ಬೆಂಗಳೂರು: ಕಳೆದ ವರ್ಷ ಗಣೇಶ್ ಅಭಿನಯದ ಮೂರು ಚಿತ್ರಗಳು ಬಿಡುಗಡೆಯಾಗಿದ್ದವು. ಈ ವರ್ಷ ಸಹ ಗಣೇಶ್ ಅಭಿನಯದ ಒಂದೆರೆಡು ಚಿತ್ರಗಳು ಬಿಡುಗಡೆಯಾಗಬಹುದು ಎಂಬ ನಿರೀಕ್ಷೆಯಲ್ಲಿರುವಾಗಲೇ, ಲಾಕ್ಡೌನ್ನಿಂದಾಗಿ ಅದು ಈಡೇರಲಿಲ್ಲ. ಈ ವರ್ಷ ಗಣೇಶ್ ಅಭಿನಯದ ಯಾವೊಂದು ಚಿತ್ರ ಬಿಡುಗಡೆಯಾಗದಿದ್ದರೂ, ಸಿನಿಮಾ ಚಿತ್ರೀಕರಣ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ವರ್ಷದ ಆರಂಭದಲ್ಲೇ ಗಣೇಶ್, ‘ತ್ರಿಬಲ್ ರೈಡಿಂಗ್’ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಇತ್ತು. ಈ ಚಿತ್ರದ ಚಿತ್ರೀಕರಣ ಇಂದಿನಿಂದ ಶುರುವಾಗಿದ್ದು, ಎಂಟು ತಿಂಗಳ ನಂತರ ಕ್ಯಾಮರಾ ಎದುರಿಸುತ್ತಿರುವುದಕ್ಕೆ ಭಾವುಕವಾಗಿ ಬರೆದುಕೊಂಡಿದ್ದಾರೆ.
‘ನನ್ನ ಆತನ ಜೊತೆಗಿನ ಸಂಬಂಧ ಈ ಜನ್ಮಕ್ಕೆ ದೇವರು ಕೊಟ್ಟ ವರವೇ ಇರಬೇಕು. ನಾ ನಕ್ಕಾಗ ನಕ್ಕು, ಅತ್ತಾಗ ಅತ್ತು, ನನ್ನನ್ನು ನಿಮಗೆ ಅದ್ಭುತವಾಗಿ ತೋರಿಸಿದ. ಆ ಸಲುಗೆಗೆ ಅದಾವ ಕಣ್ಣು ತಗುಲಿತ್ತೊ. 6ತಿಂಗಳ ಕಾಲ ದೂರಾಗಿ ಈಗ ಎದುರಾಗಿದ್ದೇವೆ. ಆತ ಬೇರಾರಲ್ಲ ಬದುಕಿನ ಭಾಗ ಕ್ಯಾಮೆರಾ. ತ್ರಿಬಲ್ ರೈಡಿಂಗ್ ಚಿತ್ರೀಕರಣ ಶುರು. ನಿಮ್ಮ ಹಾರೈಕೆಯಿರಲಿ’ ಎಂದಿದ್ದಾರೆ.
ಅಂದಹಾಗೆ, ಈ ಹಿಂದೆ ವಿನೋದ್ ಪ್ರಭಾಕರ್ ಅವರ ರಗಡ್ ಚಿತ್ರ ನಿರ್ದೇಶಿಸಿದ್ದ ಮಹೇಶ್ ಗೌಡ, ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಯೋಗರಾಜ್ ಭಟ್ ನಿರ್ದೇಶನದ ‘ಮುಂಗಾರು ಮಳೆ’ ಚಿತ್ರಕ್ಕೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ಮಹೇಶ್ ಅವರಿಗೆ ಆಗಿನಿಂದಲೂ ಗಣೇಶ್ ಅಭಿನಯದಲ್ಲಿ ಒಂದು ಚಿತ್ರ ನಿರ್ದೇಶಿಸಬೇಕು ಎಂಬ ಆಸೆ ಇತ್ತಂತೆ. ಅದು ಈಗ ಕೂಡಿ ಬಂದಿದ್ದು, ಶೂಟಿಂಗ್ ಸಹ ಶುರುವಾಗಿದೆ.
ಇದನ್ನೂ ಓದಿ: ಸ್ಯಾಂಡಲ್ವುಡ್ಗೆ ಮತ್ತೆ ಪ್ರಭುದೇವ
ಕಾಮಿಡಿ, ಲವ್, ಆಕ್ಷನ್ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವಿರುವ ಈ ಚಿತ್ರಕ್ಕೆ ನಾಯಕಿಯಾಗಿ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ನಟಿಸುವುದು ಅಧಿಕೃತವಾಗಿದೆ. ಮಿಕ್ಕಂತೆ ಸಾಧು ಕೋಕಿಲ, ರವಿಶಂಕರ್ ಗೌಡ, ಕುರಿ ಪ್ರತಾಪ್ ‘ತ್ರಿಬಲ್ ರೈಡಿಂಗ್’ ಚಿತ್ರದಲ್ಲಿದ್ದಾರೆ. ರಾಮ್ಗೋಪಾಲ್ ಎನ್ನುವವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸಾಯಿಕಾರ್ತಿಕ್ ಮ್ಯೂಸಿಕ್ ಕಂಪೋಸ್ ಮಾಡಿದರೆ, ಆನಂದ್ ಛಾಯಾಗ್ರಹಣ ಮಾಡುತ್ತಿದ್ದಾರೆ.