗಳಾಗಿ ಬದಲಾಗುತ್ತಾರೆ ಎಂದು ತೋರಿಸಲಾಗಿದೆ. ಚಿತ್ರಕ್ಕೆ ಮಿಥುನ್​ ಮುಕುಂದನ್​ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ. ಪ್ರವಿಣ್​ ಶ್ರೀಯಾನ್​ ಅವರ ಛಾಯಾಗ್ರಹಣ ಮತ್ತು ಸಂಕಲನವಿದೆ.