ಸಿನಿವಾಣಿ

ಗಂಧದ ಗುಡಿಯಲ್ಲಿ ನೆಲದ ಘನತೆ; ಪುನೀತ್ ಕನಸಿನ ಚಿತ್ರದ ಟೀಸರ್ ಬಿಡುಗಡೆ

Webdesk - Ravikanth

ಬೆಂಗಳೂರು: ಕಾನನದ ಜೀವ ವೈವಿಧ್ಯತೆ, ಪ್ರಾಕೃತಿಕ ಶ್ರೀಮಂತಿಕೆ. ಪ್ರಾಣಿ ಸಂಕುಲ, ಕಾಡಿನೊಳಗಿನ ಮನುಷ್ಯ ಸಂಕುಲ, ಆ ಭಾಗದ ಭಾಷೆ, ಆಹಾರ, ಜೀವನ ಶೈಲಿ ... ಹೀಗೆ ಎಲ್ಲವನ್ನೂ ನಾಡಿನ ಜನರಿಗೆ ತೋರಿಸಬೇಕೆಂಬ ಮಹದಾಸೆ ನಟ ಪುನೀತ್ ರಾಜಕುಮಾರ್ ಅವರದಾಗಿತ್ತು. ಹಾಗಾಗಿಯೇ ಕಳೆದೊಂದು ವರ್ಷದಿಂದ ಕಾಡು-ಮೇಡು ಸುತ್ತುವುದರಲ್ಲಿಯೇ ಹೆಚ್ಚು ಸಮಯ ಕಳೆದಿದ್ದರು. ಆ ಕನಸೀಗ ಸಾಕಾರವಾಗಿದೆ. ಆದರೆ, ಅದನ್ನು ಕಣ್ತುಂಬಿಕೊಳ್ಳಲು ಅವರೇ ಇಲ್ಲವೆಂಬುದು ಮಾತ್ರ ವಿಪರ್ಯಾಸ!

ಹೌದು, ಸೋಮವಾರ ಪಾರ್ವತಮ್ಮ ರಾಜಕುಮಾರ್ ಅವರ ಜಯಂತಿ ಪ್ರಯುಕ್ತ ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಶೀರ್ಷಿಕೆ ಟೀಸರ್ ಬಿಡುಗಡೆ ಆಗಿದೆ. ಒಂದು ನಿಮಿಷ 20 ಸೆಕೆಂಡ್ ಟೀಸರ್​ನಲ್ಲಿ ನಾಡಿನ ದಟ್ಟಾರಣ್ಯದ ಅಚ್ಚರಿ ಮತ್ತು ಕರ್ನಾಟಕದ ಸೊಬಗಿನ ಗುಚ್ಛವನ್ನು ತೆರೆದಿಡಲಾಗಿದೆ. ಪುನೀತ್ ಅವರ ಈ ಸಾಹಸಕ್ಕೆ ಕೈ ಜೋಡಿಸಿದ್ದು, ವನ್ಯಜೀವಿ ಛಾಯಾಗ್ರಾಹಕ ಅಮೋಘವರ್ಷ. ಈ ಬಗ್ಗೆ ಮಾಹಿತಿ ನೀಡುವ ಅಮೋಘವರ್ಷ, ‘ಇಡೀ ಚಿತ್ರದಲ್ಲಿ ರಾಜ್ಯದ ಹಲವು ಭಾಗಗಳ ಕಥೆಗಳಿವೆ. ಅಲ್ಲಿನ ವಿಶೇಷತೆಗಳಿವೆ. ಕಥೆಗಳೂ ತೆರೆದುಕೊಳ್ಳುತ್ತವೆ. ಭಾವನಾತ್ಮನ ನಂಟಿನ ಸೆಳೆತವೂ ಇದೆ. ಬಹುತೇಕ ಇಡೀ ಕರ್ನಾಟಕವನ್ನೇ ಅಪು್ಪ ಅವರೊಂದಿಗೆ ಪರ್ಯಟನೆ ಮಾಡಿದ್ದೇ ನನ್ನ ಜೀವಮಾನದ ಸಾಧನೆ. ಸಾಮಾನ್ಯನಂತೆ ನಮ್ಮ ಜತೆ ಅವರು ಕಳೆದ ರೀತಿ ನಿಜಕ್ಕೂ ಅವರ ಸರಳತೆಗೆ ಹಿಡಿದ ಕನ್ನಡಿ. ಮೇಕಪ್ ಇಲ್ಲದೆ ಈ ಚಿತ್ರದಲ್ಲಿ ಅವರು ಕಾಣಿಸಿದ್ದಾರೆ. ಸದ್ಯ ಇದು ಶೀರ್ಷಿಕೆ ಟೀಸರ್ ಮಾತ್ರ. ಹೇಳಹೊರಟಿರುವುದು ಸಾಕಷ್ಟಿದೆ. ಅಪು್ಪ ಅವರ ಈ ಕನಸು ಎಲ್ಲರಿಗೂ ಇಷ್ಟವಾಗಲಿದೆ’ ಎಂದು ಮಾಹಿತಿ ನೀಡುತ್ತಾರೆ. 2022ರಲ್ಲಿ ಚಿತ್ರಮಂದಿರದಲ್ಲಿ ಈ ಸಾಕ್ಷ್ಯಚಿತ್ರ ತೆರೆಕಾಣಲಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.

