ಸಿನಿವಾಣಿ

ಕಥೆ ಕದ್ದರಾ ಆಮಿರ್​ ಖಾನ್​ ಮಾಜಿ ಪತ್ನಿ ಕಿರಣ್ ರಾವ್? ಫ್ರೆಂಚ್ ನಿರ್ದೇಶಕನ ಆರೋಪವೇನು?

ಬಾಲಿವುಡ್​ ನಟ ಆಮಿರ್​ ಖಾನ್​ ನಿರ್ಮಾಣದ, ಅವರ ಮಾಜಿ ಪತ್ನಿ ಕಿರಣ್​ ರಾವ್​ ನಿರ್ದೇಶನದ ಸಿನಿಮಾ "ಲಾಪತಾ ಲೇಡೀಸ್​'. ಚಿತ್ರವು ಬಾಕ್ಸಾಫಿಸ್​ನಲ್ಲಿ ಭರ್ಜರಿ ಗಳಿಕೆ ಮಾಡಿಕೊಂಡಿದ್ದಲ್ಲದೇ, ಭಾರತದಿಂದ ಅಧಿಕೃತವಾಗಿ ಆಸ್ಕರ್​ಗೂ ಆಯ್ಕೆ ಮಾಡಲಾಗಿತ್ತು. ಆದರೆ, ಕೊನೆಯ ಸುತ್ತು ತಲುಪುವಲ್ಲಿ ಸಿನಿಮಾ ಸೋತಿತ್ತು. ಇದೀಗ ಈ ಚಿತ್ರದ ಬಗ್ಗೆ ಫ್ರೆಂಚ್​ ನಿರ್ದೇಶಕ ಫ್ಯಾಬ್ರಿಸ್​ ಬ್ರಾಕ್ಖ್​ ಅಪಸ್ವರ ಎತ್ತಿದ್ದಾರೆ.

ಫ್ಯಾಬ್ರಿಸ್​ ನಿರ್ದೇಶನದ ಕಿರುಚಿತ್ರ "ಬುರ್ಕಾ ಸಿಟಿ'ಗೂ, "ಲಾಪತಾ ಲೇಡೀಸ್​'ಗೂ ಹಲವು ಸಾಮ್ಯತೆಗಳಿದ್ದು, "ನನ್ನ ಚಿತ್ರಕ್ಕೂ, ಈ ಸಿನಿಮಾಗೂ ಹೋಲಿಕೆಗಳಿವೆ ಎಂದು ಹಲವರು ಹೇಳುತ್ತಿದ್ದ ಕಾರಣ, ನಾನು "ಲಾಪತಾ ಲೇಡೀಸ್​' ನೋಡಿದೆ. ನನಗೆ ಶಾಕ್​ ಜತೆಗೆ ಬೇಸರವೂ ಆಯಿತು. "ಬುರ್ಕಾ ಸಿಟಿ' ಕಿರುಚಿತ್ರವನ್ನು ಸಿನಿಮಾ ಮಾಡಲು ನಾನು ಕೆಲವರ ಜತೆ ಚರ್ಚಿಸುತ್ತಿದ್ದೆ. ಆದರೆ, ಅದು ಈಗ ಸಾಧ್ಯವೇ ಎಂಬ ಅನುಮಾನ ಶುರುವಾಗಿದೆ. ಈ ಬಗ್ಗೆ "ಲಾಪತಾ ಲೇಡೀಸ್​' ನಿರ್ಮಾಪಕರ ಜತೆ ಮಾತನಾಡಲಿದ್ದೇನೆ' ಎಂದು ಹೇಳಿಕೊಂಡಿದ್ದಾರೆ.

ಫ್ಯಾಬ್ರಿಸ್​ ನಿರ್ದೇಶನದ "ಬುರ್ಕಾ ಸಿಟಿ' ಕಿರುಚಿತ್ರ 2019ರಲ್ಲಿ ರಿಲೀಸ್​ ಆಗಿತ್ತು. 2020ರಲ್ಲಿ ಕೋಲ್ಕತ್ತಾ ಸೇರಿ ಹಲವು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿತ್ತು. ಇನ್ನು 2023ರಲ್ಲಿ ಟೊರಂಟೋ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿದ್ದ ಕಿರಣ್​ ರಾವ್​ ನಿರ್ದೇಶನದ "ಲಾಪತಾ ಲೇಡೀಸ್​', 2024ರ ಮಾರ್ಚ್​ನಲ್ಲಿ ಥಿಯೇಟರ್​ಗಳಲ್ಲಿ ರಿಲೀಸ್​ ಆಗಿತ್ತು.

ಇದೀಗ ಫ್ಯಾಬ್ರಿಸ್​ ಆರೋಪವನ್ನು ಅಲ್ಲಗಳೆದಿರುವ "ಲಾಪತಾ ಲೇಡೀಸ್​' ಕಥೆಗಾರ ಬಿಪ್ಲಬ್​ ಗೋಸ್ವಾಮಿ, "2014ರಲ್ಲೇ ಈ ಕಥೆ ಬರೆದಿದ್ದು, 2018ರಲ್ಲಿ "ಟು ಬೆಡ್ಸ್​' ಹೆಸರಿನಲ್ಲಿ ರಿಜಿಸ್ಟರ್​ ಮಾಡಿಸಿದ್ದೆ. ನಮ್ಮ ಚಿತ್ರದ ಕಥೆ, ಪಾತ್ರಗಳು, ಸಂಭಾಷಣೆ ನೂರಕ್ಕೆ ನೂರರಷ್ಟು ಒರಿಜಿನಲ್​. ಕೃತಿಚೌರ್ಯ ಆರೋಪ ಸತ್ಯಕ್ಕೆ ದೂರವಾದುದು' ಎಂದು ಸ್ಪಷ್ಟನೆ ನೀಡಿದ್ದಾರೆ.