ಮೇಘಾ ಶೆಟ್ಟಿ, ಗಣೇಶ್, ರಚನಾ ಇಂದರ್ 
ಸಿನಿವಾಣಿ

ಇವರನ್ನೂ ಪಾಸ್ ಮಾಡಿ!; ಮೂವರು ನಾಯಕಿಯರ ಜತೆ ಗಣೇಶ್ ರೈಡಿಂಗ್

ಬೆಂಗಳೂರು: ಚಂದನವನದ ಗಲ್ಲಾಪೆಟ್ಟಿಗೆ ಮೇಲೆ ಕುಳಿತು ಯಶಸ್ವಿಯಾಗಿ ‘ಗಾಳಿಪಟ 2’ ಹಾರಿಸಿದ ಬಳಿಕ ಗಣೇಶ್ ‘ತ್ರಿಬಲ್ ರೈಡಿಂಗ್’ ಮಾಡುತ್ತಾ ವಾಪಸ್ಸಾಗಿದ್ದಾರೆ. ಮಹೇಶ್ ನಿರ್ದೇಶನದ, ಗಣೇಶ್ ನಾಯಕನಾಗಿರುವ ಚಿತ್ರ ‘ತ್ರಿಬಲ್ ರೈಡಿಂಗ್’. ಈ ಚಿತ್ರದ ‘ಯಟ್ಟಾ ಯಟ್ಟಾ ...’ ಎಂಬ ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗಣೇಶ್, ‘‘ಗಾಳಿಪಟ 2’ ನಿರ್ವಪಕರನ್ನು ಪಾಸ್ ಮಾಡಿದಂತೆಯೇ ಈ ಚಿತ್ರದ ಹೊಸ ನಿರ್ವಪಕರನ್ನೂ ಪಾಸ್ ಮಾಡಿ ಎಂದು ಕೇಳಿಕೊಳ್ಳುತ್ತೇನೆ. ಬೈಕ್​ನಲ್ಲಿ ತ್ರಿಬಲ್ ರೈಡಿಂಗ್ ಹೋಗುವುದು ತಪು್ಪ. ಅಕಸ್ಮಾತ್ತಾಗಿ ಹೋದರೆ ಏನೆಲ್ಲಾ ಕಷ್ಟಗಳು, ಟ್ವಿಸ್ಟ್​ಗಳು ಆಗುತ್ತವೆ ಎಂಬುದೇ ನಮ್ಮ ಸಿನಿಮಾ. ‘ಮುಂಗಾರು ಮಳೆ’ ಚಿತ್ರದ ಸಮಯದಲ್ಲಿ ಸಹ ನಿರ್ದೇಶಕ ಮಹೇಶ್ ಕಥೆ ಮಾಡಿಕೊಂಡು ಬರುತ್ತೇನೆ ಎಂದು ಹೇಳಿದ್ದರು. ಅದಾಗಿ 14 ವರ್ಷಗಳ ಬಳಿಕ ಕಥೆ ಮಾಡಿಕೊಂಡು ಬಂದರು. ಅದೇ ಈ ‘ತ್ರಿಬಲ್ ರೈಡಿಂಗ್’ ಎಂದರು.

ಚಿತ್ರದಲ್ಲಿ ಗಣೇಶ್​ಗೆ ಅದಿತಿ ಪ್ರಭುದೇವ, ಮೇಘಾ ಶೆಟ್ಟಿ ಮತ್ತು ರಚನಾ ಇಂದರ್ ಮೂವರು ನಾಯಕಿಯರು. ಮೊದಲು ಮಾತನಾಡಿದ ಮೇಘಾ ಶೆಟ್ಟಿ, ‘ಇದು ನನ್ನ ಮೊದಲ ಸಿನಿಮಾ. ನಾನಿಲ್ಲಿ ರಕ್ಷಿತಾ ಎಂಬ ವೈದ್ಯೆಯ ಪಾತ್ರದಲ್ಲಿ ನಟಿಸಿದ್ದೇನೆ’ ಎಂದು ಮಾತು ಮುಗಿಸಿದರು. ನಂತರ ಮಾತನಾಡಿದ ಮತ್ತೊಬ್ಬ ನಾಯಕಿ ರಚನಾ ಇಂದರ್, ‘‘ಲವ್ ಮಾಕ್​ಟೇಲ್’ ಬಳಿಕ ಒಪ್ಪಿಕೊಂಡ ಚಿತ್ರವಿದು. ಶೂಟಿಂಗ್ ಸಮಯದಲ್ಲಿ ತುಂಬ ಟೇಕ್ಸ್ ತೆಗೆದುಕೊಂಡರೂ ಗಣೇಶ್ ಸರ್ ಸಪೋರ್ಟ್ ಮಾಡುತ್ತಿದ್ದರು. ನನಗೆ ತುಂಬ ಹತ್ತಿರದ ಸ್ಪೆಷಲ್ ಚಿತ್ರ’ ಎಂದರು.

‘ಯಟ್ಟ ಯಟ್ಟ’ ಹಾಡು ಬರೆದು ಸಂಗೀತ ನೀಡಿರುವುದರ ಜತೆಗೆ ಧ್ವನಿಯಾಗಿರುವ ಚಂದನ್ ಶೆಟ್ಟಿ, ‘‘ಆಟೋ ಶಂಕರ್’, ‘ದಿಲ್ ರಂಗೀಲಾ’ ಬಳಿಕ ಈಗ ‘ಟ್ರಿಪಲ್ ರೈಡಿಂಗ್’ನಲ್ಲಿ ಗಣೇಶ್ ಸರ್​ಗೆ ಮೂರನೇ ಹಾಡು ‘ಯಟ್ಟ ಯಟ್ಟ ಯಟ್ಟ’ ಬರೆದಿದ್ದೇನೆ’ ಎಂದರು.

ಕೊನೆಯಲ್ಲಿ ಮಾತನಾಡಿದ ನಿರ್ದೇಶಕ ಮಹೇಶ್, ‘ಇದು ಸ್ವಮೇಕ್ ಚಿತ್ರ. ಪಕ್ಕಾ ಕಮರ್ಷಿಯಲ್ ಸಿನಿಮಾ. ಲವ್, ಆಕ್ಷನ್, ಕಾಮಿಡಿ, ಸ್ವಲ್ಪ ಸೆಂಟಿಮೆಂಟ್, ಸ್ವಲ್ಪ ಸಸ್ಪೆನ್ಸ್ ಎಲ್ಲವೂ ಸೇರಿವೆ. ಬೆಂಗಳೂರು, ಮೈಸೂರು, ಚಿತ್ರದುರ್ಗ ಹಾಗೂ ಚಿಕ್ಕಮಗಳೂರಿನಲ್ಲಿ 60 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು.

ಗಣೇಶ್, ರಚನಾ ಇಂದರ್, ಮೇಘಾ ಶೆಟ್ಟಿ, ಅದಿತಿ ಪ್ರಭುದೇವ ಜತೆಗೆ ಸಾಧು ಕೋಕಿಲ, ರಂಗಾಯಣ ರಘು, ಕುರಿ ಪ್ರತಾಪ್, ಅಚ್ಯುತ್ ಕುಮಾರ್, ರವಿಶಂಕರ್, ಅರವಿಂದ್ ಬೋಳಾರ್, ಶರತ್ ಲೋಹಿತಾಶ್ವ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.