ಇಂದು ಕನ್ನಡದ ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರ ಹುಟ್ಟುಹಬ್ಬ. ‘ನಾಗರಹೊಳೆ’, ‘ಅಂತ’, ‘ಸಿಂಹದ ಮರಿ ಸೈನ್ಯ’, ‘ಗಂಡು ಭೇರುಂಡ’, ‘ಬಂಧನ’, ‘ಮುತ್ತಿನ ಹಾರ’ ಮುಂತಾದ ಹಲವು ವಿಭಿನ್ನ ಮತ್ತು ಅಪರೂಪದ ಚಿತ್ರಗಳನ್ನು ಕನ್ನಡಕ್ಕೆ ಕೊಟ್ಟವರು ಅವರು. ಈ ಪೈಕಿ, ‘ಗಂಡು ಭೇರುಂಡ’ ಚಿತ್ರವನ್ನು ಹಾಲಿವುಡ್ನ ಗ್ರೆಗರಿ ಪೆಕ್ ಅಭಿನಯದ ‘ಮೆಕೆನ್ನಾಸ್ ಗೋಲ್ಡ್’ ನಿಂದ ಸ್ಪೂರ್ತಿಪಡೆದು ನಿರ್ದೇಶಿಸಿದ್ದರು. ಹಸ್ತದ್ವೀಪ ಎನ್ನುವ ದೂರದ ನಿಗೂಢ ದ್ವೀಪದಲ್ಲಿ
ಅಡಗಿಸಿಟ್ಟಿರುವ ನಿಧಿಯೊಂದನ್ನು ಅರಸಿ ಹೋಗುವ ಈ ಸಾಹಸಮಯ ಚಿತ್ರದಲ್ಲಿ ಶ್ರೀನಾಥ್, ಅಂಬರೀಷ್, ಶಂಕರ್ ನಾಗ್, ವಜ್ರಮುನಿ, ಲಕ್ಷ್ಮೀ, ಅಮರೀಶ್ ಪುರಿ, ಜಯಮಾಲಾ ಮುಂತಾದವರು ನಟಿಸಿದ್ದರು. ಬಾಲಿವುಡ್ ಮಂದಿಯೇ ಇಂಥದ್ದೊಂದು ಚಿತ್ರ ಮಾಡುವುದಕ್ಕೆ ಹೆದರುತ್ತಿದ್ದ ಸಂದರ್ಭದಲ್ಲಿ ಬಾಬು ಇಂಥದ್ದೊಂದು ಚಿತ್ರವನ್ನು ಕನ್ನಡದಲ್ಲಿ ನಿರ್ದೇಶಿಸಿದ್ದರು. ಈ ಚಿತ್ರ ಬಿಡುಗಡೆಯಾಗಿ ಮೂರು ವರ್ಷಗಳ ನಂತರ ಹಿಂದಿಯಲ್ಲಿ ಇದೇ ಮಾದರಿಯ ‘ಕಜಾನಾ’ ಎಂಬ ಚಿತ್ರ ಬಿಡುಗಡೆಯಾಗಿತ್ತು.