ಗಾಜನೂರಿನಲ್ಲೂ ಶೂಟಿಂಗ್: ಡಾ.ರಾಜ್​ಕುಮಾರ್ ತವರೂರು ಗಾಜನೂರಿನಲ್ಲಿರುವ ಬೀಳುಬಿಟ್ಟ ಆಲದ ಮರದ ಬಳಿಯೂ ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಚಿತ್ರೀಕರಣ ಮಾಡಲಾಗಿದೆ. ಡಾ.ರಾಜ್ ಇಲ್ಲಿಗೆ ಬಂದಾಗಲೆಲ್ಲ ಆಲದ ಮರದಡಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದರು, ಧ್ಯಾನಿಸುತ್ತಿದ್ದರು. ಆ ಕಾರಣಕ್ಕೆ ತಂದೆಯೊಂದಿಗೆ ಭಾವನಾತ್ಮಕ ನಂಟು ಬೆಸೆದಿರುವ ಜಾಗಕ್ಕೂ ಸಾಕ್ಷ್ಯಚಿತ್ರದಲ್ಲಿ ಜಾಗ ಕಲ್ಪಿಸಿದ್ದಾರೆ.

ಆ ನಗು ನೋಡಿ ಕರುಳು ಚುರ್ ಅಂತು!: ಟೀಸರ್ ನೋಡಿದ ಶಿವಣ್ಣ, ಅಪು್ಪ ಕೆಲಸದ ಬಗ್ಗೆ ಮತ್ತೆ ಮಾತನಾಡಿದ್ದಾರೆ. ‘ಸ್ಕ್ರೀನ್ ಮೇಲೆ ಅವನನ್ನು ನೋಡಿದಾಗ ಆತ ಎಲ್ಲೂ ಹೋಗಿಲ್ಲ. ಇನ್ನೂ ಜೀವಂತವಾಗಿದ್ದಾನೆ ಅನಿಸುತ್ತಿದೆ. ಟೀಸರ್​ನಲ್ಲಿ ಅವನ ನಗು ನೋಡ್ತಿದ್ದಂತೆ ನನ್ನ ಕರುಳು ಚುರ್ ಅಂತು. ಇಂಥ ಪ್ರಾಜೆಕ್ಟ್ ಮಾಡುತ್ತಿದ್ದೇನೆ ಎಂದು ನನ್ನ ಗಮನಕ್ಕೂ ತಂದಿದ್ದ. ನಿಜಕ್ಕೂ ಇಂಥ ತಮ್ಮನನ್ನು ಪಡೆದಿದ್ದೇ ನನ್ನ ಪುಣ್ಯ’ ಎಂದಿದ್ದಾರೆ.

ನಮ್ಮೆಲ್ಲರ ಪ್ರೀತಿಯ ಪುನೀತ್ ರಾಜಕುಮಾರ್ ಅಭಿನಯದ ‘ಗಂಧದ ಗುಡಿ’ ಒಂದು ಅದ್ಭುತ ಕಲಾಕೃತಿ. ನಾಡಿನ ಪ್ರಾಕೃತಿಕ ಶ್ರೀಮಂತಿಕೆ, ಜೀವಸಂಕುಲ, ಬುಡಕಟ್ಟು ಜನರ ಸಂಸ್ಕೃತಿಗಳನ್ನು ಪರಿಚಯಿಸುವ ಮೂಲಕ, ವಿಶಿಷ್ಟ ರೀತಿಯಲ್ಲಿ ಕಥೆಯೊಂದನ್ನು ಹೇಳುತ್ತಿದೆ. ಈ ಅದ್ಬುತ ದೃಶ್ಯ ಕಾವ್ಯ ಎಲ್ಲರಿಗೂ ತಲುಪಲಿ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